ಪಣಜಿ: ರಾಜ್ಯದಲ್ಲಿ ಕೊರೊನಾ ಭೀತಿ ಕಡಿಮೆಯಾಗಿದ್ದರೂ ಕೂಡ ಮತ್ತೊಂದೆಡೆಗೆ ಕೊರೊನಾ ರೂಪಾಂತರಿ ಓಮೆಕ್ರಾನ್ ಭೀತಿ ಎದುರಾಗಿದೆ. ರಷ್ಯಾದಿಂದ ದೆಹಲಿಗೆ ಆಗಮಿಸಿ, ಗೋವಾಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಓಮೆಕ್ರಾನ್ ಶಂಕೆ ಕಂಡುಬಂದಿದೆ. ಇವರನ್ನು ನಾವು ಓಮೆಕ್ರಾನ್ ರೋಗಿ ಎಂದು ಕರೆಯಲು ಸಾಧ್ಯವಿಲ್ಲ, ತಪಾಸಣಾ ವರದಿ ಇನ್ನೂ ಬರಬೇಕಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರತಿಕ್ರಿಯೆ ನೀಡಿದರು.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಪತ್ತೆಯಾಗಿರುವ ಓಮೆಕ್ರಾನ್ ಶಂಕಿತರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಎರಡೂ ಡೋಸ್ ಲಸಿಕೆ ಪಡೆದುಕೊಳ್ಳಲು ಈ ಮೂಲಕ ನಾನು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮನವಿ ಮಾಡಿದರು.
ಗೋವಾದಲ್ಲಿ ಲಾಕ್‍ಡೌನ್…! : ಗೋವಾದಲ್ಲಿ ಗುರುವಾರದಿಂದ ಸೋಮವಾರದ ವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಲಾಗಿದೆ ಎಂಬ ಸುಳ್ಳು ಸುದ್ಧಿಯು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ರಾಜ್ಯಕ್ಕೆ ಆಗಮಿಸಿರುವ ಪ್ರವಾಸಿಗರನ್ನು ಮತ್ತು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಈ ಸುದ್ಧಿಯು ನೆರೆಯ ರಾಜ್ಯ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿಯೂ ಚರ್ಚೆಗೆ ಕಾರಣವಾಗಿದೆ.
ಆರಂಭದಲ್ಲಿ ಜನತೆ ಲಾಕ್‍ಡೌನ್ ಸುದ್ಧಿ ನಿಜ ಎಂದು ನಂಬಿದ್ದರೂ ಕೂಡ ನಂತರ ಮಾಧ್ಯಮಗಳಲ್ಲಿ ಈ ಕುರಿತು ಅಧಿಕೃತ ಸುದ್ಧಿ ಪ್ರಕಟವಾಗುತ್ತಿದ್ದಂತೆ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಲಾಕ್‍ಡೌನ್ ಅಗತ್ಯವಿಲ್ಲ-ಸಿಎಂ ಸಾವಂತ್:
ಗೋವಾ ರಾಜ್ಯದಲ್ಲಿ ಓಮೆಕ್ರಾನ್ ರೂಪಾಂತರಿ ಸೋಂಕು ಶಂಕಿತರು 5 ಜನ ಪತ್ತೆಯಾಗಿದ್ದರೂ ಕೂಡ ರಾಜ್ಯದಲ್ಲಿ ಕರೋನಾ ಸ್ಥಿತಿ ನಿಯಂತ್ರಣದಲ್ಲಿದೆ. ಇದರಿಂದಾಗಿ ಸದ್ಯಕ್ಕಂತೂ ರಾಜ್ಯದಲ್ಲಿ ಲಾಕ್‍ಡೌನ್ ಅಗತ್ಯವಿಲ್ಲ. ಈ ಐದು ಜನರ ತಪಾಸಣಾ ವರದಿ ಬರಬೇಕಾಗಿದೆ ಎಂದು ಮುಖ್ಯಮತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.