ಪಣಜಿ : ಗೋವೆಯ ರಾಜಕೀಯ ರಂಗದಲ್ಲಿನ ಇಂದು ಬುಧವಾರ ನಸುಕಿನ ವೇಳೆ ನಡೆದಿರುವ ಹಠಾತ್ ಬೆಳವಣಿಗೆಯಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಇಬ್ಬರು ಶಾಸಕರು ತಮ್ಮ ಪಕ್ಷವನ್ನು ತೊರೆದು ಬಿಜೆಪಿ ಸೇರಿದರು.
ಇದೇ ವೇಳೆ ಗೋವೆಯ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಎಂಜಿಪಿ ನಾಯಕ ಸುದಿನ್ ಧವಳೀಕರ್ ಅವರನ್ನು ಉಪ ಮುಖ್ಯಮಂತ್ರಿ ಪದದಿಂದ ಕಿತ್ತು ಹಾಕಿದರು.
ಸುದಿನ್ ಧವಳೀಕರ್ ಅವರನ್ನು ಸರಕಾರ ವಿರೋಧಿ ಚಟುವಟಿಕೆಗಳಿಗಾಗಿ ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎಂದು ಗೋವಾ ಸಿಎಂ ಸಾವಂತ್ ಹೇಳಿದರು.
ಸಿಎಂ ಸಾವಂತ್ ಅವರು ಐಎಎನ್‌ಎಸ್ ಗೆ ಹೇಳಿರುವುದು ಇಷ್ಟು :
”ಧವಳೀಕರ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದೇವೆ. ಅವರು ಸರಕಾರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ನಾವು ಮೈತ್ರಿ ಸರಕಾರದಲ್ಲಿ ಇದ್ದೇವೆ. ಆದರೆ ಆತನ ಸಹೋದರ ದೀಪಕ್ ಧವಳೀಕರ್ ಶಿರೋಡ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾವು ಪದೇ ಪದೇ ಅವರನ್ನು ಕೇಳಿಕೊಂಡೆವು; ಆದರೂ ಅವರು ಹಿಂದಕ್ಕೆ ಮರಳಲು ಸಿದ್ಧರಿಲ್ಲ. ಆದುದರಿಂದ ನಾವು ಈ ನಿರ್ಧಾರ ಕೈಗೊಂಡೆವು”.
ಗೋವಾ ಅಸೆಂಬ್ಲಿಯಲ್ಲಿ ಮೂವರು ಎಂಜಿಪಿ ಶಾಸಕರಿದ್ದಾರೆ. ಈ ಪೈಕಿ ಧವಳೀಕರ್ ಒಬ್ಬರೇ ಬಿಜೆಪಿ ಸೇರಲು ನಿರ್ಧರಿಸದ ಎಂಜಿಪಿ ಶಾಸಕರಾಗಿದ್ದಾರೆ.
ಇಂದು ನಸುಕಿನ ವೇಳೆ ನಡೆದಿರುವ ಈ ಹಠಾತ್ ವಿದ್ಯಮಾನವನ್ನು ಧವಳೀಕರ್ ಅವರು ಚೌಕೀದಾರರ ಡಕಾಯಿತಿ ಎಂದು ಖಂಡಿಸಿದ್ದಾರೆ.
ಗೋವಾ ಸಿಎಂ ಸಾವಂತ್ ಅವರು ಧವಳೀಕರ್ ಅವರನ್ನು ಡಿಸಿಎಂ ಹುದ್ದೆಯಿಂದ ಕೈಬಿಡುವ ತನ್ನ ನಿರ್ಧಾರವನ್ನು ರಾಜ್ಯಪಾಲೆ ಮೃದುಲಾ ಸಿನ್ಹಾ ಗೆ ತಿಳಿಸಿದ್ದಾರೆ.