ಪಣಜಿ: ಕರ್ನಾಟಕದ ದಕ್ಷಿಣ ಗ್ರೀಡ್‌ನಿಂದ ಅನೇಕ ವರ್ಷಗಳಿಂದ ಗೋವಾ ರಾಜ್ಯವು ವಿದ್ಯುತ್ ಖರೀದಿಸುತ್ತಿತ್ತು. ಆದರೆ, ಕರ್ನಾಟಕದಿಂದ ವಿದ್ಯುತ್ ಖರೀದಿಸುವುದನ್ನು ಸೋಮವಾರದಿಂದ ಗೋವಾ ಸರ್ಕಾರ ಸ್ಥಗಿತಗೊಳಿಸಿದೆ. ದಕ್ಷಿಣ ಗೋವಾ ಇದೀಗ ಮಹಾರಾಷ್ಟ್ರದಿಂದ ವಿದ್ಯುತ್ ಖರೀದಿಸುತ್ತಿದೆ. ಇದರಿಂದಾಗಿ ಗೋವಾದ ಜನತೆಗೆ ಮುಂಬರುವ ದಿನಗಳಲ್ಲಿ ವಿದ್ಯುತ್ ಸಮಸ್ಯೆ ದೂರವಾಗಲಿದೆ ಎಂದು ಗೋವಾ ವಿದ್ಯುತ್ ಮಂತ್ರಿ ನಿಲೇಶ್ ಕಾಬ್ರಾಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ ಗೋವಾಕ್ಕೆ ವಿದ್ಯುತ್ ಪೂರೈಕೆಯಾಗುವ ವಿದ್ಯುತ್ ಗ್ರೀಡ್ ಲೈನ್ ದಟ್ಟ ಅರಣ್ಯದಿಂದ ಹಾದು ಬಂದಿದೆ. ಮಳೆಗಾಲದಲ್ಲಿ ಈ ವಿದ್ಯುತ್ ತಂತಿ ಮೇಲೆ ಮರಗಿಡಗಳು ಬಿದ್ದು ಗೋವಾಕ್ಕೆ ಪೂರೈಕೆಯಾಗುವ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ತ್ವರಿತವಾಗಿ ದೂರಗೊಳಿಸಲು ಸಾಧ್ಯವಿಲ್ಲ.
ಈ ರೀತಿ ಪದೇ ಪದೆ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆಯನ್ನು ಕರ್ನಾಟಕದ ವಿದ್ಯುತ್ ಇಲಾಖೆ ಬಗೆಹರಿಸಬೇಕು. ಅವರಿಗೆ ಯಾವಾಗ ಸಮಯ ಸಿಗುತ್ತದೆಯೋ ಆಗ ಅವರು ದುರಸ್ತಿ ಕಾರ್ಯ ಕೈಗೊಳ್ಳುತ್ತಾರೆ. ನಾವು ಅವರಿಗೆ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದರು.
ದೇಶಾದ್ಯಂತ ಒಂದೇ ರಾಷ್ಟ್ರೀಯ ಗ್ರೀಡ್ ಇದೆ. ಇದರಿಂದಲೇ ದೇಶಾದ್ಯಂತ ವಿದ್ಯುತ್ ಪೂರೈಕೆಯಾಗುತ್ತದೆ. ನಾವು ಅಗತ್ಯವಿರುವ ಎಲ್ಲ ಕಾಗದಪತ್ರ ಕೆಲಸವನ್ನು ಪೂರ್ಣಗೊಳಿಸಿ ಕರ್ನಾಟಕದಿಂದ ಗೋವಾಕ್ಕೆ ಬರುತ್ತಿದ್ದ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದೇವೆ.
ಮಹಾರಾಷ್ಟ್ರದ ಪಶ್ಚಿಮ ಗ್ರೀಡ್‌ನಿಂದ ಉತ್ತರ ಗೋವಾಕ್ಕೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಇದೀಗ ಇದನ್ನೇ ದಕ್ಷಿಣ ಗೋವಾಕ್ಕೆ ಪಡೆದುಕೊಳ್ಳಲಾಗುವುದು. ಬರುವ ಮೂರು ವರ್ಷಗಳಲ್ಲಿ ಧಾರಾಬಾಂದೋಡಾದಲ್ಲಿ 400 ಕೆ.ವಿ.ಸಾಮರ್ಥ್ಯದ ಬೃಹತ್ ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಲಾಗುವುದು. ನಂತರ ಮತ್ತೆ ಕರ್ನಾಟಕದಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗುವುದು ಎಂದರು.