ಜಗಳೂರು: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರತಿನಿತ್ಯ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಪರಿಹರಿಸಲು ಮುಂದಾಗಬೇಕು ಎಂದು ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಪಿಡಿಒಗಳಿಗೆ ಸೂಚನೆ ನೀಡಿದರು.
ಸೋಮವಾರ ರಾತ್ರಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಇಂದು ತಾಲೂಕಿನ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರು ಹಲವಾರು ಸಮಸ್ಯೆಗಳನ್ನು ಮುಂದಿಡುತ್ತಾರೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಥಮ ಆದ್ಯತೆ ನೀಡಬೇಕು ಎಂದರು.
ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಆದರೆ ನೀವು ಸಮರ್ಪಕವಾಗಿ ಕೆಲಸ ಮಾಡಿದರೆ ಮಾತ್ರ ಸಮಸ್ಯೆಯನ್ನು ನಿವಾರಿಸಲು ಸಾಧ್ಯ. ಆದ್ದರಿದ ನೀವು ಪ್ರತಿನಿತ್ಯ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಬೇಕು. ಗ್ರಾಮದಲ್ಲಿರುವ ಜನಸಂಖ್ಯೆ ಎಷ್ಟು? ಬೋರ್‌ವೆಲ್ಗಳ ಸಂಖ್ಯೆ, ಎಷ್ಟು ಟ್ಯಾಂಕರ್ ನೀರಿನ ಅವಶ್ಯಕತೆ ಇದೆ ಎಂಬುದನ್ನು ಪಟ್ಟಿ ಮಾಡಿಕೊಂಡು ನೀರಿನ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗಾಗಿ ತೊಟ್ಟಿಗಳಲ್ಲಿ ನೀರು ತುಂಬಿಸಬೇಕು ಎಂದರು.
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ ಬಗ್ಗೆ ಆಡಳಿತಕ್ಕೆ ಸಮರ್ಪಕ ಮಾಹಿತಿ ಒದಗಿಸಬೇಕು. ಇದರಲ್ಲಿ ಯಾವುದೇ ರೀತಿಯ ಹಗರಣ ಮಾಡಲು ಬಿಡುವುದಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.
ತಾಲೂಕಿನ ಕೆಲವು ಗ್ರಾಮಗಳಲ್ಲಿ ಮನೆಗೆ ಎರಡು ಬಿಂದಿಗೆ ನೀರು ಕೊಡುತ್ತಾರೆ ಎಂಬ ದೂರುಗಳು ಕೇಳಿ ಬಂದಿವೆ. ಎರಡು ಬಿಂದಿಗೆ ನೀರು ಸಾಕಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಮನೆಯಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ನೀರು ಕೊಡಿ ಎಂದು ಸೂಚಿಸಿದರು.
ತಾಲೂಕಿನ ಗುರುಸಿದ್ದಪುರ ಗ್ರಾಮದಲ್ಲಿ ಗೋಶಾಲೆಯನ್ನು ತೆರೆಯಲಾಗಿದ್ದು, ರೈತರಿಗೆ ಉಚಿತವಾಗಿ ಮೇವು ನೀಡಲಾಗುತ್ತದೆ. ಇದರಲ್ಲಿಯೂ ಸಹ ಯಾವುದೇ ಲೊಪದೋಷವಾಗದಂತೆ ದಾಖಲೆಗಳನ್ನು ನಿರ್ವಹಿಸಲು ಸೂಚಿಸಿದ್ದೇನೆ ಎಂದರು.
ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು. ಜಿಲ್ಲೆಯ 54 ಸಾವಿರ ರೈತರ ಖಾತೆಗಳಿಗೆ 13 ಕೋಟಿ ರೂ. ಜಮಾ ಮಾಡಲಾಗಿದೆ. ತಾವು ಪ್ರತಿ ಗುರುವಾರ ತಾಲೂಕಿಗೆ ಭೇಟಿ ನೀಡಲಿದ್ದು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ತಿಮ್ಮಣ್ಣ ಉಜ್ಜಿನಿ , ಇಒ ಜಾನಕಿರಾಮ್, ಕಂಪಳಮ್ಮ, ಇಂಜಿನಿಯರ ದಯಾನಂದಸ್ವಾಮಿ ಹಾಗೂ ಪಿಡಿಒಗಳು ಹಾಜರಿದ್ದರು.