ಪಣಜಿ: ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ 5 ಲಕ್ಷ ರೂ ಹಣ ಪಡೆದು ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ಚೇತನ್ ನಾಯ್ಕ ಎಂಬ ಆರೋಪಿಯನ್ನು ಗೋವಾ ವೆರ್ಣಾ ಪೋಲಿಸರು ದೆಹಲಿಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಕರ್ನಾಟಕದ ಕುಮಟಾ ಮೂಲದವನಾಗಿದ್ದು, ದಿನೇಶ್ ಬಾಂದೇಕರ್ ಎಂಬುದಾಗಿಯೂ ಹೆಸರು ಬದಲಾಯಿಸಿಕೊಂಡಿದ್ದ. ಗೋವಾದ ಬಿರ್ಲಾ ಜುವಾರಿ ನಗರದಲ್ಲಿ ವಾಸಿಸುತ್ತಿದ್ದ ಈತನ ವಿರುದ್ಧ 2019 ರಲ್ಲಿ ಮಂತಯ್ಯಾ ಹಿರೇಮಠ ಎಂಬ ವ್ಯಕ್ತಿಯು ವೆರ್ಣಾ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದ.
ಕಾರವಾರದ ಸೀಬರ್ಡ್ ನಲ್ಲಿ ತಾನು ಗುತ್ತಿಗೆದಾರನಾಗಿದ್ದು ಅಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ. ಇದರಿಂದಾಗಿ ಅಲ್ಲಿ ನೌಕರಿ ಕೊಡಿಸುತ್ತೇನೆ ಎಂದು ಚೇತನ್ ನಾಯ್ಕ ಈತನು ಮಂತಯ್ಯಾ ಹಿರೇಮಠ ಈತನನ್ನು ಸುಳ್ಳು ಹೇಳಿ ನಂಬಿಸಿದ್ದ. ಇಷ್ಟೇ ಅಲ್ಲದೆಯೇ 5 ಲಕ್ಷ ರೂ. ಹಣವನ್ನೂ ಪಡೆದುಕೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ:ರಾಜ್ಯವು ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸಿದ್ಧ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೆರ್ಣಾ ಪೋಲಿಸರು ಸತತವಾಗಿ ಆರೋಪಿಗಾಗಿ ಶೋಧ ಕಾರ್ಯ ಕೈಗೊಂಡಿದ್ದರು. ಇದೀಗ ದೆಹಲಿ ಪೋಲಿಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ವೆರ್ಣಾ ಪೋಲಿಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಹೆಚ್ಚಿನ ತನಿಖಾಕಾರ್ಯ ಕೈಗೆತ್ತಿಕೊಂಡಿದ್ದಾರೆ.