ಅಮೇಠಿ: ತನ್ನ ಲೋಕಸಭಾ ಕ್ಷೇತ್ರವಾಗಿರುವ ಅಮೇಠಿಗೆ ಎರಡು ದಿನಗಳ ಭೇಟಿಗೆ ಬಂದಿರುವ ರಾಹುಲ್ ಗಾಂಧಿ ಇಂದು ಗುರುವಾರ ರೈತರ ಆಕ್ರೋಶ, ಪ್ರತಿಭಟನೆ, ಕುಹಕದ ಮಾತುಗಳನ್ನು ಎದುರಿಸಬೇಕಾಯಿತು.
ಮುಂಬರುವ ಲೋಕಸಭಾ ಚುನಾವಣೆಗಾಗಿ ಪ್ರಚಾರಾಭಿಯಾನ ಕೈಗೊಳ್ಳಲು ತನ್ನ ಅಮೇಠಿ ಕ್ಷೇತ್ರಕ್ಕೆ ಬಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಂಥದ್ದೊಂದು ಸನ್ನಿವೇಶ ತನಗೆ ತನ್ನ ಕ್ಷೇತ್ರದ ರೈತರಿಂದಲೇ ಎದುರಾದೀತು ಎಂಬ ಕಲ್ಪನೆಯೇ ಇರಲಿಲ್ಲ ಎಂಬಂತೆ ಕಂಡು ಬಂತು.
“ಒಂದೋ ನಮಗೆ ಉದ್ಯೋಗ ಕೊಡಿಸಿ; ಇಲ್ಲವೇ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆಂದು ನಮ್ಮಿಂದ ಪಡೆದುಕೊಳ್ಳಲಾದ ಭೂಮಿಯನ್ನು ನಮಗೆ ವಾಪಸ್ ಮಾಡಿ; ಅದೂ ಸಾಧ್ಯವಾಗದಿದ್ದರೆ ನೀವು ಇಟಲಿಗೇ ಮರಳಿ; ನಿಮಗೆ ಇಲ್ಲಿರುವ ಅಥವಾ ಇಲ್ಲಿಗೆ ಬರುವ ಯೋಗ್ಯತೆಯೇ ಇಲ್ಲ; ನೀವು ನಮ್ಮ ಭೂಮಿಯನ್ನು ಕಬಳಿಸಿದವರು’ ಎಂದು ರೈತರು ರಾಹುಲ್ ಗಾಂಧಿಗೆ ಆಕ್ರೋಶದ ಮಾತುಗಳ ಸುರಿಮಳೆ ಗೈದರು.
ರಾಹುಲ್ ಗಾಂಧಿಗೆ ಅರಗಿಸಿಕೊಳ್ಳಲಾಗದ ಈ ಕಹಿ ಪ್ರಸಂಗ ಎದುರಾದದ್ದು ಅಮೇಠಿ ಜಿಲ್ಲೆಯ ಗೌರೀಗಂಜ್ ನಲ್ಲಿ.
ರಾಜೀವ್ ಗಾಂಧಿ ಅವರು ಅಮೇಠಿ ಲೋಕಸಭಾ ಸದಸ್ಯರಾಗಿದ್ದಾಗ ಅವರು ಸಾಮ್ರಾಟ್ ಸೈಕಲ್ ಫ್ಯಾಕ್ಟರಿ ಯನ್ನು ಉದ್ಘಾಟಿಸಿದ್ದರು. ಈ ಕಾರ್ಖಾನೆಗಾಗಿ ರೈತರ ಅಪಾರ ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.
1980ರಲ್ಲಿ ಜೈನ್ ಸಹೋದರರು ಕೌಸರ್‌ನ ಕೈಗಾರಿಕಾ ಪ್ರದೇಶದಲ್ಲಿ ಕಂಪೆನಿಯೊಂದಕ್ಕಾಗಿ ರೈತರ 65.47 ಎಕರೆ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಅನಂತರ ಅದೇ ಭೂಮಿಯನ್ನು 2014ರಲ್ಲಿ ಭಾರೀ ಬೆಲೆ ಹರಾಜು ಹಾಕಲಾಗಿ ಕಂಪೆನಿಗೆ ಅಗಾಧ ಲಾಭವಾಗಿತ್ತು.