ಪಣಜಿ(ವಾಸ್ಕೊ): ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಕಲ್ಪಿಸಿಕೊಡಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಗೋವಾದಲ್ಲಿ ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ಕನ್ನಡಿಗರ ಕೊಡುಗೆ ಹೆಚ್ಚಿದೆ. ಕನ್ನಡಿಗರು ಗೋವಾದ ಜನತೆಯೊಂದಿಗೆ ಸಹಜವಾಗಿ ಬೆರೆತುಹೋಗಿದ್ದಾರೆ ಎಂದು ವಾಸ್ಕೊ ಶಾಸಕ ದಾಜಿ ಸಾಲ್ಕರ್ ಹೇಳಿದರು.
ಭಾನುವಾರ ವಾಸ್ಕೊದ ಗಾಂಧೀನಗರ ಮಾರುತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ 7 ನೇಯ ಹಂತದ ಆಡಿಶನ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ಮಾತನಾಡಿ- ಗೊವಾದಲ್ಲಿ 3 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಕನ್ನಡಿಗರು ಗೋವಾದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರವಲ್ಲದೆಯೇ ಗೋವಾದಲ್ಲಿ ಕನ್ನಡಿಗರು ಬದುಕು ಕಟ್ಟಿಕೊಂಡಿದ್ದಾರೆ. ಗೋವಾದಲ್ಲಿ ಕನ್ನಡಿಗರ ಬಹು ವರ್ಷದ ಬೇಡಿಕೆ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದೇ ಆಗಿದೆ. ಇದಕ್ಕೆ ಕರ್ನಾಟಕ ಸರ್ಕಾರವು ಕೂಡ ನಿಧಿಯನ್ನು ಕಾಯ್ದಿರಿಸಿದ್ದು , ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಸರ್ಕಾರ ಅಗತ್ಯ ಜಾಗ ಕಲ್ಪಿಸಿಕೊಟ್ಟರೆ ಗೋವಾ ಕನ್ನಡಿಗರ ಕನಸು ಶೀಘ್ರ ನನಸಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಗೌ. ಕಾರ್ಯದರ್ಶಿ ನಾಗರಾಜ ಗೋಂದಕರ್, ಸಂಗೀತ ಶಿಕ್ಷಕ ಬಾಬು ಬೂಸಾರಿ, ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಪ್ರೇಯಸಿಯನ್ನೇ ಕೊಂದು ದೇಹವನ್ನು 35 ತುಂಡು ಮಾಡಿ ದೆಹಲಿ ನಗರ ತುಂಬಾ ಎಸೆದ ಪ್ರಿಯಕರ…