ಪಣಜಿ : ದಕ್ಷಿಣ ಗೋವೆಯ ಹಲವೆಡೆಗಳಲ್ಲಿ ಕ್ರೈಸ್ತರ ಅನೇಕ ಧಾರ್ಮಿಕ ಚಿಹ್ನೆಗಳನ್ನು ವಿರೂಪಗೊಳಿಸಲಾದ ಸರಣಿ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ನಿನ್ನೆ ಶುಕ್ರವಾರ ತಡರಾತ್ರಿ 50ರ ಹರೆಯದ ಫ್ರಾನ್ಸಿಸ್ ಪಿರೇರ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಿಶೇಷ ತನಿಖಾ ದಳದ ಅಧಿಕಾರಿಗಳು ದಕ್ಷಿಣ ಗೋವೆಯ ಕುರ್ತೋರಿಮ್ ನಲ್ಲಿ ಆರೋಪಿ ಫ್ರಾನ್ಸಿಸ್ ಪಿರೇರ ನನ್ನು ಬಂಧಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯು ಗ್ರಾಮವೊಂದರಲ್ಲಿನ ಕ್ರೈಸ್ತ ವಿಗ್ರಹವೊಂದನ್ನು ವಿರೂಪಗೊಳಿಸಲು ಉದ್ದೇಶಿಸಿದ್ದ. ಆ ವೇಳೆಯಲ್ಲಿ ಪೊಲೀಸರ ತಂಡವನ್ನು ಕಂಡೊಡನೆಯೇ ಆತ ಪರಾರಿಯಾಗತೊಡಗಿದ. ಪೊಲೀಸರು ಆತನನ್ನು ಒಡನೆಯೇ ಬೆನ್ನಟ್ಟಿ ಬಂಧಿಸುವಲ್ಲಿ ಸಫಲರಾದರು.
ಆರೋಪಿಯನ್ನು ಪೊಲೀಸರು ಹಿಡಿದು ಪ್ರಶ್ನಿಸಿದಾಗ ತಾನು ಕ್ರೈಸ್ತ ವಿಗ್ರಹಗಳನ್ನು ವಿರೂಪಗೊಳಿಸುವ ಸರಣಿ ಕೃತ್ಯಗಳನ್ನು ಎಸಗಿದ್ದು ಹೌದೆಂದು ಒಪ್ಪಿಕೊಂಡ.
ದಕ್ಷಿಣ ಗೋವಾ ಜಿಲ್ಲೆಯಲ್ಲಿ ಕಳೆದ ಜು.1ರಿಂದ ಆರೋಪಿಯು ಕನಿಷ್ಠ 12 ಕಡೆಗಳಲ್ಲಿನ ಶಿಲುಬೆಯನ್ನು ತುಂಡರಿಸಿದ್ದಲ್ಲದೆ ದೇವಸ್ಥಾನವೊಂದನ್ನೂ ಹಾನಿಗೊಳಿಸಿದ್ದ. ಆರೋಪಿ ಎಸಗಿದ ಈ ಬಗೆಯ ಈಚಿನ ಕೃತ್ಯಗಳು ನಿನ್ನೆ ಮಡಗಾಂವ್‌ನಿಂದ ವರದಿಯಾಗಿದ್ದವು.
ಕ್ರೈಸ್ತರ ಧಾರ್ಮಿಕ ಚಿಹ್ನೆಗಳನ್ನು ವಿರೂಪಗೊಳಿಸುವ ಕೃತ್ಯದ ತನಿಕೆಯನ್ನು ಸಿಬಿಐಗೆ ಒಪ್ಪಿಸುವ ಸಾಧ್ಯತೆಯನ್ನು ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರು ತಳ್ಳಿ ಹಾಕಿದ್ದರು. ರಾಜ್ಯದ ಪೊಲೀಸರ ಮೇಲೆ ತನಗೆ ಪೂರ್ತಿ ವಿಶ್ವಾಸವಿದೆ ಎಂದು ಹೇಳಿದರು.