ನವದೆಹಲಿ: ಮಹದಾಯಿ ನದಿ ನೀರು ತಿರುವು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರ ನೀರು ನಿರ್ವಹಣೆ ಪ್ರಾಧಿಕಾರ ರಚಿಸಬೇಕೆಂದು ಆಗ್ರಹಿಸಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಮಹದಾಯಿ ನದಿಯ ಉಪನದಿಗಳಾದ ಕಳಾಸ ಮತ್ತು ಬಂಡೂರಿಗೆ ಅಡ್ಡಲಾಗಿ ಎರಡು ಅಣೆಕಟ್ಟೆಗಳ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ವಿವರವಾದ ಯೋಜನಾ ವರದಿ(ಡಿಪಿಆರ್)ಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿರುವುದಕ್ಕೆ ಇದೇ ವೇಳೆ ಗೋವಾ ನಿಯೋಗ ಆಕ್ಷೇಪ ವ್ಯಕ್ತಪಡಿಸಿತು.
ನದಿಯ ನೀರು ಉತ್ತರ ಗೋವಾದಲ್ಲಿರುವ ಮಹಾದಾಯಿ ವನ್ಯಜೀವಿ ಅಭಯಾರಣ್ಯದಿಂದ ಹಾದುಹೋಗುವುದರಿಂದ ಮಹಾದಾಯಿ ನದಿ ತಿರುವು ಯೋಜನೆಗೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.
ಇದೇ ವೇಳೆ ಗೋವಾ ನಿಯೋಗ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ವಿವಾದ ಬಗೆಹರಿಸುವಂತೆ ಮನವಿ ಮಾಡಿತು.
ನಿಯೋಗದಲ್ಲಿ ಕೇಂದ್ರ ಪ್ರವಾಸೋದ್ಯಮ ಸಹಾಯಕ ಸಚಿವ ಶ್ರೀಪಾದ್ ನಾಯಕ್, ಗೋವಾ ವಿಧಾನಸಭೆ ಸ್ಪೀಕರ್ ರಮೇಶ್ ತಾವಡ್ಕರ್, ಜಲ ಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್, ಪರಿಸರ ಖಾತೆ ಸಚಿವ ನೀಲೇಶ್ ಕಬ್ರಲ್, ಸಾರಿಗೆ ಸಚಿವ ಮೌವಿನ್ ಗೊಡಿನ್ಹೊ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಇಂಧನ ಸಚಿವ ರಾಮಕೃಷ್ಣ ದಾವಲಿಕರ್ ಮತ್ತು ಶಾಸಕ ಚಂದ್ರಕಾಂತ್ ಶೆಣೈ ಇದ್ದರು.
ಕರ್ನಾಟಕ ಮತ್ತು ಗೋವಾ ನಡುವಿನ ಮಹಾದಾಯಿ ನದಿ ನೀರಿನ ವಿವಾದ ಶೀಘ್ರದಲ್ಲೇ ಬಗೆಹರಿಯಲಿದೆ. ಈ ಬಗ್ಗೆ ಗೋವಾದ ನಿಯೋಗ ನನ್ನನ್ನೂ ಭೇಟಿಯಾಗಿ ಮನವಿ ಅರ್ಪಿಸಿದೆ.
– ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಜಲ ಶಕ್ತಿ ಸಚಿವ
ಇದನ್ನೂ ಓದಿ: ವಿಜಯಪುರದಲ್ಲಿ ಭೂಕಂಪನ ಅನುಭವ: ಘಟನೆ ನಿರಾಕರಿಸಿದ ಜಿಲ್ಲಾಡಳಿತ