ಪಣಜಿ: ಮುಖ್ಯಮಂತ್ರಿ ಮನೋಹರ್ ಪರೀಕರ್ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಮಾತು ಕೇಳಿ ಬರಲಾರಂಭಿಸಿದೆ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಗೋವಾ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಗೋವಾದ ಸದ್ಯದ ಸರ್ಕಾರದ ಸ್ಥಿತಿ ಹಲವು ಶಾಸಕ-ಮಂತ್ರಿಗಳಿಗೆ ಬೇಸರವನ್ನುಂಟು ಮಾಡಿದೆ ಎನ್ನಲಾಗಿದ್ದು, ಇದರ ಕಲ್ಪನೆ ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಬಂದಿದೆ. ಮುಖ್ಯಮಂತ್ರಿ ಪರೀಕರ್ ಅನಾರೋಗ್ಯದಿಂದಾಗಿ ಉಂಟಾಗಿರುವ ಸದ್ಯದ ರಾಜಕೀಯ ಸ್ಥಿತಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದೆ. ಮುಖ್ಯಮಂತ್ರಿಗಳ ಬದಲಾವಣೆ ಮಾಡುವಂತೆ ಆಗ್ರಹಿಸಿ ಕೆಲ ಎನ್‌ಜಿಒಗಳು ಪ್ರತಿಭಟನೆಯನ್ನೂ ನಡೆಸಿವೆ.
ಮಂಚದಲ್ಲಿ ಮಲಗಿದ ಸರ್ಕಾರ: ಈ ಹಿಂದೆ ಕುರ್ಚಿಗಾಗಿ ಜಗಳವಾಡುತ್ತಿದ್ದರು. ಆದರೆ ಇದೀಗ ಮಂಚದ ಮೇಲೆ ಮಲಗಿಕೊಂಡು ಸರ್ಕಾರ ನಡೆಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಪ್ರತಾಪ್‌ಸಿಂಹ ರಾಣೆ ಟೀಕಾ ಪ್ರಹಾರ ನಡೆಸಿದ್ದಾರೆ. ಗೋವಾ ಪ್ರದೇಶ ಕಾಂಗ್ರೆಸ್ ವತಿಯಿಂದ ಬಿಚೋಲಿಯಲ್ಲಿ ಆಯೋಜಿಸಿದ್ದ ಜನಾಕ್ರೋಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರವು ಜನತೆಯ ಸುಖ-ದುಃಖದಲ್ಲಿ ಸಹಭಾಗಿಯಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಬಿಜೆಪಿ ನಾಯಕರು ಸರ್ಕಾರ ನಡೆಸುವ ಪ್ರಯೋಗ ಮಾಡುತ್ತಿದ್ದಾರೆ. ಈಗಾಗಲೇ ಕಾಲ ಕಳೆದು ಹೋಗಿದೆ. ಪರೀಕರ್ ಸರ್ಕಾರವನ್ನು ಕೆಳಗಿಳಿಸುವ ಅಗತ್ಯವಿದೆ ಎಂದು ರಾಣೆ ಜನತೆಗೆ ಕರೆ ನೀಡಿದರು.
ಮುಖ್ಯಮಂತ್ರಿಯಾಗಲು ಸಿದ್ಧ: ಪುಣೆಯಲ್ಲಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಆಯುಷ್ ಮಂತ್ರಿ ಹಾಗೂ ಉತ್ತರ ಗೋವಾ ಸಂಸದ ಶ್ರೀಪಾದ ನಾಯ್ಕ, ನಾನು ಪಕ್ಷದ ಶಿಸ್ತಿನ ಕಾರ್ಯಕರ್ತ. ಇದುವರೆಗೆ ಪಕ್ಷ ನಾನು ಕೇಳದಿದ್ದರೂ ನನಗೆ ನಾಲ್ಕು ಬಾರಿ ಕೇಂದ್ರ ಮಂತ್ರಿ ಸ್ಥಾನ ನೀಡಿದೆ. ಪಕ್ಷ ಸೂಚಿಸಿದರೆ ನಾನು ಗೋವಾ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.