ಕೂಡ್ಲಿಗಿ: ವಿದ್ಯಾರ್ಥಿಗಳು ಪರೀಕ್ಷೆ ಎಂಬುದು ಕಬ್ಬಿಣ ಕಡಲೆ ಎಂದು ಭಾವಿಸಬೇಡಿ. ಬದಲಾಗಿ ತರಗತಿಯ ಪಾಠ-ಪ್ರವಚನಗಳ ಜತೆಗೆ ಸ್ನೇಹಿತರೊಂದಿಗೆ ಮಾತನಾಡುವಾಗ ಪಠ್ಯ ವಿಷಯಗಳ ಚರ್ಚಿಸಿದರೆ ಪರೀಕ್ಷಗೆ ಪೂರಕವಾಗಲಿದೆ ಎಂದು ಕಲಬುರ್ಗಿ ವಿಭಾಗದ ಶಿಕ್ಷಣ ಇಲಾಖೆ ಆಯುಕ್ತಾಲಯದ ಉಪ ನಿರ್ದೇಶಕ ಎನ್.ಎಚ್.ನಾಗೂರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಹೊಸಹಳ್ಳಿಯ ವೈಭವ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗಿನ ಪರೀಕ್ಷೆಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರೀಕ್ಷೆ ಎಂಬುದು ಯುದ್ಧವಲ್ಲ. ಅದೊಂದು ಸಾಧನೆ ನೀವುಗಳ ಸಾಧ್ಯವಾದಷ್ಟು ದೃಶ್ಯ ಮಾಧ್ಯಮ, ಮೊಬೈಲ್ ಸಹವಾಸದಿಂದ ದೂರವಿರುವುದು ಒಳಿತು, ನಿಮ್ಮ ಮುಖವನ್ನು ಕನ್ನಡಿಯ ಮುಂದೆ ನಿಂತು ಅಲಂಕಾರ ಸರಿಮಾಡಿಕೊಂಡಂತೆ ನಿಮ್ಮ ಅಭ್ಯಾಸ ಸರಿಪಡಿಸಿಕೊಳ್ಳಬೇಕು. ವ್ಯಾಸಂಗದ ವೇಳೆ ನಿಮ್ಮ ಆರೋಗ್ಯ ಪರಿಪೂರ್ಣವಾಗಿದ್ದು, ಮನಸ್ಸು ಏಕಾಗ್ರತೆಯಿಂದರಬೇಕು ಎಂದು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಉಮದೇವಿ ಮಾತನಾಡಿ, ವಿಶ್ವವಿಖ್ಯಾತ ಜ್ಞಾನಿಗಳು ಹುಟ್ಟಿದ ನಾಡಿನಲ್ಲಿ ಜನಿಸಿದ ನಾವುಗಳು ಪುಣ್ಯವಂತರು. ಅವರ ಸ್ಫೂರ್ತಿ ಪಡೆದು ವಿದ್ಯಾರ್ಥಿಗಳು ತಮ್ಮ ಹಳ್ಳಿಯಲ್ಲಿನ ಜಾತ್ರೆಗೆ ತೆರಳುವಂತೆ ಪರೀಕ್ಷೆಗೆ ಉತ್ಸಾಹದಿಂದ ತೆರಳಬೇಕು. 3 ತಾಸಿನ ಪರೀಕ್ಷೆ ಬರೆಯಲು ಕಠಿಣ ಪರಿಶ್ರಮದ ಜ್ಞಾನ ಸಾಕು. ಹೀಗಾಗಿ ಸಮಯ ವ್ಯರ್ಥ ಮಾಡಿಕೊಳ್ಳಬಾರದು ಎಂದರು.
ಸಂವಾದ ಕಾರ್ಯಕ್ರಮಕ್ಕೆ ಪಟ್ಟಣದ ನಾಲ್ಕು ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯ ಆಡಳಿತಾಧಿಕಾರಿಗಳು, ಮುಖ್ಯು ಶಿಕ್ಷಕರು, ಶಿಕ್ಷಕರು ಹಾಜರಿದ್ದರು.
ಸಂವಾದ: ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಜಿ.ಡಿ.ಕಾಂಚನ, ಪರೀಕ್ಷವೆಂದರೆ ಹಿಂಜರಿಕೆ ಏಕೆ? ಎಂದು ಪ್ರಶ್ನಿಸಿದಳು. ಇದಕ್ಕೆ ಪ್ರತಿಕ್ರಿಯಿಸಿದ ನಾಗೂರ, ಕೇಲವರಲ್ಲಿ ಹಿಂಜರಿಕೆ ಇರುವುದು ಸಹಜ. ಹಿಂಜರಿಕೆವೆಂಬುದು ಸಾಧನೆಗೆ ಕೊಡಲಿಪೆಟ್ಟು, ಮುನ್ನುಗುವುದು ಸಾಧನೆ ಮೆಟ್ಟಿಲು ಎಂದು ಭಾವಿಸಬೇಕು ಎಂದು ತಿಳಿಸಿದರು. ಬೆಳಗ್ಗೆ ಅಧ್ಯಯನ ಸೂಕ್ತವೇ ಎಂದು ಜಿ.ಡಿ.ಕಾಂಚನ ಮತ್ತೂಮ್ಮೆ ಪ್ರಶ್ನಿಸಿದಳು. ಇದಕ್ಕೆ ಪ್ರತಿಕ್ರಿಯಿಸಿದ ನಾಗೂರ, ದಿನದ 24 ತಾಸಿನ ಯಾವ ಸಮಯದಲ್ಲಾದರೂ ಅಧ್ಯಯನ ಮಾಡಬಹುದು. ಆದರೆ, ವ್ಯಾಸಂಗ ಸಮಯದಲ್ಲಿ ಏಕಾಗ್ರತೆ ಮುಖ್ಯ ಎಂದು ಕಿವಿಮಾತು ಹೇಳಿದರು.
ಸಮಾಜ ವಿಜ್ಞಾನ ಮತ್ತು ಗಣಿತ ಕಬ್ಬಿಣ ಕಡಲೆ ಅಲ್ವ ಸಾರ್ ಎಂದು ವಿದ್ಯಾರ್ಥಿನಿ ಮೇಘಾನಾ ಪ್ರಶ್ನಿಸಿದಳು. ಇದಕ್ಕೆ ಪ್ರತಿಕ್ರಿಯಿಸಿದ ನಾಗೂರ, ಪರಿಶ್ರಮದಿಂದ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎಂಬ ಸಣ್ಣತನ ಕೈಬಿಟ್ಟು ಪರೀಕ್ಷೆಗೆ ಸಿದ್ಧರಾಗಿ ಸಲಹೆ ನೀಡಿದರು.