ಮುದ್ದೇಬಿಹಾಳ: ಸ್ನಾನ ಮಾಡಲು ಕೆರೆಗೆ ತೆರಳಿದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ನೀರು ಪಾಲಾದ ಘಟನೆ ಇಲ್ಲಿನ ಇಂದಿರಾ ವೃತ್ತದ ಬಳಿ ಇರುವ ಕೆರೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದ್ದು ಸಂಜೆವರೆಗೂ ಶವಕ್ಕಾಗಿ ಹುಡುಕಾಟ ನಡೆಸಿದ್ದರೂ ಶವ ಪತ್ತೆಯಾಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿ ಮಂಗಳವಾರ ಬೆಳಗ್ಗೆ ಮತ್ತೇ ಶವದ ಹುಡುಕಾಟಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ
ತೀರ್ಮಾನಿಸಿದ್ದಾರೆ.
ನೀರು ಪಾಲಾದವನನ್ನು ಮಹಾರಾಷ್ಟ್ರ ಮೂಲದ ಬಲೂನ್ ಮಾರಾಟ ಮಾಡಿ ಜೀವನ ನಿರ್ವಹಿಸುವ ಅಲೆಮಾರಿ ಜನಾಂಗಕ್ಕೆ ಸೇರಿದ ಬಾಬು ಪವಾರ್ (65) ಎಂದು ಗುರುತಿಸಲಾಗಿದ್ದು ಕೆರೆ ಪಕ್ಕದಲ್ಲೇ ಈತ ತನ್ನ ಕುಟುಂಬದ ಸದಸ್ಯರೊಂದಿಗೆ ಬಲೂನ್ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗಿದೆ. ಬಾಬು ತನ್ನ ಕುಟುಂಬದ ಸದಸ್ಯರ ಸಮೇತ ಸಂಚರಿಸುತ್ತ ಬಲೂನು ಮಾರಿ ಜೀವನ ನಿರ್ವಹಿಸುತ್ತಿದ್ದ. ಕೆರೆ ಹತ್ತಿರ ಇರುವ ಮುಖ್ಯ ರಸ್ತೆ ಪಕ್ಕದಲ್ಲಿ ಈತನ ಕುಟುಂಬಕ್ಕೆ ಸೇರಿದ 4-5 ಜನರು ವಿವಿಧ ಆಕಾರದ ಬಲೂನ್‌ಗಳನ್ನು ಮಾರಾಟ ಮಾಡುತ್ತಿದ್ದರು. ಈ ಸಂದರ್ಭ ಬಾಬು ಸ್ನಾನ ಮಾಡಲೆಂದು ಪಕ್ಕದಲ್ಲೇ ಇದ್ದ ಕೆರೆಗೆ ಇಳಿದಿದ್ದಾನೆ.
ಇದನ್ನು ಬಲೂನು ಮಾರುತ್ತಿದ್ದ ಆತನ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಗಮನಿಸಿಲ್ಲ. ಆದರೆ ಬಾಬು ಕಾಲುಜಾರಿ ನೀರಲ್ಲಿ ಬಿದ್ದುದನ್ನು ಕೆಲ ಪ್ರತ್ಯಕ್ಷದರ್ಶಿಗಳು ಇವರ ಗಮನಕ್ಕೆ ತಂದಾಗಲೇ ದುರ್ಘಟನೆ ಅರಿವಿಗೆ ಬಂದಿದೆ. ತಕ್ಷಣವೇ ಬಲೂನ್ ಮಾರಾಟ ಸ್ಥಗಿತಗೊಳಿಸಿ ಎಲ್ಲರೂ ಕೆರೆಯತ್ತ ಧಾವಿಸಿ ಗೋಳಿಡತೊಡಗಿದರು. ಮಹಿಳೆಯರ ಆಕ್ರಂದನ ತಾರಕಕ್ಕೇರಿತ್ತು.
ವಿಷಯ ತಿಳಿದು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಭಾರ ಠಾಣಾಧಿಕಾರಿ ರಾಜೇಂದ್ರ ಪೋದ್ದಾರ ನೇತೃತ್ವದಲ್ಲಿ ಧಾವಿಸಿ ಬಂದು ತಮ್ಮಲ್ಲಿರುವ ಸಲಕರಣೆಗಳ ಮೂಲಕ ಶವಕ್ಕಾಗಿ ಕೆರೆ ನೀರಲ್ಲಿ ಹುಡುಕಾಟ ನಡೆಸಿದರೂ ಕತ್ತಲಾಗುವವರೆಗೂ ಶವ ದೊರಕಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಮತ್ತೇ ಶವದ ಹುಡುಕಾಟ ಮುಂದುವರಿಸಲು ತೀರ್ಮಾನಿಸಲಾಗಿದೆ.
ಘಟನೆ ಮಾಹಿತಿ ಪಡೆದ ತಹಶೀಲ್ದಾರ್ ವಿನಯ್‌ಕುಮಾರ ಪಾಟೀಲ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು ಘಟನೆ ಮಾಹಿತಿ ಪಡೆದುಕೊಂಡರು. ಶವ ದೊರಕದ ಕಾರಣ ಇದುವರೆಗೂ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ವರ್ಷದ ಹಿಂದೆ ಜೀರ್ಣೋದ್ಧಾರಗೊಳಿಸಿದ್ದ ಈ ಕೆರೆಯಲ್ಲಿ ಕೆಲ ತಿಂಗಳ ಹಿಂದೆ ಮೀನು ಹಿಡಿಯಲು ತೆರಳಿದ್ದ ಬಾಲಕರು ನೀರು ಪಾಲಾಗಿದ್ದರು. ಇದೀಗ ನಡೆದದ್ದು ಎರಡನೇ ಘಟನೆಯಾಗಿದೆ.