Advertisement

ಸೋಮವಾರ ಎಲ್ಲವೂ ಫೈನಲ್: ಗೋವಾ ಬಿಜೆಪಿಯಲ್ಲಿ ಆಂತರಿಕ ಕಲಹ?

06:04 PM Mar 20, 2022 | Team Udayavani |

ಪಣಜಿ: ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು 10 ದಿನ ಕಳೆದರೂ ಗೋವಾದಲ್ಲಿ ಸರ್ಕಾರ ರಚನೆಯಾಗಿಲ್ಲ,20 ಸ್ಥಾನಗಳಲ್ಲಿ ಜಯಗಳಿಸಿದ್ದರೂ ಎಂಜಿಪಿ ಪಕ್ಷದ ಬೆಂಬಲ ಪಡೆಯುತ್ತಿರುವ ವಿಷಯಕ್ಕೆ ಸಂಬಂಧಿದಂತೆ ಬಿಜೆಪಿಯಲ್ಲಿ ಆಂತರಿಕ ಕಲಹ ಆರಂಭಗೊಂಡಿದೆ.

Advertisement

ಪ್ರಮೋದ ಸಾವಂತ್ ರವರು ನೂತನ ಮುಖ್ಯಮಂತ್ರಿ ಎಂದು ಪಕ್ಷದ ವರಿಷ್ಠರು ಆಯ್ಕೆ ಮಾಡಿದರೂ ಕೂಡ ಬಿಜೆಪಿ ಇದುವರೆಗೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಇಷ್ಟೆಲ್ಲಾ ಆಂತರಿಕ ಕಲಹಗಳಿಂದಾಗಿ ಬಿಜೆಪಿಯಲ್ಲಿ ಒಗ್ಗಟ್ಟು ಮತ್ತು ಒಮ್ಮತದ ಕೊರತೆ ಎದ್ದು ಕಾಣುವಂತಾಗಿದೆ.

ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರ ಸಭೆಗಳು ಮತ್ತು ಚರ್ಚೆಗಳು ತೀವ್ರಗೊಂಡಿವೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತು ಶಾಸಕ ವಿಶ್ವಜಿತ್ ರಾಣೆ ಶನಿವಾರ ದೆಹಲಿಯಿಂದ ಗೋವಾಕ್ಕೆ ವಾಪಸ್ಸಾಗಿದ್ದಾರೆ. ಮುಖ್ಯಮಂತ್ರಿ ಸಾವಂತ್ ರವರು ನೀಡಿರುವ ಮಾಹಿತಿಯ ಪ್ರಕಾರ, ಕೇಂದ್ರದ ವೀಕ್ಷಕರಾದ ನರೇಂದ್ರ ಸಿಂಗ್ ತೋಮರ್ ಮತ್ತು ಎಲ್ ಮುರುಗನ್ ಸೋಮವಾರ ಗೋವಾಕ್ಕೆ ಆಗಮಿಸಲಿದ್ದು, ಗೋವಾದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕ ಸೋಮವಾರ ಸಂಜೆ ಖಚಿತವಾಗಲಿದೆ ಎಂದಿದ್ದಾರೆ.

ಬಿಜೆಪಿಯ ಸರ್ಕಾರ ಸ್ಥಾಪನೆಯ ವಿಳಂಬ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಕದನಕ್ಕೆ ಪುಷ್ಠಿ ನೀಡಿದೆ. ಬಿಜೆಪಿಗೆ ಪಕ್ಷೇತರ ಶಾಸಕರ ಬೆಂಬಲವಿದ್ದು ಬಹುಮತವಿದ್ದರೂ ಸರ್ಕಾರ ರಚನೆಯಾಗದ ಹಿನ್ನೆಲೆಯಲ್ಲಿ ಗೋವಾದ ಜನತೆ ಗೊಂದಲಕ್ಕೆ ಸಿಲುಕುವಂತಾಗಿದೆ.

ಈ ಕುರಿತು ಬಿಜೆಪಿ ವಕ್ತಾರ ಉರ್ಫಾನ್ ಮುಲ್ಲಾ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷವು ಬಿಜೆಪಿಯೆಡೆಗೆ ಲಕ್ಷ್ಯವಿಡುವ ಬದಲು ಪ್ರತಿಪಕ್ಷದ ನಾಯಕರು ಯಾರಾಗುತ್ತಾರೆ ಎಂಬ ಕುರಿತಂತೆ ಲಕ್ಷ್ಯ ವಹಿಸಬೇಕು. ದಿಗಂಬರ್ ಕಾಮತ್ ರವರು ಬಿಜೆಪಿ ನಾಯಕರನ್ನು ಭೇಟಿ ಮಾಡಿರುವುದು ಅವರು ಬಿಜೆಪಿ ಸೇರುವ ಮುನ್ಸೂಚನೆಯಾಗಿದೆ ಎಂದರು.

Advertisement

ಸೋಮವಾರ ಬಿಜೆಪಿಯ ಶಾಸಕಾಂಗ ಸಭೆಯ ನಂತರ ಗೋವಾದ ರಾಜಕೀಯ ಮತ್ತು ಸರ್ಕಾರ ಸ್ಥಾಪನೆಗೆ ಹೊಸ ದಿಕ್ಕು ಸಿಗಲಿದೆ. ಹೀಗಾಗಿ ಸೋಮವಾರದ ಸಭೆಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಮಾರ್ಚ್ 23 ರಿಂದ 25 ರ ಒಳಗೆ ಪ್ರಮಾಣವಚನ

ಬಿಜೆಪಿ ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಹೇಳಿದ್ದಾರೆ.

ಸೋಮವಾರ ಬಿಜೆಪಿ ಶಾಸಜಕಾಂಗ ಪಕ್ಷದ ಸಭೆ ನಡೆಯಲಿದ್ದು ನಂತರ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ರವರನ್ನು ಭೇಟಿ ಮಾಡಿ ಬಿಜೆಪಿ ನೇತೃತ್ವದ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಲಾಗುವುದು. ಸೋಮವಾರ ಸಂಜೆ 4 ಗಂಟೆಗೆ ಆರಂಭಗೊಳ್ಳಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ತಾನಾವಡೆ ಹೇಳಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ವೀಕ್ಷಕ ನರೇಂದ್ರಸಿಂಗ್ ತೋಮರ್, ಸಹ ವೀಕ್ಷಕ ಮುರುಗನ್, ಗೋವಾ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್, ಬಿಜೆಪಿ ಪ್ರಭಾರಿ ಸಿ.ಟಿ.ರವಿ ಉಪಸ್ಥಿತರಿರುವರು. ಸೋಮವಾರ ಪ್ರಮಾಣವಚನದ ದಿನಾಂಕವನ್ನು ನಿರ್ಧರಿಸಲಾಗುವುದು. ಮಾರ್ಚ್ 23 ರಿಂದ 25 ರ ಒಳಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next