ಪಣಜಿ : ಗೋವಾದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿನ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಕ್ಯಾಸಿನೊ ಆರಂಭಗೊಂಡ ನಂತರ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗಲಿದೆ ಎಂದು ಗೋವಾ ಟ್ರಾವೆಲ್ ಆ್ಯಂಡ್ ಟೂರಿಸಂ ಅಸೋಸಿಯೇಶನ್ ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ ಸದ್ಯ ವಿವಿಧ ಹೋಟೆಲ್ ಗಳಲ್ಲಿ ರೂಂ ಬುಕಿಂಗ್ ಹೆಚ್ಚಳವಾಗುತ್ತಿದೆ. ಸದ್ಯ ಹೋಟೆಲ್ ರೂಂ ಬುಕ್ ಆಗುವ ಪ್ರಮಾಣ ಶೇ 25 ರಿಂದ 30 ಕ್ಕೆ ತಲುಪಿದೆ. ಗೋವಾಕ್ಕೆ ಆಗಮಿಸುವ ಹೆಚ್ಚಿನ ಪ್ರವಾಸಿಗರು ಮುಂಗಡವಾಗಿ ರೂಂ ಬುಕ್ ಮಾಡುತ್ತಿರುವುದು ಹೆಚ್ಚಳವಾಗಿದೆ. ರಾಜ್ಯದಲ್ಲಿ ಈಗಾಗಲೇ ಬಹುತೇಕ ಹೋಟೆಲ್ ಗಳು ಆರಂಭಗೊಂಡಿದ್ದರೂ ಕೂಡ ಸಣ್ಣ ಸಣ್ಣ ಹೋಟೆಲ್ ಗಳು ಪ್ರವಾಸಿಗರ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ : ಸೆ. 30ರೊಳಗೆ ಈ ನಿಯಮ ಪಾಲಿಸದಿದ್ದಲ್ಲಿ 1000ರೂ. ದಂಡ..! : ಎಸ್ ಬಿ ಐ ಹೇಳಿದ್ದೇನು..?
ರಾಜ್ಯದಲ್ಲಿ ಸಂಭಾವ್ಯ ಕೋವಿಡ್ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಸದ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕ್ಯಾಸಿನೊಗಳು ಬಂದ್ ಇವೆ. ಗೋವಾಕ್ಕೆ ಕ್ಯಾಸಿನೊಕ್ಕೆ ಭೇಟಿ ನೀಡಲೆಂದೇ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ಕ್ಯಾಸಿನೊ ಆರಂಭಗೊಂಡ ನಂತರ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಪಣಜಿಯ ಪ್ರಸಿದ್ಧ ಮೇರಿ ಇಮ್ಯಾಕ್ಯುಲೆಟ್ ಚರ್ಚ್, ಮೀರಾಮಾರ್ ಬೀಚ್, ಹಳೇಯ ಸಚಿವಾಲಯ, ದೋನಾಪಾವುಲ್, ಓಲ್ಡ್ ಗೋವಾದ ಹಲವು ಐತಿಹಾಸಿಕ ಸ್ಥಳಗಳು, ಕಲಂಗುಟ್, ಬಾಗಾ, ಹರಮಲ್, ಮಾಂದ್ರೆ, ಬಾಣಾವಲಿ ಸೇರಿದಂತೆ ಪ್ರಮುಖ ಬೀಚ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬರುತ್ತಿದ್ದಾರೆ. ಸದ್ಯ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದು ಕಂಡುಬರುತ್ತಿದೆ.
ಇದನ್ನೂ ಓದಿ : ‘ಲವ್ ಯೂ ರಚ್ಚು’ ದುರಂತ : ಆರೋಪಿಗಳು ನ್ಯಾಯಾಂಗ ಬಂಧನಕ್ಕೆ