Advertisement

Goa: ಅಭಯಾರಣ್ಯದಲ್ಲಿನ 14 ಜಲಪಾತಗಳು ಪ್ರವಾಸಿಗರ ಪ್ರವೇಶಕ್ಕೆ ಮುಕ್ತ: ಅರಣ್ಯ ಇಲಾಖೆ ಆದೇಶ

05:32 PM Jul 20, 2023 | Team Udayavani |

ಪಣಜಿ: ಗೋವಾ ರಾಜ್ಯ ಸರ್ಕಾರವು ಅಭಯಾರಣ್ಯದಲ್ಲಿ ಕಡಿಮೆ ಅಪಾಯಕಾರಿ 14 ಜಲಪಾತಗಳನ್ನು ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಿದ್ದು ಈ ಕುರಿತು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಜಲಪಾತಗಳ ಬಳಿ ಮುನ್ನೆಚ್ಚರಿಕೆ ವಹಿಸಲು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಈ ಭಾಗದಲ್ಲಿ ಗಲಾಟೆ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

Advertisement

ಇತ್ತೀಚೆಗಷ್ಟೇ ಗೋವಾದ ಮೈನಾಪಿ ಜಲಪಾತದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಜಲಪಾತ ಹಾಗೂ ಇತರೆ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸ್ಥಳೀಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸುರಕ್ಷತೆಗಾಗಿ ಪ್ರತೊಯೊಂದು ಜಲಪಾತಗಳ ಬಳಿ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.

ಅಭಯಾರಣ್ಯ ಪ್ರದೇಶದಲ್ಲಿರುವ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಮುಂದುವರೆಸಿದೆ. ಈ ಕಡಿಮೆ ಅಪಾಯಕಾರಿ ಜಲಪಾತಗಳಿಗೆ ಹೋಗಲು ಜನರಿಗೆ ಅನುಮತಿ ನೀಡಲಾಗಿದ್ದರೂ, ದೂಧಸಾಗರ್ ಮತ್ತು ಇತರ ಅಪಾಯಕಾರಿ ಜಲಪಾತಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಮುಂದುವರೆಸಲಾಗಿದೆ.  ಹೀಗಾಗಿ ಕಳೆದ ಭಾನುವಾರ ದೂಧಸಾಗರ ಜಲಪಾತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರೂ ಪ್ರವಾಸಿಗರಿಗೆ ದೂಧಸಾಗರ ಜಲಪಾತ ವೀಕ್ಷಣೆಗೆ ಅವಕಾಶ ನೀಡಿರಲಿಲ್ಲ.

ದೂಧಸಾಗರ್ ಮುಚ್ಚಲಾಗಿದೆ…!
ಸರ್ಕಾರ ತೆರೆದಿರುವ 14 ಜಲಪಾತಗಳಲ್ಲಿ 11 ಜಲಪಾತಗಳು ಸತ್ತರಿ ತಾಲೂಕಿನಲ್ಲಿವೆ.  ಇವುಗಳಲ್ಲಿ ಪಾಳಿ, ಹಿವ್ರೆ, ಚರವಾಣೆ, ಗುಲ್ವಾಲಿ, ಗುಂಗುಲ್ಡೆ, ಚಿದಂಬರಂ, ನಾನೇಲಿ ಉಕೈಚಿ ರಾಕ್ – ಕುಮ್ತಾಲ್, ಭಗವಾನ್ ಮಹಾವೀರ ಅಭಯಾರಣ್ಯದಲ್ಲಿ ಮಹದಾಯಿ-ಗುಲೇಲಿ, ಮಾಯದ-ಕುಲೆ ಮತ್ತು ನೇತ್ರಾವಳಿ ಅಭಯಾರಣ್ಯದಲ್ಲಿ ಭಾತಿ-ನೇತ್ರಾವಳಿ ಜಲಪಾತಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.  ಆದರೆ, ದೂಧಸಾಗರ ಜಲಪಾತವನ್ನು ಮಾತ್ರ ಇನ್ನೂ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next