ಪಣಜಿ: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ, ಒಮಿಕ್ರಾನ್ ರೂಪಾಂತರಿಯಿಂದಾಗಿ ರಾಜ್ಯದಲ್ಲಿ ಆತಂಕ ಹೆಚ್ಚುವಂತಾಗಿದೆ.ಗೋವಾಕ್ಕೆ ಹೊಸ ವರ್ಷ ಸಂಭ್ರಮಾಚರಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಗಡಿಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.
ಗೋವಾ ಪ್ರವೇಶಿಸಿಸಲು ಕೋವಿಡ್ ಡಬಲ್ ವ್ಯಾಕ್ಸಿನೇಶನ್/ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದ್ದು, ಇವೆರಡನ್ನೂ ಹೊಂದಿರದವರಿಗೆ ಸ್ಥಳದಲ್ಲಿಯೇ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ಗೋವಾ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಮಾವಣೆಯಾಗಿರುವ ದೃಶ್ಯ ಕಂಡುಬರುತ್ತಿದೆ.
ಮಹಾರಾಷ್ಟ್ರ-ಗೋವಾ ಗಡಿ ಭಾಗದ ಪತ್ರಾದೇವಿ ಚೆಕ್‍ಪೋಸ್ಟ್ ನಲ್ಲಿ ಅಧಿಕ ಕಟ್ಟೆಚ್ಚರ ವಹಿಸಲಾಗಿದ್ದು ಕೋವಿಡ್ ಎರಡೂ ಡೋಸ್ ಲಸಿಕೆ ಪಡೆಯದಿದ್ದವರಿಗೆ ಅಥವಾ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರದವರಿಗೆ 250 ರೂ ಶುಲ್ಕ ಪಡೆದು ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಇದರಿಂದಾಗಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಭಾರಿ ಸಂದಣಿ ಕಂಡು ಬಂದಿದೆ. ಒಬ್ಬ ವ್ಯಕ್ತಿಗೆ ಕೋವಿಡ್ ತಪಾಸಣೆ ನಡೆಸಲು 15 ರಿಂದ 20 ನಿಮಿಷ ತಗುಲುತ್ತಿದ್ದು ಇದರಿಂದಾಗಿ ಮಹಾರಾಷ್ಟ್ರ-ಗೋವಾ ಗಡಿ ಭಾಗದಲ್ಲಿ ಪ್ರವಾಸಿಗರ ಭಾರಿ ಜಮಾವಣೆಯಾಗಿದೆ.
ಆರ್ ಟಿ -ಪಿಸಿಆರ್ ತಪಾಸಣೆ ಕಡ್ಡಾಯ ; ಜನರ ಆಕ್ರೋಶ
ಉತ್ತರ ಗೋವಾ ಜಿಲ್ಲಾ ಆಸ್ಪತ್ರೆ ಪ್ರವೇಶಕ್ಕಾಗಿ ಆರ್ ಟಿ -ಪಿಸಿಆರ್ ತಪಾಸಣೆ ಕಡ್ಡಾಯಗೊಳಿಸಲಾಗಿದ್ದು, ಆಸ್ಪತ್ರೆಯ ಹೊರಭಾಗದಲ್ಲಿ ಕೋವಿಡ್ ತಪಾಸಣೆಗೆ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬರುತ್ತಿದೆ. ಡಬಲ್ ಡೋಸ್ ವ್ಯಾಕ್ಸಿನ್ ಪಡೆದಿದ್ದರೂ ಕೂಡ ಆಸ್ಪತ್ರೆಗೆ ತೆರಳಲು ಯಾಕೆ ಕೋವಿಡ್ ತಪಾಸಣೆ ಕಡ್ಡಾಯಗೊಳಿಸಲಾಗಿದೆ..? ಎಂದು ಜನತೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಆಸ್ಪತ್ರೆಯ ಒಪಿಡಿಗೆ ಆಗಮಿಸುವವರಿಗೆ ಮತ್ತು ಅವರ ಸಂಬಂಧಿಕರಿಗೆ ಕೋವಿಡ್ ತಪಾಸಣೆ ವರದಿ ಕಡ್ಡಾಯಗೊಳಿಸಲಾಗಿದೆ. ಬಾರ್ದೇಸ್ ತಾಲೂಕಿನಿಂದ ಮತ್ತು ಸುತ್ತಮುತ್ತಲಿನ ತಾಲೂಕಿನಿಂದ ಈ ಆಸ್ಪತ್ರೆಗೆ ಆಗಮಿಸುವವರು ಇಲ್ಲಿ ಕೋವಿಡ್ ತಪಾಸಣೆ ಕಡ್ಡಾಯಗೊಳಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಆಗಮಿಸುವವರಿಗೆ ಆರ್ ಟಿ -ಪಿಸಿಆರ್ ತಪಾಸಣೆ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸೂಚನೆ ಹೊರಡಿಸಿರುವುದಾಗಿ ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಪಾಸಣೆ ಕಡ್ಡಾಯಗೊಳಿಸಿರುವುದು ಆಸ್ಪತ್ರೆಯ ಸಿಬ್ಬಂದಿಗಳಲ್ಲಿಯೂ ಗೊಂದಲ ಉಂಟಾಗುವಂತಾಗಿದೆ.