ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಅಂತಾರಾಷ್ಟ್ರೀಯ ನಾಯಕರೂ ಕಂಬನಿ ಮಿಡಿದಿದ್ದಾರೆ. ಅಮೆರಿಕ ಮತ್ತು ರಷ್ಯಾ ಪ್ರತಿಕ್ರಿಯಿಸಿ, “”ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ವಾಜಪೇಯಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ, ಶಾಂತಿ ಕಾಪಾಡಿಕೊಳ್ಳಲು ಹೆಚ್ಚಿನ ಮಹತ್ವ ನೀಡುತ್ತಿದ್ದರು” ಎಂದಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ರಾಷ್ಟ್ರಪತಿ ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು, ಸಂತಾಪ ಸಂದೇಶ ರವಾನಿಸಿದ್ದಾರೆ. ಅಟಲ್ “ಅತ್ಯುತ್ತಮ ರಾಜಕಾರಣಿ’ ಎಂದು ಗುಣಗಾನ ಮಾಡಿರುವ ಪುಟಿನ್, “”ವಾಜಪೇಯಿ ಅವರು ವಿಶ್ವಮನ್ನಣೆಗೆ ಪಾತ್ರರಾದವರು. ರಾಜತಾಂತ್ರಿಕತೆಯನ್ನೂ ಮೀರಿದ ಸ್ನೇಹ ಅವರದ್ದು. ರಷ್ಯಾ ಮತ್ತು ಭಾರತದ ನಡುವೆ ವಿಶೇಷವಾದ ಬಾಂಧವ್ಯ ವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದು” ಎಂದಿದ್ದಾರೆ.
ಅಮೆರಿಕ ವಿದೇಶಾಂಗ ಸಚಿವ ಮೈಕೆಲ್ ಪೋಂಪಿಯೋ ಸಂದೇಶ ರವಾನಿಸಿ, “”ಅಮೆರಿಕ ಮತ್ತು ಭಾರತದ ನಡುವಿನ ಆರ್ಥಿಕ ಮತ್ತು ರಕ್ಷಣಾ ಕ್ಷೇತ್ರದ ಬಾಂಧವ್ಯ ವೃದ್ಧಿಸಲು ಅಪಾರ ಕೊಡುಗೆ ನೀಡಿದವರು ಅಟಲ್. ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಇರಬೇಕೆನ್ನುವ ದೂರದೃಷ್ಟಿ ಹೊಂದಿದ್ದರು. ಇಂದು ಉಭಯ ದೇಶಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ವಾಜಪೇಯಿ ಅವರ ಅಂದಿನ ಪ್ರಯತ್ನವೂ ಕಾರಣ” ಎಂದಿದ್ದಾರೆ.
ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅಬ್ದುಲ್ಲಾ , ಮಾರಿಷಸ್ ಪ್ರಧಾನಿ ಜಗೌ°ಥ್, ಇಸ್ರೇಲ್ ವಿದೇಶಾಂಗ ಸಚಿವಾಲಯದ ಪ್ರಧಾನ ನಿರ್ದೇಶಕ ಯುವಾಲ್ ರೊಟೆಮ್ ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ.
ಪಾಕ್ ನಾಯಕರ ಕಂಬನಿ: ಇದೇ ವೇಳೆ, ಅಟಲ್‌ಜೀ ನಿಧನಕ್ಕೆ ಪಾಕಿಸ್ತಾನ ಸರ್ಕಾರ ಮತ್ತು ಅಲ್ಲಿನ ಪ್ರಮುಖ ನಾಯಕರು ಕಂಬನಿ ಮಿಡಿದಿದ್ದಾರೆ. ಪ್ರಾದೇಶಿಕ ಸಹಕಾರ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯ ಸುಧಾರಿಸುವ ನಿಟ್ಟಿನಲ್ಲಿ ವಾಜಪೇಯಿ ಶ್ರಮ ಮತ್ತು ಬದಲಾವಣೆ ತರಲು ಮುಂದಾಗಿದ್ದರು ಎಂದು ಅವರು ಪ್ರತಿಪಾದಿಸಿದ್ದಾರೆ.
ಭಾರತ-ಪಾಕಿಸ್ತಾನ ಬಾಂಧವ್ಯ ವೃದ್ಧಿಸುವಲ್ಲಿ ವಾಜಪೇಯಿ ಸಾಹೆಬ್‌ರ ರಾಜತಾಂತ್ರಿಕ ನಡೆ ಮರೆಯುವಂಥದ್ದಲ್ಲ. ವಾಜಪೇಯಿ ಅವರ ನಿಧನ ದಕ್ಷಿಣ ಏಷ್ಯಾದ ರಾಜಕಾರಣಕ್ಕೆ ಆದ ದೊಡ್ಡ ಆಘಾತ.
ಇಮ್ರಾನ್ ಖಾನ್, ನಿಯೋಜಿತ ಪಾಕ್ ಪ್ರಧಾನಿ
ಚೀನಾದಿಂದ ಗೌರವ
1998ರ ಪರಮಾಣು ಪರೀಕ್ಷೆಯು ಚೀನಾದ ಕೋಪಕ್ಕೆ ಕಾರಣವಾಗಿದ್ದರೂ, 2003ರಲ್ಲಿ ಎರಡೂ ದೇಶಗಳ ನಡುವೆ ಹೊಸ ಬಾಂಧವ್ಯ ಸೃಷ್ಟಿಸುವಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರ ಮಹತ್ವದ್ದು. ಅವರನ್ನು ನಾವು ಭಾರತದ ಚೀನಾ ನೀತಿಯ ಶಿಲ್ಪಿ ಎಂದು ಪರಿಗಣಿಸುತ್ತೇವೆ ಎಂದು ಚೀನಾದ ವಿದ್ವಾಂಸರು ಹೇಳಿದ್ದಾರೆ.