ಹೊಸದಿಲ್ಲಿ: ಸಮಕಾಲೀನ ಕ್ರಿಕೆಟಿನ ಸ್ಟಾರ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ನಿಸ್ಸಂಶಯವಾಗಿಯೂ ವಿರಾಟ್ ಕೊಹ್ಲಿಗೆ ಸಲ್ಲಬೇಕು. ಮೂರೂ ಮಾದರಿಯ ಕ್ರಿಕೆಟ್‌ಗಳಲ್ಲಿ ಕೊಹ್ಲಿ ರನ್ ಪ್ರವಾಹವನ್ನೇ ಹರಿಸುತ್ತಿದ್ದಾರೆ. ಆದರೆ “ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ಕ್ರಿಕೆಟ್ ಅಸೋಸಿಯೇನ್’ (ಎಫ್ಐಸಿಎ- ಫಿಕಾ) ಇದೇ ಮೊದಲ ಬಾರಿಗೆ ಪ್ರಕಟಿಸಿದ ಟಿ20 ಸಾಧಕರ ಟಾಪ್-10 ಯಾದಿಯಲ್ಲಿ ಕೊಹ್ಲಿ ಹೆಸರು ಮಾಯವಾಗಿದೆ. ಅವರಿಗೆ 13ನೇ ಸ್ಥಾನ ಲಭಿಸಿದೆ!
ಆಸ್ಟ್ರೇಲಿಯದ ಬಿಗ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ವೆಲ್ 786 ಅಂಕ ಗಳೊಂದಿಗೆ ಅಗ್ರಸ್ಥಾನ ಅಲಂಕರಿ ಸಿದ್ದು, ಇತ್ತೀಚಿನ ದಿನಗಳಲ್ಲಿ ಇನ್ನಿಂಗ್ಸ್ ಆರಂಭಿಸಿ ಸೈ ಅನಿಸಿಕೊಂಡ ವೆಸ್ಟ್ ಇಂಡೀಸಿನ ಸುನೀಲ್ ನಾರಾಯಣ್ ದ್ವಿತೀಯ ಸ್ಥಾನದಲ್ಲಿದ್ದಾರೆ (734). ಕ್ರಿಕೆಟಿಗರ ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಾಧನೆಯನ್ನು ಪರಿಗಣಿಸಿ ಫಿಕಾ ಈ ಯಾದಿಯನ್ನು ಪ್ರಕಟಿಸಿದೆ.
ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ, 50ಕ್ಕೂ ಹೆಚ್ಚಿನ ಬ್ಯಾಟಿಂಗ್ ಸರಾಸರಿ ಹೊಂದಿರುವ ವಿರಾಟ್ ಕೊಹ್ಲಿ “ಫಿಕಾ’ ಯಾದಿಯಲ್ಲಿ 679 ಅಂಕಗಳೊಂದಿಗೆ 13ರಷ್ಟು ಕೆಳ ಕ್ರಮಾಂಕದಲ್ಲಿದ್ದಾರೆ. ಅಂದರೆ ಡೇವಿಡ್ ವಿಲ್ಲಿ, ಶಾಹಿದ್ ಅಫ್ರಿದಿಗಿಂತಲೂ ಕೆಳಗಿನ ಸ್ಥಾನ. ಟಾಪ್-10 ಯಾದಿಯಲ್ಲಿ ಭಾರತದ ಯಾವುದೇ ಆಟಗಾರರಿಲ್ಲ. ಕ್ರಿಸ್ ಗೇಲ್ 9ನೇ, ಶೇನ್ ವಾಟ್ಸನ್ 10ನೇ ಸ್ಥಾನದಲ್ಲಿದ್ದಾರೆ. ಭಾರತದ ಕ್ರಿಕೆಟಿಗರು ಸದ್ಯ ಐಪಿಎಲ್ ಮತ್ತು ಸೀಮಿತ ಸಂಖ್ಯೆಯ ಟಿ20 ಅಂತಾರಾಷ್ಟ್ರೀಯ ಪಂದ್ಯಗಲ್ಲಷ್ಟೇ ಆಡು ತ್ತಿರುವುದರಿಂದ ಈ ಯಾದಿಯಲ್ಲಿ ಕಾಣಿಸಿಕೊಳ್ಳದಿರಲು ಮುಖ್ಯ ಕಾರಣ ಎನ್ನಲಾಗಿದೆ. “ಫಿಕಾ’ ವಿಶ್ವದ ಅಷ್ಟೂ ಟಿ20 ಕ್ರಿಕೆಟ್ ಲೀಗ್‌ಗಳನ್ನು ಪರಿಗಣಿಸಿ ಈ ಯಾದಿಯನ್ನು ಅಂತಿಮಗೊಳಿಸಿದೆ.
“ಫಿಕಾ’ ಟಾಪ್-10 ಟಿ20 ಕ್ರಿಕೆಟಿಗರು
1. ಗ್ಲೆನ್ ಮ್ಯಾಕ್ಸ್‌ವೆಲ್ (786), 2. ಸುನೀಲ್ ನಾರಾಯಣ್ (781), 3. ಕ್ರಿಸ್ ಮಾರಿಸ್ (734), 4. ಕೈರನ್ ಪೊಲಾರ್ಡ್ (730), 5. ಡೇವಿಡ್ ವಾರ್ನರ್ (729), 6. ಡ್ವೇನ್ ಬ್ರಾವೊ (725), 7. ಎಬಿ ಡಿ ವಿಲಿಯರ್ (723), 8. ಶೋಯಿಬ್ ಮಲಿಕ್ (722), 9. ಕ್ರಿಸ್ ಗೇಲ್ (700), 10. ಶೇನ್ ವಾಟ್ಸನ್ (697).