ಹೊಸದಿಲ್ಲಿ/ವಿಶ್ವಸಂಸ್ಥೆ: ಜಗತ್ತಿನಲ್ಲಿ ಕೊರೊನಾ ಸೋಂಕು ಸಂಖ್ಯೆ ಮುಂದಿನ ವಾರ 20 ಕೋಟಿ ದಾಟಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಇದಲ್ಲದೆ, ಸೋಂಕಿನ ಡೆಲ್ಟಾ ರೂಪಾಂತರ 135 ರಾಷ್ಟ್ರಗಳಲ್ಲಿ ದೃಢಪಟ್ಟಿದೆ ಎಂದು ಹೇಳಿದೆ. ಬೀಟಾ ರೂಪಾಂತರಿ ಸೋಂಕು 132 ದೇಶಗಳಲ್ಲಿ ಮತ್ತು ಗಾಮಾ ಮಾದರಿಯ ಸೋಂಕು 81 ದೇಶಗಳಲ್ಲಿ ದೃಢಪಟ್ಟಿದೆ. ಜಗತ್ತಿನಲ್ಲಿ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಆತಂಕಕಾರಿಯಾಗಿದೆ ಎಂದು ತಿಳಿಸಿದೆ. ಜು.26ರಿಂದ ಆ.1ರ ನಡುವಿನ ವಾರದಲ್ಲಿ 4 ಮಿಲಿಯ ಸೋಂಕು ದೃಢಪಟ್ಟಿದೆ ಎಂದು ಡಬ್ಲ್ಯು ಎಚ್‌ಒ ತನ್ನ ವರದಿಯಲ್ಲಿ ಉಲ್ಲೇಖೀಸಿದೆ.
ಇದಲ್ಲದೆ, ಆಲ್ಫಾ ರೂಪಾಂತರಿ ಪ್ರಕರಣಗಳು 182 ದೇಶಗಳಲ್ಲಿ ದೃಢಪಟ್ಟಿದೆ ಎಂದೂ ವಿವರಿಸಿದೆ. ಒಂದು ತಿಂಗಳ ಅಂತರವನ್ನು ಗಮನಿಸಿದರೆ, ಒಟ್ಟಾರೆ ಸೋಂಕು ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ, ಮುಂದಿನ ವಾರದ ವೇಳೆಗೆ ಒಟ್ಟು ಸೋಂಕು ಸಂಖ್ಯೆ 20 ಕೋಟಿ ದಾಟಲಿದೆ ಎಂದು ಅದು ಹೇಳಿಕೊಂಡಿದೆ. ದಕ್ಷಿಣ- ಪೂರ್ವ ಏಷ್ಯಾ ಪ್ರದೇಶದಲ್ಲಿ ವಾರಕ್ಕೆ ಸಂಬಂಧಿಸಿದಂತೆ ಶೇ.9ರಷ್ಟು ಕೇಸುಗಳು ಹೆಚ್ಚಾಗಿವೆ. ಈ ವ್ಯಾಪ್ತಿಯ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಹೆಚ್ಚಾಗಿದೆ. ಭಾರತದಲ್ಲಿ 2,83, 923 ಹೊಸ ಕೇಸುಗಳು ದೃಢಪಟ್ಟಿವೆ ಎಂದು ಅದು ಎಚ್ಚರಿಸಿದೆ
ಕೊಂಚ ಏರಿಕೆ: ಮಂಗಳವಾರದಿಂದ ಬುಧವಾರದ ಅವಧಿ ಯಲ್ಲಿ ದೇಶದಲ್ಲಿ 42,982 ಸೋಂಕು ಪ್ರಕರಣಗಳು ದೃಢಪಟ್ಟಿವೆ ಮತ್ತು 533 ಮಂದಿ ಅಸುನೀಗಿದ್ದಾರೆ. ಸೋಮವಾರದಿಂದ ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 357 ಕೇಸುಗಳಷ್ಟು ಹೆಚ್ಚಾಗಿವೆ. ಸಕ್ರಿಯ ಸೋಂಕುಗಳ ಸಂಖ್ಯೆ 4,11,076ಕ್ಕೆ ಏರಿಕೆಯಾಗಿವೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.97.37 ಆಗಿದೆ.
ಕೇರಳದಲ್ಲಿ: ಗುರುವಾರ ಒಂದೇ ದಿನ ಕೇರಳದಲ್ಲಿ 22,040 ಹೊಸ ಪ್ರಕರಣಗಳು ಮತ್ತು 117 ಮಂದಿ ಅಸುನೀಗಿದ್ದಾರೆ. ರಾಜ್ಯದಲ್ಲಿ 1,63,376 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ.