Advertisement

ಗೋವಾ: ಇಬ್ಬರ ಅನರ್ಹತೆಗೆ ಕಾಂಗ್ರೆಸ್‌ ಮನವಿ: ಅಧಿವೇಶನಕ್ಕೆ ಹಾಜರಾದ ಐವರು ಶಾಸಕರು

08:46 PM Jul 11, 2022 | Team Udayavani |

ಪಣಜಿ: ಗೋವಾದಲ್ಲಿನ ಪ್ರತಿಪಕ್ಷ ಕಾಂಗ್ರೆಸ್‌ ಇಬ್ಬರು ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ಮನವಿ ಸಲ್ಲಿಸಲಾಗಿದೆ.

Advertisement

11 ಶಾಸಕರ ಪೈಕಿ ಐವರು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ ಎಂಬ ವದಂತಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್‌, ಮೈಕೆಲ್‌ ಲೋಬೋ ಅವರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ ರಮೇಶ್‌ ತವಾಡ್ಕರ್‌ ಅವರಿಗೆ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಮಿತ್‌ ಪಾಟ್ಕರ್‌ ಅವರು ಲಿಖಿತ ಮನವಿ ಸಲ್ಲಿಸಿದ್ದಾರೆ.

ಜತೆಗೆ ಪ್ರತಿಪಕ್ಷ ನಾಯಕ ಸ್ಥಾನದಿಂದ ಮೈಕೆಲ್‌ ಲೋಬೋ ಅವರನ್ನು ವಜಾ ಮಾಡಿರುವ ಬಗ್ಗೆ ಕೈಗೊಂಡಿರುವ ನಿರ್ಧಾರವನ್ನು ಅದರಲ್ಲಿ ಪ್ರಸ್ತಾಪಿಸಲಾಗಿದೆ.

ಇಬ್ಬರು ಮುಖಂಡರು ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್‌ನ ಸದಸ್ಯತ್ವ ತೊರೆದಿದ್ದಾರೆ. ಹೀಗಾಗಿ, ಅವರನ್ನು ಅನರ್ಹಗೊಳಿಸುವಂತೆ ಕೋರಲಾಗಿದೆ. ಬಿಜೆಪಿ ನಮ್ಮ ಶಾಸಕರನ್ನು ಸಳೆಯುವ ಪ್ರಯತ್ನದಲ್ಲಿ ವಿಫ‌ಲವಾಗಿದೆ ಎಂದು ಪಾಟ್ಕರ್‌ ವಿಧಾನಸಭೆ ಸ್ಪೀಕರ್‌ ಅವರನ್ನು ಭೇಟಿಯಾದ ಬಳಿಕ ಹೇಳಿದ್ದಾರೆ.

Advertisement

ಈ ಎಲ್ಲಾ ಬೆಳವಣಿಗೆಗಳ ನಡುವೆ, ಬಿಜೆಪಿ ಕಡೆ ಹೋಗಲು ತಯಾರಿ ನಡೆಸಿದ್ದ ಆರೋಪ ಹೊತ್ತಿರುವ ಶಾಸಕರನ್ನು ಹೊರತುಪಡಿಸಿ ಉಳಿದ ಐವರು ಶಾಸಕರನ್ನು ಗುಪ್ತ ಸ್ಥಳಕ್ಕೆ ಕೊಂಡೊಯ್ದಿದೆ ಎಂದು ಮೂಲಗಳು ತಿಳಿಸಿವೆ.

ಅಧಿವೇಶನದಲ್ಲಿ ಭಾಗಿ:
ಈ ಎಲ್ಲ ಬೆಳವಣಿಗೆಗೆ ಪೂರಕವಾಗಿ, ಗೋವಾ ವಿಧಾನಸಭೆಯ ಅಧಿವೇಶನ ಸೋಮವಾರದಿಂದ ಶುರುವಾಗಿದೆ. ನಾಪತ್ತೆಯಾಗಿದ್ದರು ಎಂದು ಹೇಳಲಾಗಿದ್ದ ಶಾಸಕರಾದ ಮೈಕೆಲ್‌ ಲೋಬೋ, ದಿಗಂಬರ ಕಾಮತ್‌, ಕೇದಾರ್‌ ನಾಯ್ಕ, ರಾಜೇಶ್‌ ಫಾಲೆªàಸಾಯಿ ಮತ್ತು ಡೇಲಿಯಾ ಲೋಬೋ ಅವರು ಅಧಿವೇಶನಕ್ಕೆ ಆಗಮಿಸಿದ್ದಾರೆ.

“ಅಪರೇಷನ್‌ ಕಮಲ’ ವಿಫ‌ಲ: ದಿನೇಶ್‌
ಬಿಜೆಪಿಯ ಆಪರೇಷನ್‌ ಕಮಲ ವಿಫ‌ಲವಾಗಿದೆ ಎಂದು ಗೋವಾದಲ್ಲಿನ ಕಾಂಗ್ರೆಸ್‌ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಮಹಾರಾಷ್ಟ್ರದ ಮಾದರಿಯನ್ನು ಗೋವಾದಲ್ಲಿ ಅನುಸರಿಸಲು ಮುಂದಾಗಿದ್ದ ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಈ ಹಂತದಲ್ಲಿ ನಿಷ್ಠಾವಂತರಾಗಿ ಕಾಂಗ್ರೆಸ್‌ನಲ್ಲಿ ಯಾರು ಇದ್ದಾರೆ, ಇಲ್ಲ ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗಿದೆ. ಶಾಸಕರಾಗಿರುವ ದಿಗಂಬರ ಕಾಮತ್‌, ಮೈಕೆಲ್‌ ಲೋಬೋ ಅವರೇ ಇತರ ಶಾಸಕರನ್ನು ಬಿಜೆಪಿಗೆ ಸೇರಲು ಮನವೊಲಿಕೆ ಮಾಡುತ್ತಿದ್ದಾರೆ. ಎಲ್ಲಾ ಆಮಿಷಗಳ ಹೊರತಾಗಿಯೂ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರು ಕಾಂಗ್ರೆಸ್‌ ಜತೆಗೇ ಇದ್ದಾರೆ. ಒಂದು ತಿಂಗಳಿನಿಂದ ನಡೆಸಲು ಪ್ರಯತ್ನಿಸುತ್ತಿದ್ದ ಆಪರೇಷನ್‌ ಕಮಲ ವಿಫ‌ಲವಾಗಿದೆ ಎಂದು ಹೇಳಿದ್ದಾರೆ. ಶಾಸಕರಾದ ಮೈಕೆಲ್‌ ಲೋಬೋ, ಡೆಲಿಯಾ ಲೋಬೋ, ದಿಗಂಬರ ಕಾಮತ್‌ ಮತ್ತು ಕೇದಾರ್‌ ನಾಯ್ಕ ಪಕ್ಷದಲ್ಲಿ ಇಲ್ಲ ಎಂದರು ದಿನೇಶ್‌ ಗುಂಡೂರಾವ್‌.

12 ಶಾಸಕರು ಬಿಜೆಪಿಗೆ: ಸಿ.ಟಿ. ರವಿ
ಗೋವಾದಲ್ಲಿರುವ ಬಿಜೆಪಿಯೇತರ 12 ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂದು ಗೋವಾ ಬಿಜೆಪಿಯ ಉಸ್ತುವಾರಿ ಹೊಂದಿರುವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಬಿಜೆಪಿ ಜತೆಗೆ ನಿರಂತರ ಸಂಪರ್ಕ ಹೊಂದಿರುವ 12 ಶಾಸಕರು, ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next