Advertisement

ನಮ್ಮೂರ ಜಾತ್ರೆಗೆ ಮದ್ದಿನ ಮೆರುಗು

12:48 PM Jan 16, 2018 | |

ವಿಜಯಪುರ: ಶತಮಾನೋತ್ಸವದ ಸಂಭ್ರಮದಲ್ಲಿರುವ ಐತಿಹಾಸಿಕ ವಿಜಯಪುರ ನಗರದ ಸಂಕ್ರಾತಿಯ ನಮ್ಮೂರ ಹಬ್ಬದಲ್ಲಿ ಸೋಮವಾರ ರಾತ್ರಿ ಬಾನಂಗಳದ ಕಾರ್ಮೋಡದಲ್ಲಿ ಸಿಡಿಯುತ್ತಿದ್ದ ಪಟಾಕಿ ರಂಗು ಬೆಳಕಿನ ಚಿತ್ತಾರ ವೈಭವ ಮೂಡಿಸಿತ್ತು.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ದೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಮದ್ದು ಸುಡುವ ಕಾರ್ಯಕ್ರಮದಲ್ಲಿ ಕವಿದ ಕತ್ತಲೆ ಮೋಡದಲ್ಲಿ ಬಗೆ ಬಗೆಯ ಸದ್ದು ಹಾಗೂ ವರ್ಣರಂಜಿತ ಚಿತ್ತಾರದ ಬೆಳಕಿನ ಮೋಡಿ ಮಾಡುತ್ತಿದ್ದವು. ಮದ್ದು ಸುಡುವ ವೈಭವ ಕಣ್ತುಂಬಿಕೊಳ್ಳಲು ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಮದ್ದು ಸುಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಲೇ, ಪ್ರತಿ ಮದ್ದಿನ ವರ್ಣರಂಜಿತ ಸೋಟದ ಸಂದರ್ಭದಲ್ಲಿ ನೆರೆದ ಜನರಿಂದಲೂ ಮಕ್ಕಳಿಂದ ಕೇಳಿ ಬರುತ್ತಿದ್ದ ಕೇಕೆ ಹಾಗೂ ಚಪ್ಪಾಳೆಗಳು ಮುಗಿಲು ಮುಟ್ಟಿದ್ದವು. 

ಸಿಡಿಯುತ್ತಿದ್ದ ಪಟಾಕಿಗಳು ಸುಂಯ್‌ ಗುಡುತ್ತ ಬಾನಿಗೆ ನೆಗೆಯುತ್ತ ಬಣ್ಣದ ರಂಗೋಲಿ ಬಿಡಿಸುತ್ತಿದ್ದವು. ಬೆಂಕಿಯಲ್ಲಿಯೇ ಅರಳಿದ ನಾನಾ ರೀತಿಯ ಚಕ್ರಗಳು, ತ್ರಿಶೂಲ, ದೇವಾಲಯ, ಕಾರಂಜಿ, ಸ್ವಾಗತ ಕಮಾನು, ಜಲಪಾತ ಪಟಾಕಿಯ ವಿಶಿಷ್ಟ ಚಿತ್ತಾರಗಳು ಕಣ್ಮನ ಸೆಳೆಯುತ್ತಿದ್ದವು. 

ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು. ಮಧ್ಯಾಹ್ನದಿಂದಲೇ ಜಿಲ್ಲಾ ಕ್ರೀಡಾಂಗಣದತ್ತ ಧಾವಿಸುತ್ತಿದ್ದ ಜನರು ಮದ್ದಿನ ರಂಗಿನಾಟ ವೀಕ್ಷಿಸಲು ಸ್ಥಳ ಹಿಡಿದುಕೊಂಡು ಕುಳಿತಿದ್ದರು. ಮತ್ತೂಂದೆಡೆ ಪರಿಸ್ಥಿತಿ ನಿಭಾಯಿಸಲು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಕಂಡುಬಂತು.

ಚಾಲನೆ: ಸಿದ್ದೇಶ್ವರ ರತ್ನ ಪ್ರಶಸ್ತಿ ವಿತರಣೆ ಹಾಗೂ ಮದ್ದು ಸುಡುವ ಸಮಾರಂಭಕ್ಕೆ ಎಸ್‌ಪಿ ಕುಲದೀಪ ಜೈನ್‌ ಚಾಲನೆ ನೀಡಿದರು. ಸಿದ್ದೇಶ್ವರ ಸಂಸ್ಥೆ ದ್ಯಕ್ಷ, ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಆಧ್ಯಕ್ಷತೆ ವಹಿಸಿದ್ದರು. ಶಾಸಕ ರಾಜು ಲಗೂರ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ಪಾಟೀಲ, ಸಹಾಯಕ ಆಯುಕ್ತ ಶಂಕರ ವಣಕ್ಯಾಳ, ಎಎಸ್‌ಪಿ ಶಿವಕುಮಾರ ಗುಣಾರಿ, ಶೈಲಜಾ ಪಾಟೀಲ ಯತ್ನಾಳ, ಸಂ.ಗು. ಸಜ್ಜನ ಇದ್ದರು.

Advertisement

ಸಿದ್ದೇಶ್ವರ ರತ್ನ ಪ್ರದಾನ ಹಿಂದೂಪರ ಹೋರಾಟಗಾರ ಪ್ರಮೋದ ಮುತಾಲಿಕ, ಸಮಾಜ ಸೇವಕ ದುಂಡಪ್ಪ
ಗುಡ್ಡೊಡಗಿ, ರವಿ ಕಿತ್ತೂರ, ಜಿಲ್ಲೆಯ ಮೊಟ್ಟ ಮೊದಲ ಮಹಿಳಾ ಪೈಲಟ್‌ ಪ್ರೀತಿ ಬಿರಾದಾರ, ಶಿಕ್ಷಣ ಕ್ಷೇತ್ರದ ಸಾಧನೆಗೆ ಬಸವರಾಜ ಕೌಲಗಿ, ಶಿವಾನಂದ ಕೆಲೂರ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮುಳವಾಡದ ಪರಗೊಂಡಪ್ಪ ಸಿದ್ದಾಪುರ, ಕಲಾ ಕ್ಷೇತ್ರದ ಸಾಧನೆಗಾಗಿ ಸಾರವಾಡದ ಶಿವನಗೌಡ ಕೋಟಿ, ಪ್ರಶಾಂತ ಚೌಧರಿ, ಕ್ರೀಡಾ ಕ್ಷೇತ್ರದಲ್ಲಿ ತೊನಶ್ಯಾಳದ
ಗಿರಿಮಲ್ಲಪ್ಪ ಉಮ್ಮವಗೋಳ, ಕ್ರೀಡೆ ಜೊತೆಗೆ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವ ಹುನ್ನೂರಿನ ರತನ ಮಠಪತಿ, ಕೃಷಿ ಸಾಧಕ ಬೆನಕನಹಳ್ಳಿಯ ರಾಜಶೇಖರ ನಿಂಬರಗಿ, ಎಸ್‌.ಎಚ್‌. ನಾಡಗೌಡ, ವೈದ್ಯಕೀಯ ಕ್ಷೇತ್ರದ
ಸಾಧನೆಗೆ ಸಿದ್ದಪ್ಪ ಪರಾಂಡೆ, ಪತ್ರಿಕಾ ಕ್ಷೇತ್ರದ ಸಾಧನೆಗಾಗಿ ಮಹೇಶ ಶಟಗಾರ, ಜಿ.ಎಸ್‌. ಕಮತರ, ಡಿ.ಬಿ. ನಾಗರಾಜ, ಕ್ಯಾಮೆರಾಮನ್‌ ಸಂಗಮೇಶ ಕುಂಬಾರ ಅವರಿಗೆ ಸಿದ್ದೇಶ್ವರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next