ಪಣಜಿ: ಕರ್ನಾಟಕದ ಇಬ್ಬರು ಪ್ರವಾಸಿಗರನ್ನು ಗೋವಾದ ಕಲಂಗುಟ್‍ನಲ್ಲಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ. ಪ್ರವಾಸಿಗರನ್ನು ಥಳಿಸಿ, ಯುಪಿಐ ವಹಿವಾಟಿನ ಮೂಲಕ 30,000 ರೂ.ಗಳನ್ನು ಬಲವಂತವಾಗಿ ದೋಚಲಾಗಿದೆ. ಕಲಂಗುಟ್ ಪ್ರದೇಶದ ಮೂವರು ದಲ್ಲಾಳಿಗಳು ಈ ಕೃತ್ಯ ಎಸಗಿದ್ದಾರೆ.
ಕೋಲಾರದ ಬಸ್ತಾರಹಳ್ಳಿಯ ಸತೀಶ್ ಕುಮಾರ್, ಶ್ರೀನಿವಾಸ ಶೆಟ್ಟಿ ಎಂಬ ಪ್ರವಾಸಿಗರು ದೂರು ದಾಖಲಿಸಿದ್ದರು.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 17 ರಂದು ಟೂರಿಸ್ಟ್ ಗೈಡ್ ಕಮ್ ಬ್ರೋಕರ್ ರವರು ಪ್ರವಾಸಿಗರಾದ ಶೆಟ್ಟಿ ಮತ್ತು ಅವರ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು. ಕೊಲೆ ಬೆದರಿಕೆ ಹಾಕಿದ ದಲ್ಲಾಳಿಗಳು, ಯುಪಿಐ ವಹಿವಾಟಿನ ಮೂಲಕ ಶೆಟ್ಟಿ ಅವರ ಬ್ಯಾಂಕ್ ಖಾತೆಯಿಂದ 30,000 ರೂ. ಹಣವನ್ನು ಬಲವಂತವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾರೆ. ಪ್ರಕರಣದಲ್ಲಿ ಮೂವರು ಶಂಕಿತ ಟೂರಿಸ್ಟ್ ಬ್ರೋಕರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಶಾರುಖ್ ಖಾನ್ ಬಶೀರ್ ಅಹಮದ್ ದೇವಗಿರಿ (25) ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಪರ್ರಾದ ಕಂಕಾದ ನಿವಾಸಿಯಾಗಿದ್ದು, ಮೂಲತಃ ದೇವಿಹೊಸೂರು ಹಾವೇರಿ ಕರ್ನಾಟಕದ ಅತ್ತಾರ ಬೀದಿಯ ನಿವಾಸಿ ಎನ್ನಲಾಗಿದೆ. ಸಿರಿಲ್ ಅಲೆಕ್ಸ್ ಡಯಾಜ್(42) ಮತ್ತೊಬ್ಬ ಬಂಧಿತ ಆರೋಪಿ. ಈತ ಸೇಂಟ್ ಸೆಬಾಸ್ಟಿಯನ್ಸ್ ಚಾಪೆಲ್, ದೇವ್ಸು, ಪೆಡ್ನೆ ನಿವಾಸಿ. ಮೂರನೇ ಆರೋಪಿ ಅವಿನಾಶ್ ಕಾಂತಿ ಪಟೇಲ್ (32) ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಹನುಮಾನ್ ಮಂದಿರ, ಖೋಬ್ರವಾಡೊ, ಕಲಾಂಗುಟ್ ನಿವಾಸಿ ಎನ್ನಲಾಗಿದೆ.
ಕಲಂಗುಟ್ ಪೊಲೀಸ್ ಉಪನಿರೀಕ್ಷಕ ರಾಜಾರಾಮ್ ಬಗ್ಕರ್ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಕಲಂಗುಟ್ ಠಾಣೆ ಇನ್ಸ್ಪೆಕ್ಟರ್ ಪರೇಶ್ ನಾಯ್ಕ್ ಹಾಗೂ ಪರವರಿ ಎಸ್‍ಡಿಪಿಒ ವಿಶ್ವೇಶ್ ಕರ್ಪೆ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.