Advertisement

ಗೋಲ್‌ ಮಾಲ್‌

12:17 PM Oct 23, 2017 | |

ಒಂದು ಶಾಪಿಂಗ್‌ ಮಾಲ್‌ನ ವಾಸ್ತುಶೈಲಿ ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಖರೀದಿ ವರ್ತನೆಯನ್ನೇ ಬದಲಿಸಿಬಿಡಬಲ್ಲದು. ಇದಕ್ಕೆ ಮನಃಶಾಸ್ತ್ರದಲ್ಲಿ ಗ್ರುಯೆನ್‌ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಶಾಪಿಂಗ್‌ ಮಾಲ್‌ನ ವಿನ್ಯಾಸವನ್ನು ಉದ್ದೇಶಪೂರ್ವಕವಾಗಿಯೇ ಗೊಂದಲಮಯ ಗೊಳಿಸಿ ಆ ಮೂಲಕ ಗ್ರಾಹಕ ತನ್ನ ಮೂಲೋದ್ದೇಶವನ್ನು ಮರೆತು, ಆ ಕ್ಷಣದ ಪ್ರಚೋದನೆಗೆ ತಕ್ಕಂತೆ ಖರೀದಿ ಮಾಡಿಸುವಂತೆ ಮೋಡಿ ಮಾಡುವುದು. ಎಲ್ಲಾ ಮಾಲ್‌ಗ‌ಳೂ ಈ ಸೂತ್ರವನ್ನೇ ಅನುಸರಿಸುತ್ತಿವೆ! 


“ಮಿಸ್ಟರ್‌ ಬುದ್ಧಿವಂತ’ ಶಾಪಿಂಗ್‌ ಮಾಲ್‌ಗೆ ಹೋಗುತ್ತಾನೆ. 500 ರೂಪಾಯಿ ಬಜೆಟ್‌ ಒಳಗಿನ ಟಿಶರ್ಟ್‌ ಖರೀದಿಸಿ ತರುವುದು ಅವನ ಉದ್ದೇಶ. ಆದರೆ ಶಾಪಿಂಗ್‌ ಮುಗಿಸಿ ಹೊರಬೀಳುವಾಗ ಅವನ ಕೈಯಲ್ಲಿ ಐದಾರು ವಸ್ತುಗಳಿರುತ್ತವೆ. 500 ರೂಪಾಯಿ ಎಂದುಕೊಂಡಿದ್ದ ಅವನ ಬಜೆಟ್‌ 2 ಸಾವಿರ ರೂಪಾಯಿ ತಲುಪಿರುತ್ತದೆ. “ಛೇ, ನನಗೆ ತಿಳಿವಳಿಕೆಯೇ ಇಲ್ಲ…ಸುಮ್ನೆà ಖರ್ಚು ಮಾಡ್ತೀನಿ.’ ಎಂದು  ತನ್ನ ಅನಗತ್ಯ ಖರೀದಿಯನ್ನು ನೋಡಿ ಬೇಸರಿಸಿಕೊಳ್ಳುತ್ತಾನೆ. “ನೆಕ್ಸ್ಟ್ ಟೈಮಿಂದ ತಲೆ ಉಪಯೋಗಿಸಿ, ಯಾವ ಪ್ರಾಡಕ್ಟ್ ಬೇಕೋ ಅದನ್ನಷ್ಟೇ ಖರೀದಿ ಮಾಡ್ತೀನಿ’ ಎಂದು ಸಮಾಧಾನ ಪಟ್ಟುಕೊಂಡು ಮನೆಯ ಹಾದಿ ಹಿಡಿಯುತ್ತಾನೆ. ಆದರೆ, ಮಿಸ್ಟರ್‌ ಬುದ್ಧಿವಂತ ಮುಂದಿನ ಬಾರಿಯೂ ದಡ್ಡತನ ಮೆರೆಯುತ್ತಾನೆ. ಬನಿಯನ್‌ ತರಲು ಹೋದವನು ಬೈನಾಕುಲರ್ಸ್‌ ಖರೀದಿ ಮಾಡಿ ಬಂದು ಯಥಾರೀತಿ ಗೋಳಾಡುತ್ತಾನೆ.  ಹಾಗೆ ನೋಡಿದರೆ ನಾವೆಲ್ಲರೂ ಮಿಸ್ಟರ್‌ ಬುದ್ಧಿವಂತರೇ ಅಲ್ಲವೇ? ಏನೋ ತರಲು ಹೋಗಿ ಇನ್ನೇನೇನನ್ನೋ ತಂದು, ಇನ್ಮುಂದೆ ಅನವಶ್ಯಕ ಖರ್ಚು ಮಾಡುವುದಿಲ್ಲ ಎಂದು ಶಪಥ ಮಾಡಿ ಮುಂದಿನ ಬಾರಿಯೂ ಬಾಯಿ ಬಾಯಿ ಬಡಿದುಕೊಳ್ಳುತ್ತೇವೆ. ಒಟ್ಟಿನಲ್ಲಿ ಪ್ರತಿಬಾರಿಯೂ ಶಾಪಿಂಗ್‌ ಮಾಲ್‌ಗೆ ಕಾಲಿಟ್ಟು, ಅಲ್ಲಿಂದ ಎರಡೂ ಕೈಗಳಲ್ಲಿ
ಬ್ಯಾಗುಗಳನ್ನು ಹೊತ್ತು ಹೊರಬೀಳುವ ವೇಳೆಗೆ ಕುತ್ತಿಗೆಗೆ ಹಾರ ಹಾಕಿಸಿಕೊಂಡು ಮೆರವಣಿಗೆ ಹೊರಡುವ ಕುರಿಯಂತೆಯೇ ನಾವು ಬದಲಾಗಿರುತ್ತೇವೆ.

Advertisement

ಹಾಗೆಂದು ತಪ್ಪೆಲ್ಲ ನಮ್ಮದೇ ಎಂದು ಹೇಳುವಂತಿಲ್ಲ. ಏಕೆಂದರೆ ನಾವೆಲ್ಲ ಅಂದುಕೊಂಡಷ್ಟು ಬುದ್ಧಿವಂತರಲ್ಲ. ಅತಿ ಚತುರ ಮಾರುಕಟ್ಟೆ ವ್ಯವಸ್ಥೆಯು ಪ್ರತಿಯೊಬ್ಬ ಗ್ರಾಹಕನನ್ನೂ ನಿರಂತರವಾಗಿ ಬಕರಾ ಮಾಡುವ ಪ್ರಯತ್ನ ಮಾಡುತ್ತಿರುತ್ತದೆ. ಬಹುತೇಕ ಬಾರಿ ಮಾರುಕಟ್ಟೆ ವ್ಯವಸ್ಥೆಯ ತಂತ್ರವೇ ಈ ಪ್ರಯತ್ನದಲ್ಲಿ ಗೆಲ್ಲುವುದು. ಈಗ ನೇರವಾಗಿ ಮಾಲ್‌ಗ‌ಳ ವಿಷಯಕ್ಕೆ ಬರೋಣ. ಮತ್ತದೇ ಪ್ರಶ್ನೆಯನ್ನು ಕೇಳಿಕೊಳ್ಳಿ. ಯಾವುದೋ ಒಂದು ಉತ್ಪನ್ನ ಖರೀದಿಸಲು ಹೋಗಿ, ಅನೇಕ ಅನಗತ್ಯ ವಸ್ತುಗಳನ್ನು ಖರೀದಿಸುವ ಗುಣ ನಿಮಗಿದೆಯೇ? ಹೌದು, ಎನ್ನುವುದಾದರೆ ಒಂದು ವಿಷಯ ಅರ್ಥಮಾಡಿಕೊಳ್ಳಿ. ಅದು ನಿಮ್ಮ ಜನ್ಮಜಾತ ಗುಣವಲ್ಲ, ಮಾಲ್‌ಗೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿನ ವಾತಾವರಣ ನಿಮ್ಮಲ್ಲಿ ತಾತ್ಕಾಲಿಕವಾಗಿ ಹುಟ್ಟುಹಾಕುವ ಗುಣವದು. 

ಗೊಂದಲಮಯ ವಾಸ್ತುಶೈಲಿ
ಒಂದು ಶಾಪಿಂಗ್‌ ಮಾಲ್‌ನ ವಾಸ್ತುಶೈಲಿ ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಖರೀದಿ ವರ್ತನೆಯನ್ನೇ ಬದಲಿಸಿಬಿಡಬಲ್ಲದು. ಇದಕ್ಕೆ ಮನಃಶಾಸ್ತ್ರದಲ್ಲಿ ಗ್ರುಯೆನ್‌ ಎಫೆಕ್ಟ್ ಅಥವಾ ಗ್ರುಯೆನ್‌ ಟ್ರಾನ್ಸ್‌ಫ‌ರ್‌ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ,
ಶಾಪಿಂಗ್‌ ಮಾಲ್‌ನ ವಿನ್ಯಾಸವನ್ನು ಉದ್ದೇಶಪೂರ್ವಕವಾಗಿ ಗೊಂದಲಮಯ ಗೊಳಿಸಿ ಆ ಮೂಲಕ ಗ್ರಾಹಕ ತನ್ನ 
ಮೂಲೋದ್ದೇಶವನ್ನು ಮರೆತು, ಆ ಕ್ಷಣದ ಪ್ರಚೋದನೆಗೆ ತಕ್ಕಂತೆ ಖರೀದಿ ಮಾಡುವುದು ಗ್ರುಯೆನ್‌ ಎಫೆಕ್ಟ್. ಗ್ರುಯೆನ್‌ ಎಫೆಕ್ಟ್‌ನ ಮತ್ತೂಂದು ಗುಣವೆಂದರೆ ಗ್ರಾಹಕ ಹೆಚ್ಚು ಹೊತ್ತು ಮಾಲ್‌ನಲ್ಲಿ ತಿರುಗಾಡುವಂತೆ (ಎಲ್ಲಿ ಹೋಗಬೇಕೋ ತಿಳಿಯದೆ ಅಲೆದಾಡುವಂತೆ) ಮಾಡುವುದು. ಗ್ರುಯೆನ್‌ ಎಫೆಕ್ಟ್‌ನ ಪರಿಣಾಮದಿಂದಲೇ ನೀವು ಯಾವುದೋ ವಸ್ತು ಖರೀದಿಸಲು ಹೋಗಿ, ಇನ್ಯಾವುದನ್ನೋ ಬಗಲಿಗೆ
ಹಾಕಿಕೊಂಡು ಬರುವುದು.  

“ಹೇ, ನಾನು ಬುದ್ಧಿವಂತ, ನನ್ನ ಮನಸ್ಸನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಿಲ್ಲ’ ಎಂಬ ಭ್ರಮೆಯಲ್ಲಿ ನೀವಿದ್ದರೆ ಶಾಪಿಂಗ್‌ ಮಾಲ್‌ಗ‌ಳು ತಮ್ಮ ಪ್ರಯತ್ನದಲ್ಲಿ ಧನ್ಯ. ಸುಮ್ಮನೇ ಒಮ್ಮೆ ಯೋಚಿಸಿ ನೋಡಿ. ಯಾವುದೇ ವಾಸ್ತು ವಿನ್ಯಾಸವಿರಲಿ, ಅದು ನಿಮ್ಮ ಮನಸ್ಸನ್ನು ಪ್ರಫ‌ುಲ್ಲಗೊಳಿಸಬಲ್ಲದು, ಇಲ್ಲವೇ ಮುದುಡುವಂತೆ ಮಾಡಬಲ್ಲದು. ಇದೇ ಅಂಶದ ಆಧಾರದ ಮೇಲೆಯೇ
ಶಾಪಿಂಗ್‌ ಮಾಲ್‌ ಅನ್ನು ವಿನ್ಯಾಸಗೊಳಿಸಲಾಗುತ್ತದೆ. ಮೂಲತಃ ಆಸ್ಟ್ರಿಯನ್‌ ವಾಸ್ತುಶಿಲ್ಪಿಯಾದ ವಿಕ್ಟರ್‌ ಗ್ರುಯೆನ್‌ನನ್ನು ಗ್ರುಯೆನ್‌ ಎಫೆಕ್ಟ್‌ನ ಪಿತಾಮಹನೆಂದು ಕರೆಯಲಾಗುತ್ತದೆ. 70-80ರ ದಶಕದಲ್ಲಿ ಅಮೆರಿಕದ ಶಾಪಿಂಗ್‌ ಮಾಲ್‌ಗ‌ಳ ವಿನ್ಯಾಸವನ್ನೇ ಪೂರ್ಣವಾಗಿ ಬದಲಿಸಿದ ಖ್ಯಾತಿ ವಿಕ್ಟರ್‌ ಗ್ರುಯೆನ್‌ನದ್ದು.

ಶಾಪಿಂಗ್‌ ಮಾಲ್‌ ಪ್ರವೇಶಿಸಿದ ಗ್ರಾಹಕನಿಗೆ ತಾನು ಯಾವುದೋ ತೀರಾ ಅಪರಿಚಿತ ಪ್ರಪಂಚಕ್ಕೆ ಪ್ರವೇಶಿಸಿದ್ದೇನೆ ಎಂಬ ಭಯ ಆಗಬಾರದು, ಹೀಗಾಗಿ ಅಲ್ಲಿ ಆಟದ ಪ್ರದೇಶಗಳು, ಹೋಟೆಲ್‌ಗ‌ಳು, ಗಾರ್ಡನ್‌ಗಳು ಇದ್ದರೆ ಗ್ರಾಹಕರನ್ನು ಹೆಚ್ಚು ಸೆಳೆಯುತ್ತವೆ ಎನ್ನುವುದನ್ನು ಸಾಧ್ಯವಾಗಿಸಿ ತೋರಿಸಿದ್ದ ವಿಕ್ಟರ್‌ ಗ್ರುಯೆನ್‌. ಅಂದರೆ ಶಾಪಿಂಗ್‌ ಮಾಲ್‌ ಒಂದರ ವಿನ್ಯಾಸ್‌ ಶಾಪಿಂಗ್‌ ವರ್ತನೆಯನ್ನೇ ಬದಲಿಸಬಲ್ಲದು ಎಂದು ಸಾಬೀತು ಮಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಆದರೆ ಈ ಅಂಶವನ್ನೇ ಅಸ್ತ್ರವಾಗಿಟ್ಟುಕೊಂಡ ಮಾಲ್‌ ವಿನ್ಯಾಸಕರು ಗ್ರಾಹಕರ ಮನಸ್ಸನ್ನು ನಿಯಂತ್ರಿಸುವ ರೀತಿಯಲ್ಲಿ ಮಾಲ್‌ಗಳನ್ನು ವಿನ್ಯಾಸಗೊಳಿಸುತ್ತಾ ಹೋದರು. ಈ ಪ್ರಯತ್ನ ಯಶಸ್ವಿಯೂ ಆಯಿತು. ಆದರೆ ತಮ್ಮ ಉದ್ದೇಶ ಗ್ರಾಹಕರನ್ನು ವಂಚಿಸುವುದಾಗಿರಲಿಲ್ಲ ಎನ್ನುತ್ತಿದ್ದ ವಿಕ್ಟರ್‌ ಗ್ರುಯೆನ್‌ “ಗ್ರುಯೆನ್‌ ಎಫೆಕ್ಟ್ಗೂ ತಮಗೂ ತಳಕು ಹಾಕಬಾರದೆಂದು’ ಕೊನೆಯವರೆಗೂ ವಾದಿಸಿದರು. 

Advertisement

ಅವರ ಮಾತು ಎಷ್ಟು ಸತ್ಯವೋ ತಿಳಿಯದು. ಆದರೆ ಮಾಲ್‌ಗ‌ಳು ತಮ್ಮ ವಿನ್ಯಾಸದ ಮೂಲಕ ಜನರ ಮನಸ್ಸನ್ನು ನಿಗ್ರಹಿಸಬಲ್ಲವು ಎನ್ನುವುದಂತೂ ಕಾಲಕಾಲದ ಪ್ರಯೋಗದಿಂದ ಸಾಬೀತಾಯಿತು. 

ಮಾಲ್‌ಗ‌ಳ ವಿನ್ಯಾಸದಲ್ಲಿದೆ ತಂತ್ರಗಾರಿಕೆ
1. ಡಿಕಂಪ್ರಶನ್‌ ಝೋನ್‌
ನೀವು ಶಾಪಿಂಗ್‌ ಮಾಲ್‌ ಎಂಟರ್‌ ಆದದ್ದೇ ಒಂದು ವಿಷಯ ಗಮನಿಸಿರುತ್ತೀರಿ. ಮೊದಲ ಹತ್ತಿಪ್ಪತ್ತು ಹೆಜ್ಜೆ ಪ್ರದೇಶ ಖಾಲಿ ಇರುತ್ತದೆ. ಇದನ್ನು “ಡಿ ಕಂಪ್ರಶನ್‌ ಝೋನ್‌’ ಎನ್ನುತ್ತಾರೆ. ಹೊರಜಗತ್ತಿನಿಂದ ಪ್ರವೇಶಿಸಿದ ಗ್ರಾಹಕ ಮಾನಸಿಕವಾಗಿ ಒಳಾಂಗಣಕ್ಕೆ ಹೊಂದಿಕೊಳ್ಳಲು “ಹತ್ತು-ಹದಿನೈದು ಹೆಜ್ಜೆ’ ಸಮಯ ಸಾಕು. ನಂತರ ನಿಮ್ಮನ್ನು ಇಂಪಾದ ಸಂಗೀತ ಆಹ್ವಾನಿಸುತ್ತದೆ. ಕೂಡಲೇ ನಿಮ್ಮ ಮನಸ್ಸು ಶಾಂತಗೊಳ್ಳುತ್ತದೆ. ಮನಸ್ಸು ಶಾಂತಗೊಂಡಿತೆಂದರೆ ಆ ಪ್ರದೇಶದಲ್ಲಿ ಅದು ಹೆಚ್ಚು ಹೊತ್ತು ಇರಲು ಬಯಸುತ್ತದೆ. ಒಟ್ಟಿನಲ್ಲಿ ನೀವು ಮಾಲ್‌ ಪ್ರವೇಶಿಸಿದ 1 ನಿಮಿಷದಲ್ಲಿಯೇ ಮಾನಸಿಕವಾಗಿ ಅಲ್ಲಿ ಹೆಚ್ಚು ಹೊತ್ತು ಸಮಯ ಕಳೆಯಲು ಸಿದ್ಧರಾಗಿಬಿಡುತ್ತೀರಿ.

2. ನೋಟೈಮ್‌
 ಯಾವುದಾದರೂ ಮಾಲ್‌ನಲ್ಲಿ ಗಡಿಯಾರಗಳಿರುವುದನ್ನು ಗಮನಿಸಿದ್ದೀರಾ? ಇಲ್ಲ ತಾನೆ. ಇದಕ್ಕೆ ಕಾರಣವಿದೆ. ಗ್ರಾಹಕನಿಗೆ ತಾನು ಎಷ್ಟು ಹೊತ್ತು ಮಾಲ್‌ನಲ್ಲಿ ಸಮಯ ಕಳೆಯುತ್ತಿದ್ದೇನೆ, ಟೈಮೆಷ್ಟಾಯಿತು ಎನ್ನುವುದು ತಿಳಿಯಬಾರದು ಎನ್ನುವ ತಂತ್ರವಿದು. ಈ ಕಾರಣಕ್ಕಾಗಿಯೇ ಹೊರಗಿನ ಬೆಳಕು ಒಳಬಾರದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಗಾಜುಗಳಿಗೆಲ್ಲ ಪೋಸ್ಟರ್‌ಗಳನ್ನು
ಅಂಟಿಸಿ, ಮಾಲ್‌ನೊಳಗೆ ಏಕರೀತಿಯ ಬೆಳಕನ್ನು ಬಿಡಲಾಗುತ್ತದೆ. ಟೈಮೆಷ್ಟಾಯಿತು ಎಂದು ಅರಿವಾಗಿ ವಾಚ್‌ ನೋಡಿಕೊಳ್ಳುವಷ್ಟರಲ್ಲೇ ಏನಿಲ್ಲವೆಂದರೂ 2 ಗಂಟೆಯಾದರೂ ನೀವು ಸುತ್ತಾಡಿರುತ್ತೀರಿ.  

3. ಹೋಟೆಲ್‌ಗ‌ಳೇಕೆ ಮೇಲೆ?
ಒಂದು ಮಾಲ್‌ ಪ್ರವೇಶಿಸಿದಾಗ ಗ್ರೌಂಡ್‌ ಫ್ಲೋರ್‌ನಲ್ಲಿನ ವಸ್ತುಗಳನ್ನು ಖರೀದಿಸಲು ನಿಮ್ಮ ಬಳಿ ಹಣವಿಲ್ಲವೆಂದುಕೊಳ್ಳಿ, ಮೇಲಿನ ಫ್ಲೋರ್‌ಗೆ ಹೋಗುತ್ತೀರಿ. ಅಲ್ಲೂ ಕಾಸ್ಟಿ ಪ್ರಾಡಕ್ಟ್ಗಳು. ಅದರ ಮೇಲಿನ ಫ್ಲೋರ್‌ಗೆ? ಅಲ್ಲೂ ಅಷ್ಟೆ. ಕೊನೆಗೆ ಲಾಸ್ಟ್‌ ಫ್ಲೋರ್‌ಗೆ ಹೋದಾಗ ಏನಾಗುತ್ತದೆ? ನಿಮಗೆ ದಣಿವೂ ಆಗುತ್ತದೆ, ಹಿಂದೆಯೇ, ಮಾಲ್‌ಗೆ ಬಂದು ಏನೂ ಖರ್ಚು ಮಾಡಲಿಲ್ಲವಲ್ಲ ಎನ್ನುವ ಪೇಚು ಹುಟ್ಟಿಕೊಳ್ಳುತ್ತದೆ. ಆಗ ನಿಮ್ಮ ಕಣ್ಣಿಗೆ ಬೀಳುವುದೇನು? ಹೋಟೆಲ್‌ಗ‌ಳು! ಆಹಾರವನ್ನಂತೂ ಅಫೋರ್ಡ್‌ ಮಾಡಲು ನಿಮಗಾಗುತ್ತದಲ್ಲ? 

4. ಪ್ಲೇಸ್‌ಮೆಂಟ್‌ ಸ್ಟಾ ಟೆಜಿ
ಯಾವ ಉತ್ಪನ್ನ ಯಾವ ಜಾಗದಲ್ಲಿದ್ದರೆ ಅದು ಹೆಚ್ಚು ಮಾರಾಟವಾಗಬಲ್ಲದು ಎನ್ನುವ ಬಗ್ಗೆ ನಿರಂತರ ಸಂಶೋಧನೆಗಳು-ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ, ಚಾಕ್ಲೆಟ್‌ಗಳು ಕ್ಯಾಶ್‌ ಕೌಂಟರ್‌ ಪಕ್ಕದಲ್ಲಿಯೇ ಇರುವುದೇಕೆ? “ಚೇಂಜ್‌ ಇಲ್ಲದಿದ್ದರೆ ಕೊಡಲು’ ಎಂದು ಭಾವಿಸಿರುತ್ತೀರಿ. ಇದೇನೋ ನಿಜ. ಆದರೆ ಇನ್ನೊಂದು ಮುಖ್ಯ ಕಾರಣವಿದೆ. ಸಾಮಾನ್ಯವಾಗಿ ಮಕ್ಕಳನ್ನು ಶಾಪಿಂಗ್‌ ಮಾಲ್‌ಗೆ ಕರೆದೊಯ್ದಾಗ ಅವು ಕಾಸ್ಟಿ ವಸ್ತುಗಳ ಮೇಲೆ ಕಣ್ಣು ಹಾಕಿ ರಚ್ಚೆ ಹಿಡಿದಿರುತ್ತವೆ. ನಿಮಗೆ ಅವನ್ನು ಕೊಡಿಸಲು ಸಾಧ್ಯವಾಗದಿದ್ದರೆ, ಅಯ್ಯೋ ಪಾಪ ಎನ್ನುವ ಗಿಲ್ಟ್ ಅಂತೂ ಶುರುವಾಗುತ್ತದೆ. ಈ ಗಿಲ್ಟ್ನಲ್ಲೇ ನೀವು ಕೌಂಟರ್‌ನತ್ತ ಬಂದಾಗ ಕಣ್ಣಿಗೆ ಬೀಳುತ್ತವೆ ಚಾಕ್ಲೆಟ್‌ಗಳು! ಕಡೇಪಕ್ಷ ಇದನ್ನಾದರೂ ಕೊಡಿಸೋಣ ಎನ್ನುವ ದೊಡ್ಡತನ ನಿಮ್ಮಲ್ಲಿ ಬಂದು ಬಿಡುತ್ತದೆ. ಆಮೇಲೆ ಯಾವುದೇ ಪ್ರಾಡಕ್ಟ್ ಇರಲಿ ಅದು ಐ ಲೆವೆಲ್‌(ಕಣ್ಣಳತೆಗೆ) ಸಮನಾಗಿದ್ದರೆ/ತುಸು ಕೆಳಗಿದ್ದರೆ ಅದನ್ನು ನಾವು ಗಮನಿಸುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕಾಗಿಯೇ ಮಾರಾಟವಾಗದ ವಸ್ತುಗಳನ್ನು ಮಧ್ಯದ ರ್ಯಾಕ್‌ನಲ್ಲಿ ಇಡಲಾಗುತ್ತದೆ. 

5. ಇನ್ನು ಆಹಾರ ಉತ್ಪನ್ನವನ್ನು ಮಾರುವ ಬೃಹತ್‌ ಮಳಿಗೆಗೆ ಹೋದಾಗ ಇದನ್ನು ಗಮನಿಸಿ ನೋಡಿ. ತೀರಾ ಅಗತ್ಯವಿರುವಂಥ ಪದಾರ್ಥಗಳನ್ನು ಕೊನೆಯಲ್ಲಿ ಇಡಲಾಗುತ್ತದೆ. ಉದಾಹರಣೆಗೆ ಹಾಲು. ಪ್ರವೇಶ ದ್ವಾರದಲ್ಲೇ ಹಾಲು ಅಥವಾ ಮೊಸರು ಇಟ್ಟುಬಿಟ್ಟರೆ ಗ್ರಾಹಕ ಅದನ್ನಷ್ಟೇ ಖರೀದಿಸಿ ಹೊರಟು ಹೋಗುವ ಸಾಧ್ಯತೆ ಹೆಚ್ಚು. ಅದರ ಬದಲಾಗಿ ಆತ ಅವನ್ನು ಖರೀದಿಸಲು ಮಳಿಗೆಯಲ್ಲಿ ತುಸು ದೂರ ಸಾಗುವಂತಾದರೆ? ಆಗ ಆತನ ಕಣ್ಣಿಗೆ ಇನ್ನಿತರ ವಸ್ತುಗಳೂ ಬೀಳುತ್ತವೆ. ಆತನೊಳಗಿನ ಇಂಪಲ್ಸಿವ್‌ ಗುಣ ಜಾಗೃತವಾಗುತ್ತದೆ. ಮೊಸರು ತರಲು ಹೋದವನು ಗೋಡಂಬಿ ಪ್ಯಾಕೆಟ್‌ ಹೊತ್ತು ತರುತ್ತಾನೆ. 

ಇದೇನೇ ಇದ್ದರೂ ಎಲ್ಲೆಡೆಯೂ, ಎಲ್ಲಾ ಕಾಲಕ್ಕೂ ವಿನ್ಯಾಸ ಮತ್ತು ಪ್ರಾಡಕ್ಟ್ ಪ್ಲೇಸ್‌ಮೆಂಟ್‌ ಹೀಗೇ ಇರುತ್ತದೆಂದು ಹೇಳಲು ಸಾಧ್ಯವಾಗುವುದಿಲ್ಲ. ಕೆಲವು ಸಮಯದಲ್ಲೇ ಈ ತಂತ್ರಗಳನ್ನು ಗ್ರಾಹಕರು ಅರಿತುಬಿಡುತ್ತಾರೆ. ಹೀಗಾಗಿ ಗ್ರಾಹಕರು ನಿಜಕ್ಕೂ ಎಚ್ಚೆತ್ತುಕೊಳ್ಳುತ್ತಿದ್ದಂತೆಯೇ ಅವರನ್ನು ಎಚ್ಚರ ತಪ್ಪಿಸುವ ಹೊಸ ಹಾದಿಯನ್ನು ವ್ಯಾಪಾರ ವಲಯ ಹುಡುಕುತ್ತಲೇ ಇರುತ್ತದೆ. ಇದೇನೇ ಇದ್ದರೂ ಇನ್ನು ಮುಂದಾದರೂ ಮಾಲ್‌ ಒಂದರ ವಿನ್ಯಾಸ ಹೇಗಿದೆ, ಅದರಲ್ಲಿನ ಮಳಿಗೆಗಳು ಅವುಗಳಲ್ಲಿನ ಪ್ರಾಡಕ್ಟ್ಗಳನ್ನು ಹೇಗೆ
ಇಡಲಾಗಿದೆ, ಅವುಗಳಿಂದ ಪ್ರಭಾವಿತನಾಗಿ ನಾನು ಬಕರಾ ಆಗುತ್ತಿದ್ದೇನಾ ಎನ್ನುವ ಪ್ರಶ್ನೆಯನ್ನು ಕೇಳಿ ಕೊಳ್ಳಿ. ಕಿಸೆಗೆ ಕತ್ತರಿ ಬೀಳುವುದನ್ನು ತಪ್ಪಿಸಿಕೊಳ್ಳಿ (ಸಾಧ್ಯವಾದರೆ!). ಸತ್ಯವೇನೆಂದರೆ, ಒಂದು ವಸ್ತು ಖರೀದಿಸುವುದಕ್ಕಾಗಿ ಮಾಲ್‌ ಪ್ರವೇಶಿಸಿ ಅದನ್ನಷ್ಟೇ
ಖರೀದಿಸಿ ಹೊರಬರುವವನು ಇದ್ದಾನಲ್ಲ, ಅವನಿಗೆ ದೀರ್ಘ‌ದಂಡ ನಮಸ್ಕಾರ ಹಾಕಲೇಬೇಕು! 

ರಾಘವೇಂದ್ರ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next