ಪಣಜಿ: ಗೋವಾದ ಜಗತ್ಪ್ರಸಿದ್ಧ ದೂಧ್‌ಸಾಗರ ಜಲಪಾತ ಭಾರಿ ಮಳೆಯಿಂದಾಗಿ ಮೈದುಂಬಿಕೊಂಡಿದೆ. ಆದರೆ ಈ ಜಲಪಾತ ವೀಕ್ಷಣೆಗೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ. ನಿಷೇಧ ಹೇರಲಾಗಿದ್ದೂ ಇದನ್ನು ಉಲ್ಲಂಘಿಸಿ ದೂಧ್‌ಸಾಗರ ಜಲಪಾತ ವೀಕ್ಷಣೆಗೆ ಆಗಮಿಸುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಧಾರಾಬಾಂದೋಡ ಉಪಜಿಲ್ಲಾಧಿಕಾರಿ ನೀಲೇಶ ಧಯಾಮೋಡಕರ್ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಜಿಲ್ಲಾಡಳಿತದ ಈ ಆದೇಶ ಉಲ್ಲಂಘಿಸಿ ಜಲಪಾತ ವೀಕ್ಷಣೆಗೆ ಆಗಮಿಸಿದರೆ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದೂಧ್‌ಸಾಗರ ಜಲಪಾತ ಮೈದುಂಬಿಕೊಂಡಿದೆ. ಕಳೆದ ಶನಿವಾರ ಮತ್ತು ಭಾನುವಾರ 4,000 ರಿಂದ 5,000 ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸಿದ್ದರು, ಆದರೆ ರೈಲ್ವೆ ಪೋಲಿಸರು ಜಲಪಾತ ವೀಕ್ಷಣೆಗೆ ಅವಕಾಶ ನೀಡದೆಯೇ ಪ್ರವಾಸಿಗರನ್ನು ವಾಪಸ್ಸು ಕಳುಹಿಸಿದ್ದರು. ಅಂದಿನ ಈ ಎಲ್ಲ ಗಲಾಟೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಘಟನೆಯ ಕುರಿತು ಪ್ರವಾಸಿಗರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಈ ರೀತಿ ಆಗದಂತೆ ಹಾಗೂ ಪ್ರವಾಸಿಗರಿಗೆ ಆಗುವ ತೊಂದರೆ, ಗಲಾಟೆ ತಪ್ಪಿಸಲು ಏನು ಮಾಡಬೇಕು ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಚರ್ಚಿಸಲಿದ್ದಾರೆ ಎನ್ನಲಾಗಿದೆ. ಜುಲೈ 18 ರಂದು ವಿವಿಧ ಅಧಿಕಾರಿಗಳ ತಂಡ ದೂಧಸಾಗರ ಜಲಪಾತಕ್ಕೆ ಭೇಟಿ ನೀಡಿತ್ತು.
ಈ ಹಿಂದಿನ ದಕ್ಷಿಣ ಗೋವಾ ಜಿಲ್ಲಾಧಿಕಾರಿ ಜ್ಯೋತಿ ಕುಮಾರಿ ಅವರು 2022ರ ಸೆಪ್ಟೆಂಬರ್‌ನಲ್ಲಿ ದೂಧಸಾಗರ ಜಲಪಾತದ ಮುಖ್ಯ ಸ್ಟ್ರೀಮ್‍ನಲ್ಲಿ ಮುಳುಗಿದ ಹಲವಾರು ಘಟನೆಗಳನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಈ ಆದೇಶ ಸರಿಯಾಗಿ ಜಾರಿಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ದಕ್ಷಿಣ ಗೋವಾ ಜಿಲ್ಲಾಧಿಕಾರಿ ಅಶ್ವಿನ್ ಚಂದ್ರು ಎ.ಸಿಂಗ್ ಸಭೆ ನಡೆಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ದೂಧಸಾಗರಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀನೀತ್ ಕೊತ್ವಾಲೆ, ದೀಪಕ್ ದೇಸಾಯಿ, ವಿಶಾಲ್ ಕುಂಡೈಕರ್, ನೈಋತ್ಯ ರೈಲ್ವೆ ಅಧಿಕಾರಿಗಳು, ಗೋವಾ ಅರಣ್ಯಾಧಿಕಾರಿಗಳಾದ ಆನಂದ್ ಜಾಧವ್, ಸಿದ್ಧೇಶ್ ನಾಯ್ಕ್, ವಾಸ್ಕೋ ರೈಲ್ವೇ ಇನ್ಸ್‍ಪೆಕ್ಟರ್ ಆನಂದ್ ಶಿರೋಡ್ಕರ್, ಸೈಬರ್ ಕ್ರೈಂ ಅಧೀಕ್ಷಕ ಶಿವೇಂದ್ರ ಭೂಷಣ್, ಜಿಲ್ಲಾಧಿಕಾರಿ ನೀಲೇಶ್ ಧೈಗೋಡ್ಕರ್ ಉಪಸ್ಥಿತರಿದ್ದರು. ಈ ಹಿಂದಿನ ಜಿಲ್ಲಾಧಿಕಾರಿ ಜ್ಯೋತಿ ಕುಮಾರಿ ಅವರು ನೀಡಿದ ನಿರ್ದೇಶನಗಳು ಮತ್ತು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬಹುದೇ ಎಂಬ ಬಗ್ಗೆಯೂ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಇಷ್ಟೇ ಅಲ್ಲದೆಯೇ ಪ್ರತಿದಿನ ದೂಧಸಾಗರ ಜಲಪಾತದ ರೈಲ್ವೆ ಸೇತುವೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆಯೂ ರೈಲ್ವೆ ಪೊಲೀಸರಿಗೆ ಆದೇಶಿಸಲಾಗಿದೆ. ಇದಲ್ಲದೆ, ಆದೇಶವನ್ನು ಪಾಲಿಸದವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಆದೇಶಿಸಲಾಗಿದೆ. ಈ ಹಿಂದೆ ಇದ್ದ ಕಟ್ಟುನಿಟ್ಟಿನ ಕ್ರಮವನ್ನು ಮತ್ತೆ ಜಾರಿಗೆ ತರಲಾಗಿದೆ ಎಂದು ಧಾರಾಬಾಂದೋಡ ಉಪಜಿಲ್ಲಾಧಿಕಾರಿ ನೀಲೇಶ ಧಯಾಮೋಡಕರ್ ಆದೇಶ ಹೊರಡಿಸಿದ್ದಾರೆ.