ಬೆಳ್ತಂಗಡಿ: ಜಗತ್ತು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದೆ, ನಾವು ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ಅಕ್ಷರಶಃ ಕಲುಷಿತಗೊಳಿಸಿದೆ. ಬದಲಾದ ಸನ್ನಿವೇಶದಲ್ಲಿ ಅನಿವಾರ್ಯ ಕಾರಣ ಗಳಿಂದ ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಂಡವರು ಇಂದು ಪಾರಂಪರಿಕ ಅನುಕರಣೆಗಳತ್ತ ವಾಲುತ್ತಿದ್ದಾರೆ ಎಂಬುದು ಅಷ್ಟೇ ಸತ್ಯ. ಹೀಗೆ ಹೇಳಲು ಒಂದು ಕಾರಣವಿದೆ.
ವೃತ್ತಿಯಲ್ಲಿ ಕೆಮಿಕಲ್ ಎಂಜಿನಿಯರ್ ಆಗಿದ್ದು, ಉನ್ನತ ಸ್ಥಾನಮಾನ, ಕೈತುಂಬ ಆದಾಯ ಬರು ತ್ತಿದ್ದರೂ ದೇಹಕ್ಕೆ ಸೇರುವ ಆಹಾರ ಮಾತ್ರ ವಿಷ ಪೂರಿತ ಎಂಬ ನೈಜತೆಯನ್ನು ಮನಗಂಡು, ಆಹಾರ ದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕೆಂಬ ದೃಢತೆ ಯಿಂದ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಜೆಬೈಲು ಗಂಪದಕೋಡಿ ನಿವಾಸಿ ಅಭಿನಂದನ್ ದೇಸೀ ಗಿರ್ ಆಕಳಿನ ಹೈನುಗಾರಿಕೆಗೊಂದು ಹೊಸ ಆಯಾಮ ನೀಡಿದ್ದಾರೆ.
ಮೂಲತಃ ಸುಳ್ಯದವರಾಗಿದ್ದುಕೊಂಡು 20 ವರ್ಷಗಳಿಂದ ಇಂದಬೆಟ್ಟುವಿನಲ್ಲಿ ನೆಲೆಸಿರುವ ನಿವೃತ್ತ ಪ್ರಾಧ್ಯಾಪಕ ಅಣ್ಣಪ್ಪ ಗೌಡ ಮತ್ತು ನಿವೃತ್ತ ಶಿಕ್ಷಕಿ ಅನಸೂಯಾ ಅವರ ಪ್ರಥಮ ಪುತ್ರ ಅಭಿನಂದನ್. ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪ್ರಾಥಮಿಕ, ಪದವಿ ಶಿಕ್ಷಣ ಪೂರೈಸಿ, ಬೆಂಗಳೂರು ದಯಾನಂದ ಸಾಗರ್‌ನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪೂರೈಸಿ 8 ವರ್ಷ ವಿವಿಧ ಕಂಪೆನಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಪಟ್ಟಣ ಆಹಾರ ಕ್ರಮಕ್ಕೆ ಪರ್ಯಾಯ :
ಬೆಂಗಳೂರಿನ ಜೀವನ ಕ್ರಮ, ಆಹಾರ ಶೈಲಿ ಹಾಗೂ ರಾಸಾಯನಿಕ ಬಳಕೆಯನ್ನು ಸ್ವತಃ ಹತ್ತಿರ ದಿಂದ ಬಲ್ಲವರಾಗಿದ್ದರಿಂದ ತನ್ನ ವೃತ್ತಿ ತ್ಯಜಿಸಿ ಸ್ನೇಹಿತರೊಂದಿಗೆ, ಪೋಷಕರೊಂದಿಗೆ ವಿಚಾರ ಚರ್ಚಿಸಿ ಸಾವಯವ ಕೃಷಿ ಚಟುವಟಿಕೆ ನಡೆಸಲು ಮನಸ್ಸು ಮಾಡಿದ್ದರು. ಇದಕ್ಕಾಗಿ ಅಭಿನಂದನ್ ಆಯ್ಕೆ ಮಾಡಿದ್ದು ದೇಸೀ ತಳಿಯ ಹೈನುಗಾರಿಕೆ. ಆರಂಭದಲ್ಲಿ ಬೆಂಗಳೂರು ಆಡುಗೋಡಿ ನ್ಯಾಷನಲ್ ಡೇರಿ ರೀಸರ್ಚ್ ಇನ್‌ಸ್ಟಿಟ್ಯೂಟ್ ಅನ್ನು ಸಂಪರ್ಕಿಸಿ ಅಲ್ಲಿನ ವಿಜ್ಞಾನಿಗಳ ಸಲಹೆ ಪಡೆದು ಗಿರ್ ಆಕಳು ಸಾಕಾಣೆಗೆ ಮುಂದಾದರು.
10 ಗಿರ್ ಆಕಳು :
ತನ್ನ ಇಂದಬೆಟ್ಟುವಿನಲ್ಲಿನ 5 ಎಕರೆ ಕೃಷಿ ಭೂಮಿಯಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಅತ್ಯುತ್ತಮ ಶುದ್ಧ ದೇಸೀ ಗಿರ್ ತಳಿ ಸಾಕಣೆಯಲ್ಲಿ ತೊಡಗಿದ್ದಾರೆ. ಗಿರ್ ಆಕಳುಗಳ 9 ವಿಧಗಳ ಪೈಕಿ 4 ವಿಧ (ಬ್ಲಿಡ್ ಲೈನ್) ಹೊಂದಿರುವ ಸುಮಾರು 10 ಗಿರ್ ಆಕಳಿನ ಹಾಲಿನ ಉತ್ಪನ್ನ ತಯಾರಿಸುವ ಮೂಲಕ ಉಭಯ ಜಿಲ್ಲೆಯಲ್ಲಿ ಮಾದರಿ ಕೃಷಿಕನಾಗಿ ಯಶಸ್ಸು ಪಡೆದಿದ್ದಾರೆ. 10 ಹಸು, ಒಂದು ಹೋರಿ, 5 (3 ಗಂಡು, 2ಹೆಣ್ಣು) ಕರುಗಳಿವೆ. ಇವುಗಳ ಪೈಕಿ 6 ಹಾಲು ನೀಡುವ ಹಸುಗಳಿದ್ದು ಉಳಿದವು ಗರ್ಭಧಾರಣೆಗೆ ಹತ್ತಿರವಾಗಿವೆ.
ಆಹಾರದ ಕ್ರಮ :
ಇವುಗಳ ಆಹಾರ ಕ್ರಮವೂ ವಿಭಿನ್ನ. ಎಳ್ಳು ಹಿಂಡಿ, ತೆಂಗಿನ ಹಿಂಡಿ, ನೆಲಗಡಲೆ ಹಿಂಡಿ, ರಾಗಿ, ಜೋಳ, ಗೋಧಿ ಏಕದಳ ಧಾನ್ಯಗಳು (ಕಾಬೋì ಹೈಡ್ರೇಟ್ ಎನರ್ಜಿ), ತೊಗರಿ ನುಚ್ಚು (ಪೊ›ಟೀನ್), ಉದ್ದಿನ ನುಚ್ಚು, ಅಕ್ಕಿ ತೌಡು ಸೇರಿ 9 ಬಗೆ ಆಹಾರ ನೀಡಲಾಗುತ್ತದೆ. ದ್ವಿದಳ ಧಾನ್ಯ 50%, ಏಕದಳ ಧಾನ್ಯ 25%, ಹಿಂಡಿ 25% (ಫೈಬರ್ 25%, ಫ್ಯಾಟ್ 25%, ಬೂಸ 50%). 14 ದಿನಗಳಲ್ಲಿ ಬೇಕಾವಷ್ಟು ಮಿಶ್ರಣ ಮಾಡಿ ಶೇಖರಿಸಿಡಲಾಗುತ್ತದೆ. ತಿಂಗಳಿಗೆ 25 ಸಾವಿರ ರೂ. ಆಹಾರಕ್ಕೆ ಖರ್ಚಾಗುತ್ತದೆ. ಹಾಲು ಕೊಡುವ ಹಸುವಿಗೆ ದಿನಕ್ಕೆ 5 ಕೆ.ಜಿ. ಈ ನೀಡಲಾಗುತ್ತದೆ. ಗಿರ್ ಹಾಲಿನ ಉತ್ಪನ್ನಕ್ಕೆ ಆಯುರ್ವೇದಲ್ಲಿ ವೈಟ್ ಗೋಲ್ಡ… ಎಂದೇ ಕರೆಯುತ್ತಾರೆ. ಇದು ಬಹಳಷ್ಟು ಔಷಧೀಯ ಗುಣ ಹೊಂದಿದೆ.
ಸೆಗಣಿ ಬೆರಣಿ :
ದೇಸೀ ದನದ ಬೆರಣಿಗೆ ಬಹಳಷ್ಟು ಬೇಡಿಕೆ ಇದೆ. ಅದರಲ್ಲೂ ಗಿರ್ ತಳಿಗೆ ಎಲ್ಲಿಲ್ಲದ ಬೇಡಿಕೆ ಇದ್ದು ಮುಂದಕ್ಕೆ ಬೆರಣಿ ಉತ್ಪಾದನೆಗೂ ಚಿಂತಿಸುತ್ತಿದ್ದಾರೆ. ದ.ಕ.ಜಿಲ್ಲೆಯಲ್ಲಿ ಪ್ಯೂರ್ ಬ್ರೀಡ್(ಯಾವುದೇ ಕ್ರಾಸ್ ಬ್ರೀಡ್ ಇಲ್ಲ) ಇರುವ ಹಸುಗಳ ಈ ರೀತಿಯ ಸಾಕಣೆ ಇಲ್ಲಿ ಹೊರತಾಗಿ ಬೇರೆಲ್ಲೂ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಗಿರ್ ಆಕಳು ದೇಸೀ ತಳಿಗಳಾಗಿದ್ದರಿಂದ ತೋಟಗಳಲ್ಲಿ ವಿಹಾರ ಮಾಡಿ ಮೇವು ಸೇವಿಸುತ್ತವೆ. ಸೂರ್ಯನ ಕಿರಣ ಸೋಕುವುದರಿಂದ ಇದರ ಹಾಲಿನ ಅಂಶ ಹೆಚ್ಚಾಗು ವುದರಿಂದ ದಷ್ಟಪುಷ್ಟವಾಗಿಯೂ ಬೆಳೆಯುತ್ತದೆ.
ಅಭಿನಂದನ್ ಪ್ರಸಕ್ತ ಒಂದೂವರೆ ವರ್ಷಗಳಿಂದ ಗಿರ್ ಸಾಕಲು ಮುಂದಾಗಿದ್ದು, ಸ್ವರ್ಣ ಕಪಿಲ, ಮಹಾರಾಜ, ಭವನಗರ, ಮೋರ್ಬಿ ಗಿರ್ ಆಕಳನ್ನು ಹೊಂದಿದ್ದು ಮುಂದೆ ಹೆಚ್ಚಿನ ಹಸು ಸಾಕಾಣೆಗೆ ಸಿದ್ಧತೆ ಮಾಡಿದ್ದಾರೆ. ಗಿರ್‌ನಲ್ಲಿ ಸ್ವರ್ಣ ಕಪಿಲ ಬಲು ಸುಂದರ ಹಾಗೂ ಇವುಗಳ ಗೊರಸು, ಕಣ್ಣು, ಎಲ್ಲವೂ ಕಡಿಮೆ ಕಂದು ಬಣ್ಣವಾಗಿದ್ದು, ಇವುಗಳ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬಹಳ ಬೇಡಿಕೆಯಿದೆ.
ಪ್ರತಿನಿತ್ಯ 50ರಿಂದ 60 ಲೀ.ಹಾಲು ಸಂಗ್ರಹ :
ಹಾಲಿನ ಉತ್ಪನ್ನವನ್ನು ತಾವೇ ಮಾರುಕಟ್ಟೆಗೆ ಪರಿಚಯಿಸಿದ್ದರಿಂದ ಗ್ರಾಹಕರ ವಿಶ್ವಾಸ ಕಾಯ್ದುಕೊಳ್ಳಲು ಗಿರ್ ತಳಿ ಹೊರತಾಗಿ ಜರ್ಸಿ, ಎಚ್.ಎಫ್ ಯಾವುದೇ ಹಸುಗಳ ಸಾಕಾಣೆಗೆ ಮುಂದಾಗಿಲ್ಲ. ಪ್ರಸಕ್ತ ಪ್ರತಿನಿತ್ಯ 6 ಹಸುಗಳಿಂದ ನಿತ್ಯ ಸರಾಸರಿ 50 ರಿಂದ 60 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು ಉಜಿರೆ, ಗುರಿಪಳ್ಳ ಸುತ್ತಮುತ್ತ ಬಲು ಬೇಡಿಕೆಯಿದೆ.
ಲೀಟರ್ ಹಾಲಿಗೆ 90 ರೂ. :
ಮಾಮೂಲಿ ಹಸು ಹಾಲಿಗೆ 44 ರೂ. ಇದ್ದು, ಗಿರ್ ಹಸುಗಳ ಹಾಲು ಹಾಗೂ ಹಾಲಿನ ಉತ್ಪನ್ನಗಳು ಬಲು ದುಬಾರಿ. ಮಾರುಕಟ್ಟೆಯಲ್ಲಿ ದರ 100 ರಿಂದ 120 ರೂ.ಇದೆ. ಅಭಿನಂದನ್ ಅವರು 90 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ತುಪ್ಪ ಲೀಟರ್‌ಗೆ 2,990 ರೂ. ಇದೆ. ಮುಂದಿನ ದಿನಗಳಲ್ಲಿ ಬೆಣ್ಣೆ, ಮಜ್ಜಿಗೆ ಮಾರಾಟದ ಚಿಂತನೆಯಲ್ಲಿದ್ದಾರೆ.
ಆಹಾರ ಸರಪಣಿ ಹದಗೆಟ್ಟಿದೆ. ಹೀಗಾಗಿ ಆಹಾರದ ಮೂಲ ಹಾಲಿನ ಉತ್ಪನ್ನವೆಂಬುದನ್ನು ಅರಿತು ದೇಸೀ ತಳಿ ಗಿರ್ ಹೈನುಗಾರಿಕೆಗೆ ಮುಂದಾಗಿದ್ದೇನೆ. ಪರಿಶುದ್ಧ ಗಿರ್ ಹಾಲಿನ ಉತ್ಪನ್ನ ತಯಾರಿಸುವ ಜತೆಗೆ ಯುವಕರಿಗೆ ಪ್ರೇರಣೆಯಾಗುವಲ್ಲಿ ನನ್ನ ಮೊದಲ ಪ್ರಯತ್ನವಾಗಿದೆ. ದೇಸೀ ತಳಿ ಲಾಭ ಇಲ್ಲ ಎನ್ನುತ್ತಾರೆ. ಆದರೆ ಲಾಭದ ದೃಷ್ಟಿ ನೋಡದೆ ಸಂಪೂರ್ಣ ಪೂರ್ವತಯಾರಿ ಶ್ರದ್ಧೆ ಇದ್ದಲ್ಲಿ ಯಶಸ್ಸು ಪಡೆಯಬಹುದು. ಮುಂದಿನ ದಿನಗಳಲ್ಲಿ ಸಂಪೂರ್ಣ ಯಾಂತ್ರೀಕರಣವಾಗಿ ಮಾಡಬೇಕೆಂಬ ಚಿಂತನೆ ಇದೆ.
–ಅಭಿನಂದನ್, ಇಂದಬೆಟ್ಟು ಗಿರ್ ಹೈನುಗಾರರು.
-ಚೈತ್ರೇಶ್ ಇಳಂತಿಲ