ಪಣಜಿ: ಕಲಂಗುಟ್‍ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಸಂಬಂಧಿಸಿದಂತೆ ಪಂಚಾಯತಿಯು ಶಿವ ಸ್ವರಾಜ್ಯ, ಕಲಂಗುಟ್ ಸಂಸ್ಥೆಗೆ ಪತ್ರವನ್ನು ಕಳುಹಿಸಿತ್ತು. ಈ ಪತ್ರದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಧ್ವಂಸಗೊಳಿಸಲಾಗುವುದು ಅಥವಾ ಕೆಡವಲಾಗುವುದು ಎಂದು ಎಲ್ಲಿಯೂ ಹೇಳಿರಲಿಲ್ಲ. ಆದರೆ, ಕೆಲವರು ಮಾಧ್ಯಮಗಳಲ್ಲಿ ತಪ್ಪು ಸುದ್ದಿಯನ್ನೂ ಹಬ್ಬಿಸಿದ್ದಾರೆ. ಶಿವಾಜಿ ಪ್ರತಿಮೆ ಸ್ಥಾಪಿಸಿರುವ ಜಂಕ್ಷನ್ ಅಪಘಾತ ಪೀಡಿತ ಪ್ರದೇಶವಾಗಿತ್ತು ಎಂದು ಕಲಂಗುಟ್ ಪಂಚಾಯತ್ ಅಧ್ಯಕ್ಷ ಜೋಸೆಫ್ ಸಿಕ್ವೇರಾ ವಿವರಿಸಿದರು.
ಕಲಂಗುಟ್‍ನ ಪಂಚಾಯತ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಾಜಿ ಪ್ರತಿಮೆ ಕುರಿತು ತಮ್ಮ ಪಂಚಾಯತಿ ಹಾಗೂ ಆಡಳಿತ ಮಂಡಳಿಯನ್ನು ಜೋಸೆಫ್ ಸಿಕ್ವೇರಾ ಸಮರ್ಥಿಸಿಕೊಂಡರು. ಕೆಲವರು ತಮ್ಮ ಖ್ಯಾತಿಗಾಗಿ ಶಿವಾಜಿ ಪ್ರತಿಮೆ ವಿಚಾರವನ್ನು ಹಿಂದೂ-ಕ್ರಿಶ್ಚಿಯನ್ ಎನ್ನುವ ವಿವಾದ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಯತ್ನಿಸಿದ್ದಾರೆ. ನಾನು ಕಳೆದ 30 ವರ್ಷಗಳಿಂದ ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇನೆ ಆದರೆ ನಾನು ಎಂದಿಗೂ ಯಾವುದೇ ಧರ್ಮದ ಬಗ್ಗೆ ಭೇದಭಾವ ಮಾಡಿಲ್ಲ ಎಂದು ಸಿಕ್ವೇರಾ ಹೇಳಿದರು.
ಶಿವಾಜಿ ಬಗ್ಗೆ ನನಗೆ ಗೊತ್ತು. ನಾನು ಶಾಲೆಯಲ್ಲಿ ಶಿವಾಜಿ ಕುರಿತ ಪಾಠವನ್ನು ಓದಿದೆ. ಏಕೆಂದರೆ ಮರಾಠಿಯಲ್ಲಿ ನಮಗೆ ಶಿವರಾಯರ ಪಾಠವಿತ್ತು. ಈ ಜಂಕ್ಷನ್ ಅಪಘಾತ ಪೀಡಿತ ಪ್ರದೇಶವಾಗಿದ್ದು, ಪಂಚಾಯತ್ ಅಲ್ಲಿ ಅತಿ ಎತ್ತರದ ದೀಪ ನಿರ್ಮಿಸಬೇಕಿತ್ತು, ನಾವು ಶಿವಾಜಿ ಪ್ರತಿಮೆಯ ವಿರೋಧಿಗಳಲ್ಲ. ಜೂನ್ 20 ರಂದು ಪಂಚಾಯತ್ ಕಚೇರಿಯ ಹೊರಗೆ ಜಮಾಯಿಸಿದ ಶಿವಾಜಿ ಪ್ರೇಮಿಗಳನ್ನು ನಾನು ದೂಷಿಸಲಾರೆ. ಆದರೆ ಅವರನ್ನು ಪ್ರಸಾದ್ ಶಿರೋಡ್ಕರ್, ಸುದೇಶ್ ಮೇಕರ್, ಜ್ಞಾನೇಶ್ವರ್ ಮಠಕರ್ ಮತ್ತು ಅಮಿತ್ ಪೂಜಾರಿ ಅವರನ್ನು ದಾರಿ ತಪ್ಪಿಸಿದರು. ಅವರು ಗುಂಪನ್ನು ಪ್ರಚೋದಿಸಿದರು ಮತ್ತು ಕೋಪಗೊಂಡ ಶಿವ ಪ್ರೇಮಿಗಳು ಪಂಚಾಯತ್ ಕಚೇರಿ ಸೇರಿದಂತೆ ವಾಹನಗಳನ್ನು ಧ್ವಂಸಗೊಳಿಸಿದರು ಎಂದು ಸಿಕ್ವೇರಾ ಹೇಳಿದ್ದಾರೆ.
ಪ್ರಸ್ತುತ ಪ್ರತಿಮೆ ಸ್ಥಾಪಿಸಿರುವ ನಾಯಿಕವಾಡ ಜಂಕ್ಷನ್ ಅಪಘಾತ ಪೀಡಿತ ಪ್ರದೇಶವಾಗಿದೆ. ಹೀಗಾಗಿ ಅಲ್ಲಿ ಹೈಮಾಸ್ಟ್ ನಿರ್ಮಿಸಲು ಪಂಚಾಯಿತಿ ಆಡಳಿತ ಮಂಡಳಿ ನಿರ್ಧರಿಸಿದೆ. ಅದರಂತೆ ಕಾಮಗಾರಿ ಆರಂಭವಾಗಬೇಕಿತ್ತು, ಆದರೆ ಮುಖ್ಯಮಂತ್ರಿಗಳು ಕರೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳದಂತೆ ಸೂಚಿಸಿದ್ದಾರೆ ಎಂದು ಸಿಕ್ವೇರಾ ತಿಳಿಸಿದರು.