ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ 10 ಕೋಟಿ ರೂ ಮಂಜೂರು ಮಾಡುವ ಮೂಲಕ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದೆ ಎಂದು ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಅಖಿಲ ಗೋವಾ ಕನ್ನಡ ಮಹಾಸಂಘ ಮತ್ತು ಗೋವಾದ ವಿವಿಧ ಕನ್ನಡ ಸಂಘಟನೆಯ ಆಶ್ರಯದಲ್ಲಿ ಭಾನುವಾರ ಕಲಂಗುಟ್‍ನಲ್ಲಿ ಆಯೋಜಿಸಿದ್ದ “ಕನ್ನಡ ಸಾಂಸ್ಕೃತಿಕ ಉತ್ಸವ” ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಆಶಿರ್ವಚನ ನೀಡಿದರು.
ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕು ಎಂಬುದು ಕನ್ನಡಿಗರ ಬಹುದಿನಗಳ ಕನಸಾಗಿದೆ. ಇದನ್ನು ನಿರಾಶೆ ಮಾಡದೆಯೇ ಕೂಡಲೆ ನಿರ್ಮಾಣ ಮಾಡುವಂತೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರನ್ನು ಈ ಮೂಲಕ ಮನವಿ ಮಾಡುತ್ತೇವೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಗೋವಾದ ಕನ್ನಡ ಸಂಘಟನೆಗಳು ಬಂದು ಕರ್ನಾಟಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗೋವಾದಲ್ಲಿ ಕೂಡಲೇ ಕನ್ನಡ ಭವನ ನಿರ್ಮಾಣ ಮಾಡಲು ಮನವಿ ಮಾಡಬೇಕು ಎಂದು ಮನವಿ ಮಾಡೋಣ ಎಂದು ಹುಕ್ಕೇರಿ ಶ್ರೀಗಳು ನುಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ -ಕರ್ನಾಟಕದಲ್ಲಿ ಕೊಂಕಣಿ ಅಕಾಡಮಿಗೆ ಶಾಶ್ವತ ಅನುದಾನ ನೀಡಿದಂತೆ ಗೋವಾ ಸರ್ಕಾರವು ಕನ್ನಡ ಸಾಹಿತ್ಯ ಅಕಾಡಮಿಯನ್ನು ಗೋವಾದಲ್ಲಿ ಪ್ರಾರಂಭಿಸಲಿ ಎಂದು ಗೋವಾ ಸರ್ಕಾರವನ್ನು ಕೋರಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಗೋವಾ ರಾಮಕೃಷ್ಣ ಮಠದ ಮಹೇಶಾತ್ಮಾನಂದ ಸ್ವಾಮೀಜಿ, ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ, ಅಧ್ಯಕ್ಷ ಹನುಮಂತಪ್ಪ ಶಿರೂರ್, ಮಹೇಶಬಾಬು ಸುರ್ವೆ, ಕಲಂಗುಟ್ ಕನ್ನಡ ಸಂಘದ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ, ಮಾಪ್ಸಾ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.
ಸಭಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶೃದ್ಧಾಂಜಲಿ ಕೋರಲಾಯಿತು. ಸಭಾ ಕಾರ್ಯಕ್ರಮದ ನಂತರ ಶ್ರೀಮತಿ ಪುಷ್ಪಾರಾಧ್ಯ, ಶಿವು ಕುಮಾರ ತಂಡ ಬೆಂಗಳೂರು ಇವರಿಂದ ಸುಗಮ ಸಂಗೀತ ಕಾರ್ಯಕ್ರಮ, ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಕಲಾ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸ್ವಾಮಿ ಎಂಟರ್‍ಪ್ರೈಸಸ್ ಕಾರ್ಯಕ್ರಮ ಸಂಯೋಜಿಸಿದರು. ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಸ್ವಾಗತ ಕೋರಿದರು.
ಸಮಾರಂಭದಲ್ಲಿ ಗೋವಾದ ವಿವಿಧ ಕನ್ನಡ ಸಂಘಗಳ ಪದಾಧಿಕಾರಿಗಳು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.