Advertisement

ಜಿಪಿಎಸ್‌ ಹೋಗಿ ವಿಪಿಎಸ್‌ ಬರುತ್ತೆ!

10:22 PM Jul 07, 2019 | mahesh |

ಒಂದಾನೊಂದು ಕಾಲದಲ್ಲಿ ಮೊದಲ ಬಾರಿ ವಿಳಾಸ ಹುಡುಕಿಕೊಂಡು ಹೊರಟಾಗ ದಾರಿಯಲ್ಲಿ ಸಿಗುವ ಜನರನ್ನೇ ನೆಚ್ಚಿಕೊಳ್ಳಬೇಕಿತ್ತು. ಎರಡು ಮೂರು ಬಾರಿಯಾದರೂ ದಾರಿಹೋಕರನ್ನು ಕೇಳಿಕೊಂಡು ತಲುಪಬೇಕಾದ ವಿಳಾಸ ತಲುಪುತ್ತಿದ್ದೆವು. ಆದರೆ ಆಮೇಲೆ ಬಂತು ನೋಡಿ ಜಿಪಿಎಸ್‌ ಜಮಾನಾ. ಈಗ ಸ್ಮಾರ್ಟ್‌ಫೋನ್‌ ಒಂದಿದ್ದರೆ ಸಾಕು. ಅದನ್ನು ಕೈಲಿ ಹಿಡಿದು ಅದು ದಿಕ್ಕು ತೋರಿಸಿದತ್ತ ನಡೆಯುತ್ತಾ ಬೇರೆ ಯಾರ ಸಹಾಯವೂ ಇಲ್ಲದೆ ವಿಳಾಸ ಹುಡುಕಿಕೊಳ್ಳುತ್ತಿದ್ದೇವೆ. ಇದರಿಂದ ದಾರಿಹೋಕರ ಮೇಲಿನ ಅವಲಂಬನೆಯಂತೂ ಕಡಿಮೆಯಾಗಿದೆ. ಅಲ್ಲದೆ ಅಪರಿಚಿತರನ್ನು ಹೇಗಪ್ಪಾ ಕೇಳುವುದು ಎಂಬ ಸಂಧಿಗ್ಧತೆಯೂ ತಪ್ಪಿದೆ.

Advertisement

ಜಿಪಿಎಸ್‌ ಎನ್ನುವುದು “ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌’ ಎನ್ನುವುದರ ಶಾರ್ಟ್‌ಫಾರ್ಮ್. ಅದು ಉಪಗ್ರಹ ಆಧಾರಿತ ಮಾರ್ಗದರ್ಶನ(ನ್ಯಾವಿಗೇಷನ್‌) ವ್ಯವಸ್ಥೆ. ಸೈನಿಕರಿಗೆ ಯುದ್ಧದ ಸಂದರ್ಭದಲ್ಲಿ ಉಪಯೋಗವಾಗಲಿ ಎಂಬ ಉದ್ದೇಶದಿಂದ ಜಿಪಿಎಸ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಅಮೆರಿಕ ಸೇನೆ ಮಾತ್ರವೇ ಮೊದಲು ಅದನ್ನು ಬಳಸುತ್ತಿತ್ತು. ನಂತರದ ದಿನಗಳಲ್ಲಿ ತಂತ್ರಜ್ಞಾನವನ್ನು ಸಾರ್ವಜನಿಕ ಬಳಕೆಗೂ ಮುಕ್ತವಾಗಿಸಿತು. ಸದ್ಯ ಗೂಗಲ್‌ ನ್ಯಾವಿಗೇಷನ್‌ ಕ್ಷೇತ್ರದಲ್ಲಿ ನಾಯಕ ಎನಿಸಿಕೊಂಡಿದೆ. ಕಾಲದಿಂದ ಕಾಲಕ್ಕೆ ಅದು ಜಿಪಿಎಸ್‌ ಆಧಾರಿತ ಗೂಗಲ್‌ ನಕಾಶೆ(ಗಾಗಲ್‌ ಮ್ಯಾಪ್ಸ್‌) ವ್ಯವಸ್ಥೆಯನ್ನು ಸುಧಾರಣೆಗೊಳಪಡಿಸುತ್ತಲೇ ಇರುತ್ತದೆ. ಹಾಗಿದ್ದೂ ಗೂಗಲ್‌ನ ಈ ವ್ಯವಸ್ಥೆ ನೂರಕ್ಕೆ ನೂರು ಪ್ರತಿಶತ ನಿಖರವಾಗಿಲ್ಲ. ವಿಳಾಸ ಹುಡುಕುವಲ್ಲಿ ಸಣ್ಣಪುಟ್ಟ ತಪ್ಪುಗಳು ಆಗುತ್ತಲೇ ಇರುತ್ತವೆ. ಮಾರುಕಟ್ಟೆಯಲ್ಲಿ ಗೂಗಲ್‌ ಮ್ಯಾಪ್ಸ್‌ನಂತೆಯೇ, ಮ್ಯಾಪ್‌ಕ್ವೆಸ್ಟ್‌, ಮ್ಯಾಪ್ಸ್‌ ಮಿ, ಮ್ಯಾಪ್ಸ್‌ ಫ್ಯಾಕ್ಟರ್‌ ಮುಂತಾದ ನ್ಯಾವಿಗೇಷನ್‌ ಸಂಸ್ಥೆಗಳೂ ಇವೆ.

ಜಿಪಿಎಸ್‌ ತಂತ್ರಜ್ಞಾನದಲ್ಲಿ ಸಣ್ಣಪುಟ್ಟ ತಪ್ಪುಗಳಾಗಲು ಕೆಲ ಕಾರಣಗಳನ್ನು ಪಟ್ಟಿ ಮಾಡಬಹುದಾದರೆ ದುರ್ಬಲ ಸ್ಯಾಟಲೈಟ್‌ ಸಿಗ್ನಲ್‌, ಮ್ಯಾಪ್‌ಗ್ಳು ದಿನದಿನಕ್ಕೂ ಅಪ್‌ಡೇಟ್‌ ಆಗದಿರುವುದು. ಹೀಗಾಗಿ ಜಿಪಿಎಸ್‌ಗೆ ಪರ್ಯಾಯ ತಂತ್ರಜ್ಞಾನದ ಕುರಿತು ಸಂಶೋಧನೆಗಳು ಹಿಂದಿನಿಂದಲೇ ಆಗುತ್ತಿವೆ. ಅವುಗಳಲ್ಲೊಂದು ವಿ.ಪಿ.ಎಸ್‌.(ವಿಶುವಲ್‌ ಪೊಸಿಷನಿಂಗ್‌ ಸಿಸ್ಟಮ್‌). ಇನ್ನೂ ಪ್ರಾಯೋಗಿಕ ಹಂತದಲ್ಲಿರುವ ವಿ.ಪಿ.ಎಸ್‌ ತಂತ್ರಜ್ಞಾನ ಜಿಪಿಎಸ್‌ಗಿಂತ ನಿಖರವಾಗಿ ವಿಳಾಸವನ್ನು ಹುಡುಕುತ್ತದೆ ಎಂದು ಹೇಳಲಾಗಿದೆ. ಹೇಗೆಂದರೆ ಉಪಗ್ರಹ ಸಿಗ್ನಲ್‌ಗ‌ಳ ಸಹಾಯದಿಂದ ಮಾತ್ರವೇ ಇದು ಮಾರ್ಗ ತೋರುವುದಿಲ್ಲ. ಅದರ ಜೊತೆಗೆ ಫೋನಿನ ಕ್ಯಾಮೆರಾದ ಸಹಾಯವನ್ನು ಈ ತಂತ್ರಜ್ಞಾನ ಪಡೆದುಕೊಳ್ಳುತ್ತದೆ. ಕ್ಯಾಮೆರಾದಲ್ಲಸಿ ಕಂಡುಬರುವ ದೃಶ್ಯಾವಳಿಯ ಸಹಾಯದಿಂದ ಬಳಕೆದಾರ ಯಾವ ಜಾಗದಲ್ಲಿ ನಿಂತಿದ್ದಾನೆ ಎಂಬುದನ್ನು ಖಚಿತವಾಗಿ ಪತ್ತೆ ಹಚ್ಚಿ ಅಲ್ಲಿಂದ ತಲುಪಬೇಕಾಗಿರುವ ವಿಳಾಸಕ್ಕೆ ದಾರಿ ತೋರುತ್ತದೆ. ಕ್ಯಾಮೆರಾದಲ್ಲಿ ಕಂಡು ಬರುವ ಅಂಗಡಿ, ಕಟ್ಟಡಗಳನ್ನು ಸಂಸ್ಕರಣೆಗೆ ಒಳಪಡಿಸಿ ಬಳಕೆದಾರ ಇರುವ ಸ್ಥಳವನ್ನು ಪತ್ತೆ ಹಚ್ಚುತ್ತದೆ ಈ ತಂತ್ರಜ್ಞಾನ. ಇಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತದೆ. ಜಿಪಿಎಸ್‌ ತಂತ್ರಜ್ಞಾನ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದೆಯೋ ಅವೆಲ್ಲವನ್ನೂ ಮೀರುತ್ತದೆ ವಿಪಿಎಸ್‌ ತಂತ್ರಜ್ಞಾನ. ಇದರಿಂದ ಕ್ಯಾಮೆರಾ ತನ್ನ ಲೆನ್ಸ್‌ನಲ್ಲಿ ಕಾಣುವ ದೃಶ್ಯಾವಳಿಯನ್ನು ತನ್ನ ಡೇಟಾಸೆಂಟರ್‌ಗೆ ವರ್ಗಾಯಿಸಿ ಆ ಪ್ರದೇಶವನ್ನು ನಿಖರವಾಗಿ ಪತ್ತೆ ಹಚ್ಚುತ್ತದೆ.

ಈಗಾಗಲೇ ಹಲವು ಅಂತಾರಾಷ್ಟ್ರೀಯ ಕಂಪನಿಗಳು ಕೋಟ್ಯಂತರ ದುಡ್ಡನ್ನು ಈ ತಂತ್ರಜ್ಞಾನದ ಸಂಶೋಧನೆಗಾಗಿ ವಿನಿಯೋಗಿಸುತ್ತಿದೆ. ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಅದಕ್ಕೆಂದೇ ರೂಪಿಸಲಾದ ಉಪಕರಣಗಳಲ್ಲಿ, ಮೊಬೈಲುಗಳಲ್ಲಿ ಕಾಣಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next