ಪಣಜಿ: ಕೇಂದ್ರ ಸರ್ಕಾರ ಮೀನುಗಾರರಿಗೆ ರೂಪಿಸಿರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಗೋವಾಕ್ಕೆ 2020-21 ರಲ್ಲಿ ಕೇಂದ್ರದಿದ 41.46 ಕೋಟಿ ರೂ ಮಂಜೂರಾಗಿತ್ತು. ಆದರೆ ಪ್ರಸಕ್ತ ವರ್ಷ 2023-24 ರಲ್ಲಿ ಗೋವಾಕ್ಕೆ ಈ ಯೋಜನೆಯ ಅಡಿಯಲ್ಲಿ ಕೇವಲ 8.93 ಕೋಟಿ ರೂ. ಮಂಜೂರು ಮಾಡಲಾಗಿದೆ.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದಲ್ಲಿ ಗೋವಾದಲ್ಲಿ ಇಂಜಿನ್ ನಿಧಾನವಾಗಿದ್ದು, ಹಣ ಕಡಿತಕ್ಕೆ ಕಾರಣವಾಗಿದೆ ಎಂದು ಗೋವಾ ಫಾರ್ವರ್ಡ್ ನ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ದುರ್ಗಾದಾಸ್ ಕಾಮತ್ ಟೀಕಿಸಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಕೇಂದ್ರ ಸರ್ಕಾರದ ಯೋಜನೆಗಳನ್ನು ಮೀನುಗಾರರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆ ವಿಫಲವಾದ ಕಾರಣ ಕೇಂದ್ರದ ಹಣ ವಾಪಸ್ ಹೋಗಿದೆ ಹಾಗಾಗಿ ಕೇಂದ್ರವು ಹಣ ಕಡಿತಗೊಳಿಸಿರಬಹುದು ಎಂದು ಕಾಮತ್ ಹೇಳಿದರು. ಇದು ರಾಜ್ಯ ಸರಕಾರಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಾಮತ್ ಆರೋಪಿಸಿದರು.
ಗೋವಾ ಫೊರ್‍ವರ್ಡ್ ನಾಯಕರು ಮೀನುಗಾರಿಕಾ ಸಚಿವರಾಗಿದ್ದಾಗ ಪಕ್ಷದ ಅಧ್ಯಕ್ಷ ವಿಜಯ ಸರ್ದೇಸಾಯಿ ಅವರು ಸರ್ಕಾರದ ಯೋಜನೆಗಳನ್ನು ನೇರವಾಗಿ ಮೀನುಗಾರರಿಗೆ ತಲುಪಿಸಲು ‘ಮೀನುಗಾರರ ಕ್ರಿಯಾ ತಂಡ’ ರಚಿಸಿದ್ದರು ಮತ್ತು ಈ ಪಡೆಯ ಅಧಿಕಾರಿಗಳು ಮೀನುಗಾರರ ಬಳಿಗೆ ತೆರಳಿ ಯೋಜನೆಗಳ ಬಗ್ಗೆ ತಿಳಿಸಿ ಸಮಸ್ಯೆಯನ್ನು ಆಲಿಸುತ್ತಿದ್ದರು. ಆದರೆ ನಂತರ ಈ ಯೋಜನೆಯನ್ನು ಬಿಜೆಪಿ ರದ್ದುಗೊಳಿಸಿತ್ತು. ಮೀನುಗಾರರಿಗೆ ಯೋಜನೆಯನ್ನು ತಲುಪಿಸಲು ‘ಮೀನುಗಾರರ ಕ್ರಿಯಾ ಪಡೆ’ ಇಲಾಖೆಯನ್ನು ಪುನಃ ಸಕ್ರಿಯಗೊಳಿಸುವಂತೆ ದುರ್ಗಾದಾಸ್ ಕಾಮತ್ ಆಘ್ರಹಿಸಿದ್ದಾರೆ.