ಈ ಬಾರಿಯ ಗೋವಾ ಚುನಾವಣೆ ಬಿಜೆಪಿ ಪಾಲಿಗೆ ಹಲವು ರೀತಿಯಲ್ಲಿ ಹೊಸತು. ಅವುಗಳಲ್ಲಿ ಪ್ರಮುಖವಾದದ್ದು ಆ ಪಕ್ಷದ ಪ್ರಭಾವಿ ನಾಯಕ, ಗೋವಾದ ಮಾಜಿ ಸಿಎಂ ದಿ| ಮನೋಹರ್ ಪರ್ರಿಕರ್ ಅನುಪಸ್ಥಿತಿಯಲ್ಲಿ ಬಿಜೆಪಿ ಎದುರಿಸುತ್ತಿರುವ ಮೊದಲ ಚುನಾವಣೆಯಿದು. ಈ ಸವಾಲನ್ನು ಸಮರ್ಥವಾಗಿ ಮೆಟ್ಟುವ ಮೊದಲೇ ಬಿಜೆಪಿಗೆ ಪರ್ರಿಕರ್ ಪುತ್ರ ಉತ್ಪಲ್ ಪರ್ರಿಕರ್ ಬಂಡಾಯವೆದ್ದು ಪಣಜಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಿಜೆಪಿ ವಿರುದ್ಧವೇ ಕಣಕ್ಕಿಳಿದಿದ್ದಾರೆ. ಇದು ಬಿಜೆಪಿಗೆ ಮತ್ತೊಂದು ಸವಾಲಾಗಿ ಮಾರ್ಪಟ್ಟಿದೆ.
ಪಣಜಿ ಕ್ಷೇತ್ರವೀಗ ಬಿಜೆಪಿ ಹಾಗೂ ಬಿಜೆಪಿಯಿಂದ ಬಂಡಾಯವೆದ್ದು ಆಚೆ ಬಂದಿರುವ ಉತ್ಪಲ್ ನಡುವಿನ ಸ್ವಾಭಿಮಾನದ ಹೋರಾಟದ ಸಂಕೇತ ಎನಿಸಿದೆ. ಈ ಕ್ಷೇತ್ರ 1994ರಿಂದ 2019ರ ವರೆಗೆ ಮನೋಹರ್ ಪರ್ರಿಕರ್‌ರವರ ಭದ್ರಕೋಟೆಯಾ ಗಿತ್ತು. 2019ರಲ್ಲಿ ಪರ್ರಿಕರ್ ನಿಧನದ ಅನಂತರ ಕಾಂಗ್ರೆಸ್‌ನಿಂದ ಹಲವಾರು ಬಲಿಷ್ಠ ನಾಯಕರನ್ನು ಬಿಜೆಪಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಟಾನಾಸಿಯೊ ಮೊನ್ಸೆರೆಟ್ಟೆ ಅವರಿಗೇ ಟಿಕೆಟ್ ನೀಡಿತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ತಮಗೇ ಬಿಟ್ಟುಕೊಡುವಂತೆ ಉತ್ಪಲ್ ಪರ್ರಿಕರ್ ಹಠ ಹಿಡಿದರು.
ಇಬ್ಬರಿಗೂ ಮನೋಹರ್ ಆಧಾರ!: ಉತ್ಪಲ್ ಅವರು ತನ್ನ ತಂದೆಯ ಹಿರಿಮೆ, ಸಾಧನೆ, ಹೆಗ್ಗಳಿಕೆಗಳನ್ನು ಎಲ್ಲಿ ತನ್ನ ಗೆಲುವಿಗೆ ಬಳಸಿಕೊಂಡು ಬಿಡುತ್ತಾರೋ ಎಂಬ ಭೀತಿಯಲ್ಲಿರುವ ಬಿಜೆಪಿ, ಮನೋಹರ್ ಪರ್ರಿಕರ್ ಅವರ ಸಾಧನೆಗಳನ್ನು ತನ್ನ ಪ್ರಚಾರಕ್ಕೂ ಬಳಸಿಕೊಳ್ಳುತ್ತಿದೆ. ಗೋವಾ ಚುನಾವಣೆಗಾಗಿ ಬಿಡುಗಡೆ ಮಾಡಲಾಗಿರುವ ಬಿಜೆಪಿ ಪ್ರಣಾಳಿಕೆಯ ಮುಖ ಪುಟದಲ್ಲಿ ಪರ್ರಿಕರ್ ಫೋಟೋವನ್ನೂ ಹಾಕಿದೆ. ಉತ್ಪಲ್ ಕೂಡಾ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.
ಬಿಜೆಪಿಗೆ ಲಾಭವಾಗುವ ವಿಚಾರಗಳೇನು?: ಈ ಕ್ಷೇತ್ರದ ನಿಷ್ಠಾವಂತ ಮತದಾರರು, ಪಕ್ಷ ನೋಡಿ ಮತಹಾಕುತ್ತಾರೆ, ವ್ಯಕ್ತಿಯನ್ನು ನೋಡಿ ಅಲ್ಲ ಎಂಬುದು ಬಿಜೆಪಿ ಲೆಕ್ಕಾಚಾರ. ಏಕೆಂದರೆ ಈ ಕ್ಷೇತ್ರ ತನ್ನ 1994ರಿಂದ 2019ರ ವರೆಗೆ ಪಣಜಿ ಕ್ಷೇತ್ರದಲ್ಲಿ ಮನೋಹರ್ ಪರ್ರಿಕರ್ ಹಿಡಿತದಲ್ಲೇ ಇತ್ತು. 2017ರಲ್ಲಿ ಪರ್ರಿಕರ್, ರಕ್ಷಣ ಸಚಿವರಾಗಿ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡಾಗ, ಪಣಜಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪರ್ರಿಕರ್ ಆಪ್ತ ಸಿದ್ದಾರ್ಥ ಕುಂಕಾಲಿಂಕರ್‌ಗೆ ಟಿಕೆಟ್ ನೀಡಿ ಗೆಲ್ಲಿಸಿತ್ತು. 2019ರಲ್ಲಿ ಪರ್ರಿಕರ್ ಪುನಃ ಗೋವಾ ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗ, ಕುಂಕಾಲಿಂಕರ್ ತಮ್ಮ ಶಾಸಕ ಸ್ಥಾನ ಬಿಟ್ಟುಕೊಟ್ಟರು. ಆಗ, ಪುನಃ ಪಣಜಿಯಿಂದಲೇ ಮತ್ತೆ ಸ್ಪರ್ಧಿಸಿ ಗೆದ್ದಿದ್ದ ಮನೋಹರ್ ಪರ್ರಿಕರ್, ಸಿಎಂ ಆಗಿ ಮುಂದುವರಿದರು. 2019ರಲ್ಲಿ ಮನೋಹರ್ ನಿಧನರಾದ ಅನಂತರ ಆ ವರ್ಷ ಗೋವಾ ಫಾರ್ವರ್ಡ್ ಪಾರ್ಟಿಯಿಂದ ಬಿಜೆಪಿಗೆ ಬಂದ ಮೊನ್ಸೆರೆಟ್ಟೆಗೆ ಬಿಜೆಪಿ ಟಿಕೆಟ್ ನೀಡಿತ್ತು ಮತ್ತು ಅವರೇ ಗೆದ್ದರು.
ಉತ್ಪಲ್‌ಗೆ ಲಾಭವಾಗುವ ವಿಚಾರಗಳಾವುವು?: ಇಲ್ಲಿ ಮೂರು ಆಯಾಮಗಳು ಉತ್ಪಲ್ ಪರವಾಗಿ ಕೆಲಸ ಮಾಡಲಿವೆ ಎಂದು ಅಂದಾಜಿಸಲಾಗಿದೆ. ಪರ್ರಿಕರ್ ಅವರಿಗೆ ನಿಷ್ಠರಾಗಿದ್ದ ಕೆಲವು ಬಿಜೆಪಿ ನಾಯಕರು, ಕಾರ್ಯಕರ್ತರು ಉತ್ಪಲ್‌ಗೆ ನೇರ ಅಥವಾ ಪರೋಕ್ಷ ಸಹಾಯ ಮಾಡಬಹುದು. ಉತ್ಪಲ್ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿಯೂ ಮತದಾರರ ಮೇಲೆ ಪರಿಣಾಮ ಬೀರಬಹುದು.
ಮೂರನೆಯದಾಗಿ, ಇತ್ತೀಚಿನ ದಿನಗಳಲ್ಲಿ ಉತ್ಪಲ್, ಗೋವಾ ಯುವಜನರ ಐಕಾನ್‌ನಂತಾಗಿರುವುದು ಅವರಿಗೆ ನೆರವಾಗಬಹುದು ಎನ್ನಲಾಗಿದೆ.
ಮೊನ್ಸೆರೆಟ್ಟೆ 2005ರಲ್ಲಿ ಮನೋಹರ್ ಪರ್ರಿಕ್ಕರ್ ಅವರ ಸಮ್ಮಿಶ್ರ ಸರಕಾರದಿಂದ ಹೊರಗೆ ಬಂದು ಅದನ್ನು ಕೆಡವಿದ್ದನ್ನು ಜನರು ಮರೆತಿಲ್ಲ. ಹಾಗಾಗಿ ಈ ವಿಚಾರವು ಚುನಾವಣೆ ಸಂದರ್ಭದಲ್ಲಿ ಉತ್ಪಲ್‌ಗೆ ನೆರವಾಗಬಹುದು ಎನ್ನಲಾಗುತ್ತಿದೆ. ಇನ್ನು ಪಣಜಿಯಲ್ಲಿ ಕೆಥೋಲಿಕ್ ಕ್ರೈಸ್ತರ ಮತಗಳು ನಿರ್ಣಾಯಕವಾಗಿದ್ದು, ಅವು ಈ ಬಾರಿ ವಿಭಜನೆಗೊಳ್ಳಲಿವೆ ಎನ್ನಲಾಗಿದೆ.
ಮೊನ್ಸೊರಾಟ್ ಕೂಡ ಕೆಥೋಲಿಕ್ ಕ್ರೈಸ್ತರು. ಕಾಂಗ್ರೆಸ್ ಕೂಡ ತನ್ನ ಪ್ರಭಾವಿ ನಾಯಕ ಕೆಥೋಲಿಕ್ ಕ್ರೈಸ್ತರಾದ ಎಲ್ವಿಸ್ ಗೋಮ್ಸ್‌ರನ್ನು ಪಣಜಿಯಲ್ಲಿ ಕಣಕ್ಕಿಳಿಸಿದೆ. ಮನೋಹರ್ ಪರ್ರಿಕರ್ ಅವರಿಗೆ ಕೆಥೋಲಿಕ್ ಕ್ರೈಸ್ತರ ಶ್ರೀರಕ್ಷೆಯಿತ್ತು. ಇವರಲ್ಲಿ ಒಂದಿಷ್ಟು ಜನರಾದರೂ ಉತ್ಪಲ್ ಕೈ ಹಿಡಿಯುವ ಸಾಧ್ಯತೆಯಿದೆ.