ಪಣಜಿ: ಮನೋಹರ ಪಾರೀಕರ್ ಮರಣಾನಂತರ ಗೋವಾ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಮೋದ್ ಸಾವಂತ್ ಬುಧ ವಾರ ವಿಶ್ವಾಸಮತ ಸಾಬೀತುಪಡಿಸಿದ್ದಾರೆ. 20 ಶಾಸಕರು ಬಿಜೆಪಿ ಪರ ಮತ ಹಾಕಿದ್ದಾರೆ. 15 ವಿರುದ್ಧ ಮತ ಬಿದ್ದಿವೆ.
ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದ ಸಾವಂತ್‌ಗೆ, ಬಿಜೆಪಿಯ 11 ಶಾಸಕರು, ಗೋವಾ ಫಾರ್ವರ್ಡ್ ಪಾರ್ಟಿ, ಮಹಾ ರಾಷ್ಟ್ರವಾದಿ ಗೋಮಂತಕ್ ಪಾರ್ಟಿಯ ತಲಾ 3 ಹಾಗೂ ಮೂವರು ಸ್ವತಂತ್ರರು ಬೆಂಬಲಿಸಿದ್ದಾರೆ. ಕಾಂಗ್ರೆಸ್‌ನ 14, ಎನ್‌ಸಿಪಿಯ ಒಬ್ಬ ಶಾಸಕ ಸರಕಾರದ ವಿರುದ್ಧ ಮತ ಚಲಾವಣೆ ಮಾಡಿದ್ದರು.
ವಿಶ್ವಾಸಮತ ಸಾಬೀತಿನ ನಂತರ ಮಾತನಾಡಿದ ಸಾವಂತ್, ಮನೋಹರ ಪಾರೀಕರ್ ಸಿಎಂ ಆಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದು ವರಿಸಲು ಸಹಕಾರ ನೀಡಬೇಕು ಎಂದರು. ಈ ವೇಳೆ ಹಲವು ಬಾರಿ ಪಾರೀಕರ್ ನೆನಪಿಸಿಕೊಂಡು ದುಃಖತಪ್ತರಾದರು. ಶಾಸಕ, ಸ್ಪೀಕರ್, ಸಿಎಂ ಆಗಲು ಅವರೇ ಕಾರಣ ಎಂದರು.
ಬಿಜೆಪಿ ವಿರುದ್ಧ ಶಿವಸೇನೆ ಟೀಕೆ: ಗೋವಾದ ಇತ್ತೀಚಿನ ಬೆಳವಣಿಗೆ ಬಗ್ಗೆ ತನ್ನ ಪಕ್ಷದ ಮುಖವಾಣಿಯಾದ “ಸಾಮ್ನಾ’ದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ, “ಪಾರೀಕರ್ ಚಿತೆ ಆರುವುದಕ್ಕೂ ಮುನ್ನವೇ ಚದುರಂಗದಾಟ ಶುರುವಾಗಿದ್ದು, ಪಕ್ಷಗಳಿಗೆ ನಾಚಿ ಕೆಗೇಡಿನ ಸಂಗತಿ. ಸೋಮವಾರ ಮಧ್ಯರಾತ್ರಿ ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸುವಂಥ ಅವಸರ ಏನಿತ್ತು’ ಎಂದು ಪ್ರಶ್ನಿಸಿದೆ.
“ಬಿಜೆಪಿ ಜೊತೆ ಮೈತ್ರಿಯಾದ ಯಾವುದೇ ರಾಜ್ಯದಲ್ಲೂ ಡಿಸಿಎಂ ಹುದ್ದೆ ನೀಡಿಲ್ಲ ಎಂಬ ಕಾರಣ ನೀಡಿ, ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಡಿಸಿಎಂ ಸ್ಥಾನ ನಿರಾಕರಿಸಲಾಯಿತು. ಆದರೆ ಈಗ 20 ಶಾಸಕರಿರುವ ರಾಜ್ಯದಲ್ಲಿ ಇಬ್ಬರು ಡಿಸಿಎಂಗಳನ್ನು ನೇಮಿಸ ಲಾಗಿದೆ’ ಎಂದೂ ಶಿವಸೇನೆ ಟೀಕಿಸಿದೆ.