ಪಣಜಿ: ಮಾಂದ್ರೆ ಕ್ಷೇತ್ರದಲ್ಲಿ ಹೈವೋಲ್ಟೇಜ್ ಚುನಾವಣೆ ನಡೆಯುವ ಎಲ್ಲ ಲಕ್ಷಣಗಳಿದ್ದು, ಬಿಜೆಪಿ, ಎಂಜಿಪಿ, ಗೋವಾ ಫಾರ್ವರ್ಡ್ , ಕಾಂಗ್ರೆಸ್, ಎಎಪಿ, ಆರ್.ಜಿ, ಶಿವಸೇನೆ, ಪಕ್ಷೇತರರು ಸೇರಿ ಒಂಭತ್ತು ಅಭ್ಯರ್ಥಿಗಳು ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದು, ಕದನ ಭಾರಿ ಕುತೂಹಲ ಮೂಡಿಸಿದೆ.
ಬಿಜೆಪಿ ತೊರೆದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸ್ವತಂತ್ರ ಅಭ್ಯರ್ಥಿ ಲಕ್ಷ್ಮೀಕಾಂತ ಪಾರ್ಸೇಕರ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. 6 ಬಾರಿ ಪಾರ್ಸೇಕರ್ ಚುನಾವಣೆಯಲ್ಲಿ ಸ್ಫರ್ಧಿಸಿದ್ದಾರೆ. ಆದರೆ 2019 ರ ಉಪಚುನಾವಣೆಯ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು ಈ ಬಾರಿ ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದು, ಮತದಾರರಿಗೆ ತಮ್ಮ ಚಿನ್ಹೆ ತಿಳಿಸುವ ಕಷ್ಟದ ಕೆಲಸವನ್ನು ಮಾಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ದಯಾನಂದ ಸೋಪ್ಟೆ ಪ್ರಚಾರದಲ್ಲಿ ಸಕ್ರೀಯರಾಗಿದ್ದು ಕಾರ್ಯಕರ್ತರು ಮತ್ತು ಬೆಂಬಲಿಗರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಪೆಡ್ನೆ ತಾಲೂಕಿನಲ್ಲಿ ಆಸ್ಪತ್ರೆ. ಇಲೆಕ್ಟ್ರಾನಿಕ್ ಸಿಟಿ, ಜಲ ಯೋಜನೆ ಮುಂತಾದ ಯೋಜನೆಗಳ ಆಶ್ವಾಸನೆಯನ್ನು ಅಭ್ಯರ್ಥಿಗಳು ಜನತೆಗೆ ನೀಡುತ್ತಿದ್ದಾರೆ.
ಎಂಜಿಪಿ ಮತ್ತು ಟಿಎಂಸಿ ಮೈತ್ರಿ ಕೂಟದ ಅಭ್ಯರ್ಥಿ ಜೀತ್ ಅರೋಲ್ಕರ್ ಪ್ರಚಾರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಚುನಾವಣೆಗೆ ಒಂದು ತಿಂಗಳು ಮುನ್ನ ಕಾಂಗ್ರೆಸ್ ತೊರೆದು ಪಕ್ಷೇತರರಾಗಿ ಅಖಾಡಕ್ಕಿಳಿದಿರುವ ಸತೀಶ್ ಶೆಟಗಾಂವಕರ್ ಕೂಡ ಇತರ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದಾರೆ.
ಪಕ್ಷೇತರ ಅಭ್ಯರ್ಥಿ ಲಕ್ಷ್ಮೀಕಾಂತ ಪಾರ್ಸೇಕರ್ ಪ್ರತಿಕ್ರಿಯೆ ನೀಡಿ, ನನಗೆ ಮಾಂದ್ರೆ ಕ್ಷೇತ್ರದ ಜನತೆ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ನೀಡಿದ್ದಾರೆ. ಪಕ್ಷ ಬಿಡದಂತೆ ನನ್ನ ಬಳಿ ಯಾರೂ ಹೇಳಲು ಬಂದಿಲ್ಲ. ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ನನ್ನ ಬಳಿ ಚರ್ಚೆ ಮಾಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
2022 ರ ಪ್ರಸಕ್ತ ವಿಧಾನಸಭಾ ಚುನಾವಣೆ ನಿರ್ಣಾಯಕ ಚುನಾವಣೆಯಾಗಲಿದೆ. ಪಕ್ಷೇತರ ಅಭ್ಯರ್ಥಿಗಳು ಚುನಾವಣೆಯಲ್ಲಿ ಹೆಚ್ಚಾಗಿ ಆಯ್ಕೆಯಾಗಲಿದ್ದಾರೆ. ಇದರಿಂದಾಗಿ ಸರ್ಕಾರದಲ್ಲಿ ಪಕ್ಷೇತರರಾಗಿ ಆಯ್ಕೆಯಾದವರದ್ದೇ ಪ್ರಮುಖ ಪಾತ್ರವಿರಲಿದೆ. ವಿವಿಧ ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ಸ್ಫರ್ಧಿಸಿರುವ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಚುನಾವಣೆಯ ನಂತರ ಪಕ್ಷೇತರರಾಗಿ ಆಯ್ಕೆಯಾದವರೆಲ್ಲರೂ ಸೇರಿ ಹೊಸ ಇತಿಹಾಸ ಸೃಷ್ಠಿಸಲಿದ್ದೇವೆ ಎಂದು ಲಕ್ಷ್ಮೀಕಾಂತ ಪರ್ಸೇಕರ್ ಹೇಳಿದರು.