ಪಣಜಿ: ಗೋವಾದಲ್ಲಿ ಗಣೇಶ ಚತುರ್ಥಿಗೆ ಗಣಪನ ಪೂಜೆಗೆ ಕರ್ನಾಟಕದಿಂದ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ಆಗಮಿಸುತ್ತಿದ್ದರು. ಆದರೆ ಪ್ರಸಕ್ತ ವರ್ಷ ಗೋವಾಕ್ಕೆ ಆಗಮಿಸಲು ಕೋವಿಡ್ ನೆಗೆಟಿವ್ ವರದಿ ಅಥವಾ ಕೋವಿಡ್ ಎರಡು ಲಸಿಕೆ ಪಡೆದಿರುವುದು ಖಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ಆಗಮಿಸದ ಕಾರಣ ಗೋವಾದಲ್ಲಿ ಪ್ರಸಕ್ತ ಗಣೇಶ ಚತುರ್ಥಿಗೆ ಪುರೋಹಿತರ ಕೊರತೆ ಎದುರಾಗುವಂತಾಗಿದೆ.
ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ ಭಾರತ.!
ಗೋವಾದಲ್ಲಿ ಪ್ರತಿಯೊಂದು ಹಬ್ಬ ಹುಣ್ಣಿಮೆಯಿರಲಿ, ಯಾವುದೇ ಪೂಜೆಯಿರಲಿ ಪುರೋಹಿತರ ಮುಖೇನವಾಗಿಯೇ ಪೂಜೆ ನಡೆಸಲಾಗುತ್ತದೆ. ಆದರೆ ಪ್ರಸಕ್ತ ವರ್ಷ ಗೋವಾಕ್ಕೆ ಆಗಮಿಸಲು ಕೆಲ ಕಠಿಣ ಕೋವಿಡ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಕರ್ನಾಟಕದ ಶಿರಸಿ, ಯಲ್ಲಾಪುರ, ಗೋಕರ್ಣ, ಕುಮಟಾ ಭಾಗದಿಂದ ಆಗಮಿಸುತ್ತಿದ್ದ ಹೆಚ್ಚಿನ ಸಂಖ್ಯೆಯ ಪುರೋಹಿತರು ಹಿಂದೇಟು ಹಾಕಿದ್ದಾರೆ. ಪ್ರತಿ ವರ್ಷಕ್ಕೆ ಹೋಲಿಸಿದರೆ ಗೋವಾಕ್ಕೆ ಶೇ 50 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕರ್ನಾಟಕದಿಂದ ಪುರೋಹಿತರು ಆಗಮಿಸಿದ್ದಾರೆ. ಇದರಿಂದಾಗಿ ಗೋವಾದಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಜನರು ಪುರೋಹಿತರಿಲ್ಲದೆಯೇ ತಾವೇ ಸ್ವತಃ ಪೂಜೆ ನಡೆಸುವ ಅನಿವಾರ್ಯತೆ ಎದುರಾಗಿದೆ.