ತಿ.ನರಸೀಪುರ: ತಾಪಂ ನೌಕರನೊಬ್ಬ ದ್ವಿಚಕ್ರವಾಹನದಲ್ಲಿ ಪೆಟ್ರೋಲ್ ಕದಿಯುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಮೂರು ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ಪಟ್ಟಣದ ಮಿನಿವಿಧಾನ ಸೌಧದಲ್ಲಿ ನಡೆದಿದೆ.
ಸೋವವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಪಟ್ಟಣದ ಮಿನಿ ವಿಧಾನಸೌಧದ ನೆಲ ಮಾಳಿಗೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿ ತಾಪಂನ ಬೊರ್‌ವೆಲ್ ರಿಪೇರಿ ಮಾಡುವ ನೌಕರ ಜಾಫರ್ ಪೆಟ್ರೋಲ್ ಕದಿಯುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸ್ಕೂಟರ್ ಪಕ್ಕದಲ್ಲೇ ನಿಲ್ಲಿಸಲಾಗಿದ್ದ
ತಹಶೀಲ್ದಾರ್ ಕಚೇರಿಗೆ ಸೇರಿದ ಹಳೆಯ ಟಾಟಾ ಸುಮೋ ಹಾಗೂ ಅಂಗವಿಕಲರೊಬ್ಬರ ತ್ರಿಚಕ್ರವಾಹನ ಬೆಂಕಿಗಾಹುತಿಯಾಗಿದೆ. ಅದೃಷ್ಟ ವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಅಂದಾಜು 1.70 ಲಕ್ಷರೂಗಳ ನಷ್ಟ ಉಂಟಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಘಟನಾ ಸಂಬಂಧ ಮಿನಿ ವಿಧಾನ ಸೌಧದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಪರಿಶೀಲಿಸಲಾಗಿ ಜಾಫರ್ ಪೆಟ್ರೋಲ್ ಕದಿಯುತ್ತಿದ್ದು ಸ್ಪಷ್ಟವಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಾಜು ದೂರು ದಾಖಲಿಸಿದರು.
ತಹಶೀಲ್ದಾರ್ ದೂರಿನನ್ವಯ ತಿ.ನರಸೀಪುರ ಠಾಣೆಯ ಪಿಎಸ್‌ಐ ಎನ್.ಆನಂದ್ ಪ್ರಕರಣ ದಾಖಲಿಸಿಕೊಂಡು ಜಾಫರ್‌ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕ ಎಂ.ಅಶ್ವಿನ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.