Advertisement

ಬಿಜೆಪಿ ಯಾವತ್ತೂ ಜಾತಿ-ಧರ್ಮ ರಾಜಕಾರಣ ಮಾಡಿಲ್ಲ:ಜೆ.ಪಿ ನಡ್ಡಾ

05:57 PM Feb 09, 2022 | Team Udayavani |

ಪಣಜಿ: ಭಾರತೀಯ ಜನತಾ ಪಕ್ಷವು ಗೋವಾ ಮತ್ತು ದೇಶದ ಸಮಗ್ರ ಅಭಿವೃದ್ಧಿ ಮಾಡಿದೆ. ಗೋವಾದಲ್ಲಿ ಕಳೆದ 10 ವರ್ಷ ಹಾಗೂ ಕೇಂದ್ರದಲ್ಲಿ ಕಳೆದ ಏಳು ವರ್ಷಗಳಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ದೇಶ ಮತ್ತು ಗೋವಾ ರಾಜ್ಯದ ಅಭಿವೃದ್ಧಿಯಾಗಿದೆ. ಈ ಸರ್ವತೋಮುಖ ಅಭಿವೃದ್ಧಿ ಮುಂದುವರೆಯಬೇಕಾದರೆ ಗೋವಾದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.

Advertisement

ಮಡಗಾಂವನಲ್ಲಿ ಬಿಜೆಪಿಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ಗೋವಾದಲ್ಲಿ ಬಿಜೆಪಿ ಯಾವತ್ತೂ ಜಾತಿ-ಧರ್ಮ ರಾಜಕಾರಣ ಮಾಡಿಲ್ಲ. ಸರ್ವಧರ್ಮೀಯರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ಪ್ರಯಾಸ್ ಕಾರ್ಯ ನಡೆದಿದೆ. ಬಿಜೆಪಿ ಆಡಳಿತದಲ್ಲಿ ಎಲ್ಲಿಯೂ ಕೋಮುಗಲಭೆ, ಬಾಂಬ್ ಸ್ಪೋಟ ನಡೆದಿಲ್ಲ, ಇದು ಬಿಜೆಪಿ ಸರ್ಕಾರದ ಯಶಸ್ಸು. ಜನತೆ ಹಿಂದಿನದನ್ನು ನೆನಪಿಸಿಕೊಳ್ಳಬೇಕು. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಟಿಎಂಸಿ ಪಕ್ಷವು ಗೋವಾಕ್ಕೆ ಬಂದು ಜನತೆಗೆ ಕೆಲ ಉಚಿತ ಭರವಸೆ ನೀಡುವ ಮೂಲಕ ಜನರ ದಾರಿತಪ್ಪಿಸುತ್ತಿದ್ದಾರೆ. ದೆಹಲಿಯಲ್ಲಿ ಉಚಿತ ವಿದ್ಯುತ್ ನೀಡಲು ಸಾಧ್ಯವಾಗದ ಆಮ್ ಆದ್ಮಿ ಪಕ್ಷ ಗೋವಾದಲ್ಲಿ ಉಚಿತ ವಿದ್ಯುತ್ ನೀಡುವ ಭರವಸೆ ನೀಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ರವರ ಸುವರ್ಣ ಗೋವಾ ಕನಸನ್ನು ಬಿಜೆಪಿ ನನಸು ಮಾಡಲಿದೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದಲ್ಲಿ ಗೋವಾದ ಜನತೆಯ ಕನಸು ನನಸಾಗಲಿದೆ ಎಂದು ಜೆ.ಪಿ ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು.

ಗೋವಾ ರಾಜ್ಯವನ್ನು ವಿಶ್ವದರ್ಜೆಯ ಸಾಮಾಜಿಕ ಆರ್ಥಿಕ ಕೇಂದ್ರವನ್ನಾಗಿ ಮಾಡಲು ಬಿಜೆಪಿ ಶೃಮಿಸುತ್ತಿದೆ. ಗೋವಾದಲ್ಲಿ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸಲು ಬಿಜೆಪಿ ಗೋವಾದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಜೆ.ಪಿ ನಡ್ಡಾ ಹೇಳಿದರು.

ಗೋವಾದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಅಪರಾಧ ತನಿಖೆಯಲ್ಲಿ ಗೋವಾ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಬಿಜೆಪಿ ಮಹಿಳೆಯರಿಗೆ ಸ್ವಾವಲಂಭಿಯನ್ನಾಗಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ, ರಾಜ್ಯಸಭಾ ಸದಸ್ಯ ವಿನಯ್ ತೆಂಡುಲ್ಕರ್, ಬಿಜೆಪಿ ಅಭ್ಯರ್ಥಿ ದಾಮು ನಾಯ್ಕ, ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.

Advertisement

40,000 ಕೋಟಿ ರೂ

ನನ್ನ ಇಲಾಖೆಯ ಖಾತೆಯಿಂದ ಗೋವಾ ರಾಜ್ಯದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಇದುವರೆಗೂ 40,000 ಕೋಟಿ ರೂ ನೀಡಲಾಗಿದ್ದು, ಮುಂಬಯಿ-ಗೋವಾ ಹೆದ್ದಾರಿ ನಿರ್ಮಾಣಕ್ಕೆ ಹೆಚ್ಚಿನ ಹಣವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

ಪೆಡ್ನೆಯಲ್ಲಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು- ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿಯೇ ಪೆಡ್ನೆಯಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ರವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪ್ರಮೋದ  ಸಾವಂತ್ ಪ್ರಯತ್ನಿಸುತ್ತಿದ್ದಾರೆ.

ಮುಂಬಯಿ-ಗೋವಾ ಹೆದ್ದಾರಿ ನಿರ್ಮಾಣ ಮುಕ್ತಾಯದ ಹಂತದಲ್ಲಿದೆ. ಗೋವಾ-ಕರ್ನಾಟಕ ಹೆದ್ದಾರಿ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಇದಕ್ಕಾಗಿ 15,000 ಕೋಟಿ ರೂ ನಿಧಿಯನ್ನು ಮಂಜೂರು ಮಾಡಿದ್ದೇನೆ. ಗೋವಾದಲ್ಲಿ ರಸ್ತೆಗಳು ಮತ್ತು ಇತರ ಮೂಲಭೂತ ಸೌಲಭ್ಯಗಳಿಗೆ ಕೇಂದ್ರ ಸರ್ಕಾರ ಸಾಕಷ್ಟು ನಿಧಿಯನ್ನು ಮಂಜೂರು ಮಾಡಿದೆ ಎಂದು ನಿತಿನ್ ಗಡ್ಕರಿ ಹೇಳಿದರು.

ಗೋವಾದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಯುಷ್ ಆಸ್ಪತ್ರೆ, ಸ್ಪೋರ್ಟ ಸಿಟಿ, ಪೆಡ್ನೆಯ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಈ ಎಲ್ಲ ಕಡೆಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗಲಿದೆ. ಸಾವಿರಾರು ಯುವಕರಿಗೆ ಪರೋಪಕ್ಷವಾಗಿ ಉದ್ಯೋಗ ಸಿಗಲಿದೆ  ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಕೇಂದ್ರ ಸಚಿವ ಶ್ರೀಪಾದ ನಾಯ್ಕ, ಅಭ್ಯರ್ಥಿ ಪ್ರವೀಣ ಅರ್ಲೇಕರ್, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next