Advertisement
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಈ ಸುಳಿವು ನೀಡಿದ ಬೆನ್ನಲ್ಲೇ ಖಾಸಗಿ ಸಗಟು ತರಕಾರಿ ವ್ಯಾಪಾರಸ್ಥರು ಮುಂದಿನ ಪರಿಣಾಮದ ಬಗ್ಗೆ ಆಲೋಚನೆ ಆರಂಭಿಸಿದ್ದಾರೆ. ತಕ್ಷಣಕ್ಕೆ ಗೋವಾದ ಮುಖ್ಯಮಂತ್ರಿಗಳ ಈ ವಿಚಾರ ಕಾರ್ಯರೂಪಕ್ಕೆ ಬರುವುದು ಕಷ್ಟ. ಆದರೆ ಇದು ಸಹಜವಾಗಿಯೇ ಕರ್ನಾಟಕದ ವ್ಯಾಪಾರಸ್ಥರು ಮತ್ತು ರೈತರಲ್ಲಿ ಆತಂಕ ಉಂಟು ಮಾಡಿದೆ.
Related Articles
Advertisement
ಈ ಹಿಂದೆಯೂ ಇದೇ ರೀತಿಯ ಪ್ರಯತ್ನ ಗೋವಾ ಸರ್ಕಾರದಿಂದ ನಡೆದಿತ್ತು. ಆದರೆ ನಾನಾ ಸಮಸ್ಯೆಗಳ ಕಾರಣದಿಂದ ತನ್ನ ಆಲೋಚನೆಯನ್ನು ಕೈಬಿಟ್ಟಿತ್ತು. ಒಂದು ವೇಳೆ ಈಗ ಗೋವಾ ಸರ್ಕಾರ ಬೆಳಗಾವಿಯಿಂದ ತರಕಾರಿ ಖರೀದಿ ಮಾಡುವುದನ್ನು ನಿಲ್ಲಿಸಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಸ್ವಲ್ಪಮಟ್ಟಿಗೆ ಪರಿಣಾಮ ಬೀರಿದರೂ ಅದೂ ಸಹ ಗಂಭೀರವಾದ ಆತಂಕ ಉಂಟು ಮಾಡುವುದಿಲ್ಲ ಎಂಬುದು ಸಗಟು ತರಕಾರಿ ವ್ಯಾಪಾರಸ್ಥರ ಹೇಳಿಕೆ.
ಗೋವಾದಲ್ಲಿ ಎಲ್ಲ ತರಕಾರಿಗಳು ಸಿಗುವುದು ದುರ್ಲಭ. ಈ ತರಹದ ತರಕಾರಿಗಳು ಅಲ್ಲಿ ಬೆಳೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಸ್ವಾವಲಂಬನೆ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಈ ರೀತಿಯ ವಿಚಾರ ಮಾಡಿದ್ದರೂ ಅದು ಕಾರ್ಯರೂಪಕ್ಕೆ ಬರುವದು ಬಹಳ ಕಷ್ಟ. ಇದಕ್ಕೆ ಬಹಳ ಕಾಲಾವಕಾಶ ಬೇಕು. ಹೀಗಾಗಿ ತಕ್ಷಣಕ್ಕೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂಬುದು ಸಗಟು ವ್ಯಾಪಾರಸ್ಥರ ವಿಶ್ವಾಸ.
ಗೋವಾ ಹವಾಮಾನ ಹೇಗಿದೆ? ಆದರೆ ಗೋವಾದ ಹವಾಮಾನ ತರಕಾರಿ ಬೆಳೆಯುವುದಕ್ಕೆ ಹೊಂದಿಕೊಳ್ಳುವದಿಲ್ಲ. ವರ್ಷದಲ್ಲಿ ನಾಲ್ಕೈದು ತಿಂಗಳು ಮಳೆ ಇರುತ್ತದೆ. ಇಲ್ಲಿಯ ಮಳೆಯನ್ನು ತರಕಾರಿ ಬೆಳೆ ತಡೆದುಕೊಳ್ಳುವದಿಲ್ಲ. ಇನ್ನು ಬೇಸಿಗೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ತರಕಾರಿ ಬೆಳೆ ಈ ವಾತಾವರಣಕ್ಕೆ ಹೊಂದಿಕೊಳ್ಳುವದು ಕಷ್ಟ. ಕೇವಲ ಎರಡ್ಮೂರು ತಿಂಗಳ ಅವಧಿಯಲ್ಲಿ ಮಾತ್ರ ಅವರು ತರಕಾರಿ ಬೆಳೆಯಬಹುದು. ಇದಕ್ಕಿಂತ ಮುಖ್ಯವಾಗಿ ಗೋವಾದಲ್ಲಿ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಬಹಳ ಇದೆ. ಈ ಎಲ್ಲ ವಾಸ್ತವಿಕ ಸಮಸ್ಯೆಗಳು ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ ಎಂಬುದು ಬೆಳಗಾವಿ ತರಕಾರಿ ಸಗಟು ವ್ಯಾಪಾರಸ್ಥರು ಮತ್ತು ರೈತರ ಅಭಿಪ್ರಾಯ.
ಗೋವಾಕ್ಕೆ ನೂರಾರು ಟನ್ ತರಕಾರಿ
ನೆರೆಯ ಬೆಳಗಾವಿಯಿಂದ ಪ್ರತಿನಿತ್ಯ 300ಕ್ಕೂ ಅಧಿಕ ಟನ್‌ಗಳಷ್ಟು ತರಕಾರಿ ಗೋವಾಕ್ಕೆ ಪೂರೈಕೆಯಾಗುತ್ತದೆ. ತೋಟಗಾರಿಕೆ ಇಲಾಖೆಯಿಂದ ಈರುಳ್ಳಿ ಮತ್ತು ಆಲೂಗಡ್ಡೆಯ 50 ಗಾಡಿಗಳು ಗೋವಾಕ್ಕೆ ಹೋಗುತ್ತಿದ್ದರೆ, ಖಾಸಗಿ ಸಗಟು ಮಾರುಕಟ್ಟೆಯಿಂದ ಸುಮಾರು 10 ಲಾರಿಗಳಲ್ಲಿ ತರಕಾರಿ ಸರಬರಾಜು ಆಗುತ್ತಿದೆ. ಗೋವಾದ ಶೇ.90ರಷ್ಟು ಜನರು ಬೆಳಗಾವಿ ತರಕಾರಿ ಮೇಲೆಯೇ ಅವಲಂಬಿತರಾಗಿದ್ದಾರೆ. ಗೋವಾದ ಹೊರತಾಗಿ ಬೆಳಗಾವಿಯಿಂದ ಪ್ರತಿನಿತ್ಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗುಜರಾತ ಮೊದಲಾದ ರಾಜ್ಯಗಳಿಗೆ ತರಕಾರಿ ಹೋಗುತ್ತಿದೆ. ಜಿಲ್ಲೆಯ ರೈತರು 200ಕ್ಕೂ ಹೆಚ್ಚು ಸಗಟು ಮಾರಾಟಗಾರರ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ತಮ್ಮ ತರಕಾರಿ ಕಳಿಸುತ್ತಿದ್ದಾರೆ.
ಗೋವಾ ಸಿಎಂಗೆ ವಾಸ್ತವ ಸ್ಥಿತಿ ಗೊತ್ತಿಲ್ಲ. ಈ ಹಿಂದೆಯೂ ಇದೇ ರೀತಿಯ ಪ್ರಯತ್ನಗಳು ನಡೆದಿದ್ದವು. ಆದರೆ ಅವು ಕೈಗೂಡಲಿಲ್ಲ. ಮುಖ್ಯವಾಗಿ ಗೋವಾದ ವಾತಾವರಣ ತರಕಾರಿ ಬೆಳೆಗಳನ್ನು ಬೆಳೆಯುವುದಕ್ಕೆ ಯೋಗ್ಯವಾಗಿಲ್ಲ. ನಾಲ್ಕೈದು ತಿಂಗಳು ಅಲ್ಲಿ ಭಾರೀ ಮಳೆಯಿರುತ್ತದೆ. ಅಂತಹ ಮಳೆಗೆ ಯಾವ ತರಕಾರಿ ಬೆಳೆಗಳು ತಡೆಯುವದಿಲ್ಲ. ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಬೆಳಗಾವಿ ವ್ಯಾಪಾರಸ್ಥರ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. –ದಿವಾಕರ ಪಾಟೀಲ, ಅಧ್ಯಕ್ಷ, ಜೈ ಕಿಸಾನ್ ಸಗಟು ವ್ಯಾಪಾರಸ್ಥರ ಸಂಘ
ಬೆಳಗಾವಿಯಿಂದ ತರಕಾರಿ ಖರೀದಿ ನಿಲ್ಲಿಸುವ ಬಗ್ಗೆ ಗೋವಾ ಸರ್ಕಾರ ಆಲೋಚನೆ ಮಾಡಿದರೆ ಅದರಿಂದ ನಮಗೆ ಯಾವುದೇ ನಷ್ಟವಿಲ್ಲ. ಈಗಾಗಲೇ ಬೆಳಗಾವಿಯಿಂದ ದೇಶದ ಅನೇಕ ರಾಜ್ಯಗಳಿಗೆ ತರಕಾರಿ ಪೂರೈಕೆಯಾಗುತ್ತಿದೆ. ಒಂದು ವೇಳೆ ಗೋವಾ ನಮ್ಮ ತರಕಾರಿ ನಿಲ್ಲಿಸಿದರೆ ಬೇರೆ ರಾಜ್ಯಗಳಿಗೆ ಅನುಕೂಲವಾಗುತ್ತದೆ. ಈಗಿನ ಹಂತದಲ್ಲಿ ಗೋವಾ ಮುಖ್ಯಮಂತ್ರಿಗಳ ವಿಚಾರ ಕಾರ್ಯ ರೂಪಕ್ಕೆ ಬರುವುದು ಕಷ್ಟ. –ಕೆ.ಎನ್.ಬಾಗವಾನ ಕಾರ್ಯದರ್ಶಿ, ಜೈ ಕಿಸಾನ್ ಸಗಟು ವ್ಯಾಪಾರಸ್ಥರ ಸಂಘ
-ಕೇಶವ ಆದಿ