Advertisement

Goa; ಎಲ್ಲೇ ವಾಸಿಸುತ್ತಿದ್ದರೂ ಆ ರಾಜ್ಯ ನಮ್ಮದು ಎಂಬ ಭಾವನೆ ಬರಬೇಕು: ಸದಾನಂದ ಶೇಟ್

06:33 PM Nov 30, 2023 | Team Udayavani |

ಪಣಜಿ: ದೇಶದ ಯಾವುದೇ ರಾಜ್ಯದಲ್ಲಿ ವಾಸಿಸುತ್ತಿದ್ದರೂ ಕೂಡ ಆ ರಾಜ್ಯ ನಮ್ಮದು ಎಂಬ ಭಾವನೆ ಬರಬೇಕು, ಸಂಸ್ಕೃತಿ ನಮ್ಮದು ಎಂಬ ಭಾವನೆ ಬರಬೇಕು ಎಂದು ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಸದಾನಂದ ಶೇಟ್ ತನವಡೆ ನುಡಿದರು.

Advertisement

ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 29 ರಂದು ಬುಧವಾರ ಸಂಜೆ ಪಣಜಿಯ ಮೆನೆಝಸ್ ಬ್ರಗಾಂಝ ಸಭಾಗೃಹದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ-2023 ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಮಾಧ್ಯಮದ ಮೂಲಕವಾಗಿ ಪ್ರತಿಯೊಂದ ರಾಜ್ಯದ ರಾಜ್ಯೋತ್ಸವವನ್ನು ಆಯಾ ರಾಜ್ಯಗಳಲ್ಲಿ ಆಯೋಜಿಸಬೇಕು ಎಂದಿದ್ದಾರೆ. ನಮ್ಮ ಆಹಾರ, ಸಂಸ್ಕೃತಿ ಒಂದಕ್ಕೊಂದು ರಾಜ್ಯ ಬೆರೆಯಬೇಕು. ಈ ಕುರಿತು ಕಾರ್ಯಕ್ರಮ ಆಯೋಜಿಸಿದರೆ ಅಲ್ಲಿ ವಾಸಿಸುವ ಬೇರೆ ರಾಜ್ಯದ ನಿವಾಸಿಗಳಿಗೂ ಒಂದು ಭಾವನಾತ್ಮಕ ಸಂಬಂಧ ಬೆರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಗೋವಾ ರಾಜ್ಯದಲ್ಲಿಯೂ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದರು.

ಗೋವಾ ರಾಜ್ಯ ಸ್ವಾತಂತ್ರ್ಯ ಸಂದರ್ಭದಿಂದಲೂ ಗೋವಾದಲ್ಲಿ ಸರ್ಕಾರದ ಉನ್ನತ ಹುದ್ಧೆಗಳಲ್ಲಿ ಕರ್ನಾಟಕದ ಜನರು ಸೇವೆ ಸಲ್ಲಿಸುತ್ತ ಬಂದಿದ್ದಾರೆ. ನಾವು ಯಾವುದೇ ರಾಜ್ಯದಲ್ಲಿ ವಾಸಿಸುತ್ತಿದ್ದರೂ ಕೂಡ ನಮ್ಮ ಸಂಸ್ಕøತಿ ಭಾಷೆಯನ್ನು ಮರೆಯಬಾರದು. ಕರ್ನಾಟಕದಲ್ಲಿ ನಿಜವಾದ ಸಂಸ್ಕøತಿ ಕಲೆಯನ್ನು ಕಾಣಬಹುದು. ಗೊವಾದ ಅಭಿವೃದ್ಧಿಯಲ್ಲಿಯೂ ಕೂಡ ಕನ್ನಡಿಗರ ಪಾತ್ರ ಪ್ರಮುಖವಾದದ್ದು ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ರಾಜ್ಯ ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಮಾತನಾಡಿ, ಭಾರತವು ಸಂಸ್ಕೃತಿ ದೇಶವಾಗಿದೆ. ಕರ್ನಾಟಕದಲ್ಲಿ ಉತ್ತಮ ಸಂಸ್ಕೃತಿ ಇದೆ. ಕನ್ನಡಿಗರು ಗೋವಾದ ಎಲ್ಲ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗೋವಾ ಸ್ವಾತಂತ್ರ್ಯ ನಂತರ ಕೂಡ ಗೋವಾದಲ್ಲಿ ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ ಇದನ್ನು ಮರೆಯುವಂತಿಲ್ಲ ಎಂದರು.

Advertisement

ವೇದಿಕೆಯ ಮೇಲೆ ಉಪಸ್ಥಿತರಿದ್ದ ಕರ್ನಾಟಕ ಹಾಗೂ ಗೋವಾ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಟಿ.ಎನ್.ಧ್ರುವಕುಮಾರ್ ಮಾತನಾಡಿ, ಗೋವಾ ಕನ್ನಡ ಸಮಾಜ ಮುಂಬರುವ ದಿನಗಳಲ್ಲಿಯೂ ಕೂಡ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಲಿ, ಹಾಗೂ ಕನ್ನಡ ಸಮಾಜ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ ಮಾತನಾಡಿ- ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ನಾವೆಲ್ಲರೂ ಕನ್ನಡ ಭವನಕ್ಕಾಗಿ ಕೇವಲ 1 ಸಾವಿರ ರೂಗಳನ್ನು ತೆಗೆದಿಟ್ಟರೆ ಗೋವಾದಲ್ಲಿ ನಾವೇ ಖುದ್ದಾಗಿ ಜಾಗ ಖರೀದಿಸಿ ಕನ್ನಡ ಭವನ ನಿರ್ಮಿಸಲು ಸಾಧ್ಯ. ಇದು ನಮ್ಮ ಭವನವಾಗಿ ಉಳಿಯಲಿದೆ ಎಂದರು.

ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಗೋವಾ ಕನ್ನಡ ಸಮಾಜ ಪಣಜಿ ಸ್ವಂತ ಕಚೇರಿ ಖರೀದಿಸಲು ಧನಸಹಾಯ ಮಾಡಿದ ಕನ್ನಡಿಗರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಗೋವಾದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಿದ್ದರು. ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಅರುಣಕುಮಾರ್ ವಂದನಾರ್ಪಣೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next