ಕುಣಿಗಲ್: ತಾಲೂಕಿನ ತಪೋಕ್ಷೇತ್ರ ಕಗ್ಗೆರೆ ತೋಂಟದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಭಾನುವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ 12.30 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡುವ ಮುನ್ನ ನಡೆದ ನಂದಿಧ್ವಜ ಹರಾಜಿನಲ್ಲಿ ಭಕ್ತರು ಪೈಪೋಟಿಯಿಂದ ಪಾಲ್ಗೊಂಡರು. ಅಂತಿಮವಾಗಿ ಶಾಸಕ ಡಾ.ರಂಗನಾಥ್ 1.11 ಲಕ್ಷ ರೂ.ಗೆ ಪ್ರಥಮ ಪೂಜೆ ಪಡೆದುಕೊಂಡರು. ನಂತರ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು.
ಸ್ವಾಮೀಜಿ ಚಾಲನೆ: ಎಡೆಯೂರು ಬಾಳೆಹೊನ್ನೂರು ಶಾಖಾ ಮಠಾಧ್ಯಕ್ಷ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಹಾಗೂ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ದೇವಿ ಕ್ಷೇತ್ರದ ಬಾಲ ಮಂಜುನಾಥ್ ಸ್ವಾಮೀಜಿ ರಥದ ಗಾಳಿಗೆ ತೆಂಗಿನ ಕಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ಭಕ್ತರು ಸುಡುವ ಬಿಸಿಲು ಲೆಕ್ಕಿಸದೆ ರಥಕ್ಕೆ ಹೂವು, ದವನ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಆವರಣ ಹಾಗೂ ದೇವಸ್ಥಾನ ಒಳಾಂಗಣ ಹೂವುಗಳಿಂದ ಅಲಂಕಾರ ಮಾಡಿದ್ದು, ಭಕ್ತರ ಗಮನ ಸೆಳೆಯಿತು.
ಗರ್ಭಗುಡಿಯಲ್ಲಿ ಸಿದ್ದಲಿಂಗೇಶ್ವರ ಸ್ವಾಮಿಯನ್ನು ವಿವಿಧ ನಮೂನೆಯ ಹಣ್ಣುಗಳಿಂದ ಮಾಡಿದ್ದ ಅಲಂಕಾರ ಭಕ್ತರ ಮನಸೋರೆಗೊಂಡಿತು. ಸಂಪ್ರದಾಯದಂತೆ ಸ್ಥಳೀಯ ಸೇರಿದಂತೆ ತಾಲ್ಲಕಿನ ನಾನಾ ಕಡೆಯಿಂದ ರಾತ್ರಿಯೇ ಅಗಮಿಸಿದ್ದ ಭಕ್ತರು ಅರಂಟಿಕೆ ಸಿದ್ಧಪಡಿಸಿ ರಥೋತ್ಸವ ನಂತರ ಎಲ್ಲ ಭಕ್ತರಿಗೆ ಪ್ರಸಾದ ಬಡಿಸಿದರು. ಇನ್ನೂ ಕೆಲವರು ಬಿಸಿಲಿನ ದಾಹ ತೀರಿಸಲು ನೀರು ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಣೆ ಮಾಡಿದರು.
ಈ ಬಾರಿ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ಕುಡಿಯುವ ನೀರು, ಸ್ವತ್ಛತೆ ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಿ ರಥೋತ್ಸವ ಯಶಸ್ವಿಯಾಗಿ ನೆರವೇರಿಸಿದರು. ದೂರದ ಊರುಗಳಿಂದ ಬಂದಿದ್ದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ಮಂಡಳೀ ಕ್ರಮಕೈಗೊಂಡಿತ್ತು.
ಕುಣಿಗಲ್ ಹಿರೇಮಠ ಶಿವಕುಮಾರ ಸ್ವಾಮೀಜಿ, ಕಗ್ಗೆರೆ ಸಿದ್ದಲಿಂಗ ಸ್ವಾಮೀಜಿ, ಹುಲಿಯೂರುದುರ್ಗ ಸಿದ್ದಲಿಂಗ ಸ್ವಾಮೀಜಿ, ಎಡೆಯೂರು ದೇವಸ್ಥಾನದ ಕಾರ್ಯನಿವರ್ಹಣಾಧಿಕಾರಿ ಲಕ್ಷಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಸ್.ಆರ್.ಚಿಕ್ಕಣ್ಣ, ಪಂಡಿತ್, ವೈ.ವಿ.ಗೋವಿಂದರಾಜು, ದಾಸೋಹ ಸಮಿತಿ ನಿಟ್ಟೂರು ಬೆಲ್ಲದ ಪ್ರಕಾಶ್, ಕಗ್ಗೆರೆ ದೇವಸ್ಥಾನದ ವ್ಯವಸ್ಥಾಪಕ ಹನುಮಂತಯ್ಯ ಹಾಜರಿದ್ದರು.
ವಿಶೇಷ ಭೋಜನ: ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದ ಭಕ್ತರ ಆಯೋಜಿಸಿದ್ದ ಅರವಟಿಂಕೆಯಲ್ಲಿ ಕೊತ್ತಲಸಿನ ಸಾರು, ಮುದ್ದೆ, ಪಾಯಸ, ಅನ್ನ ಮಜ್ಜಿಗೆ ವಿಶೇಷ ಭೋಜನಕ್ಕೆ ಭಕ್ತರು ಮುಗಿಬಿದ್ದು, ಸರತಿ ಸಾಲಿನಲ್ಲಿ ನಿಂತು ಕೊತ್ತಲಸಿನ ಸಾರು ಸವಿದರು. ಪ್ರತಿವರ್ಷ ಕೊತ್ತಗೆರೆ ಗ್ರಾಮದ ಭಕ್ತರು ಈ ವಿಶೇಷ ಕೊತ್ತಲಸಿನ ಸಾರಿನ ಖ್ಯಾದ್ಯ ತಯಾರಿಸಿ ಭಕ್ತರಿಗೆ ಬಡಿಸುವುದು ವಿಶೇಷವಾಗಿದೆ.