Advertisement
ಬೃಹತ್ ತಂತ್ರಜ್ಞಾನ ಕ್ಲಸ್ಟರ್ ವಿಭಾಗದಲ್ಲಿ ವಿಶ್ವ ಸಂಸ್ಥೆ ಪ್ರಕಟಿಸಿದ ರ್‍ಯಾಂಕಿಂಗ್‌ನಲ್ಲಿ ಬೆಂಗಳೂರಿಗೆ ನಾಲ್ಕನೇ ಲಭಿಸಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ವಿಶ್ವದ ಟಾಪ್-5 ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೂಡಿಕೆದಾರರನ್ನು ಆಕರ್ಷಿಸಲು 2020ರ ಜನವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
Related Articles
Advertisement
ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಭಾರತದ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡುಬಂದಿದ್ದರೆ, ಅದರಲ್ಲಿ ರಾಜ್ಯದ ಕೊಡುಗೆಯೂ ಇದೆ. ನಾನು ಸುಮಾರು ಐದು ವರ್ಷದಿಂದ ಇಲ್ಲಿ ನೆಲೆಸಿದ್ದೇನೆ. ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ಇಲ್ಲಿದೆ. ನಿಮಗೆ (ಉದ್ಯಮಿಗಳಿಗೆ) ಅಗತ್ಯ ಇರುವ ಸೌಕರ್ಯಗಳನ್ನು ಕೇಳುವುದು ನಿಮ್ಮ ಹಕ್ಕು; ಅದನ್ನು ಪೂರೈಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಸಚಿವರಾದ ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್, ಸಾ.ರಾ. ಮಹೇಶ್, ಸಂಸದ ಪಿ.ಸಿ. ಮೋಹನ್, ಮೈಸೂರಿನ ಯುವರಾಜ ಯುದುವೀರ ಒಡೆಯರ್, ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
10 ಬಿಲಿಯನ್ ಡಾಲರ್ ಬಂಡವಾಳ ನಿರೀಕ್ಷೆ: ಮೂರು ದಿನಗಳ ಅಸಿಯಾನ ವ್ಯಾಪಾರ ಮೇಳದಲ್ಲಿ 10 ಬಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ ಎಂದು ಅಸಿಯಾನ ನೋಡಲ್ ಅಧಿಕಾರಿ ಎಸ್. ಸಂಪತ್ ರಾಮನ್ ತಿಳಿಸಿದರು. ಮೇಳದಲ್ಲಿ 10 ದೇಶಗಳಿಂದ ಸುಮಾರು 130 ಪ್ರತಿನಿಧಿಗಳು ಹಾಗೂ ದೇಶದ ನಾನಾ ಭಾಗಗಳಿಂದ 600ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಮೂರೂ ದಿನಗಳಲ್ಲಿ 50ಕ್ಕೂ ಅಧಿಕ ಬಿ2ಬಿ (ಉದ್ಯಮಿಗಳ ಸಭೆ) ಸಭೆಗಳು ನಡೆಯಲಿದ್ದು, ಮೂಲಸೌಕರ್ಯ, ರಕ್ಷಣಾ ವಲಯ, ವೈಮಾನಿಕ ಕ್ಷೇತ್ರ, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮಷಿನ್ ಲರ್ನಿಂಗ್, ಐಒಟಿ (ಇಂಟರ್‌ನೆಟ್ ಆಫ್ ಥಿಂಗ್ಸ್), ರೋಬೋಟಿಕ್ಸ್ ಮತ್ತಿತರ ಕ್ಷೇತ್ರಗಳಲ್ಲಿ 10 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಆಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಸರ್ಕಾರ ಸ್ಥಿರ ಮತ್ತು ಸಶಕ್ತ: ಸಮ್ಮಿಶ್ರ ಸರ್ಕಾರ ಸ್ಥಿರ ಮತ್ತು ಸಶಕ್ತವಾಗಿದೆ ಹಾಗೂ ಇರುತ್ತದೆ ಎಂದು ಕೈಗಾರಿಕೋದ್ಯಮಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ಕಳೆದ ಎಂಟು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರವು ಉದ್ಯಮಿಗಳಿಗೆ ಪೂರಕವಾದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಮ್ಮ ಸರ್ಕಾರ ಸ್ಥಿರ ಮತ್ತು ಸಶಕ್ತವಾಗಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದರು.