ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ದರ್ಬೆ ಪುತ್ತೂರು ಇಲ್ಲಿಯ ನೃತ್ಯಾಂತರಂಗ ವೇದಿಕೆಯ 75ನೇ ಸಂಚಿಕೆಯಲ್ಲಿ ವಿ| ಸುಮಂಗಲಾ ಗಿರೀಶ್‌ರವರು ನೃತ್ಯ ಪ್ರದರ್ಶಿಸಿದರು.
ಭರತನಾಟ್ಯದ ಮಾರ್ಗ ಪದ್ಧತಿಯಂತೆ ಪುಷ್ಪಾಂಜಲಿ ಯೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು. ಕುಮಾರ ವ್ಯಾಸನ ಗದುಗಿನ ಭಾರತದಿಂದ ಆಯ್ದ ಶ್ಲೋಕಕ್ಕೆ ಹಂಸಧ್ವನಿ ರಾಗ, ಆದಿ ತಾಳದಲ್ಲಿ ವಿಳಂಬ ಕಾಲದಲ್ಲಿ ರಚನೆಯಾದ ನೃತ್ಯ ಸುಂದರವಾಗಿ ಹಾಗೂ ಮನಸ್ಸು ಶಾಂತವಾಗುವ ರೀತಿಯಲ್ಲಿ ಆರಂಭ ನೀಡಿತು.
ಮುಂದಿನ ಪದ ವರ್ಣ ಬಾಲಕೃಷ್ಣನ ಕುರಿತಾದ ತೆಲುಗು ಸಾಹಿತ್ಯದಿಂದ ಕೂಡಿದ ನೃತ್ಯವಾಗಿತ್ತು. ಕೃಷ್ಣ ಎಂದೊಡನೆ ನಮ್ಮ ಗ್ರಹಿಕೆಗೆ ಸಿಗುವಂತಹ ಶೃಂಗಾರ, ರಾಧೆಯ ಜೊತೆಗಿನ ಸರಸ ಇತ್ಯಾದಿಗಳಿಂದ ಸ್ವಲ್ಪ ಭಿನ್ನವಾಗಿ ಬಾಲಕೃಷ್ಣನ ವಾತ್ಸಲ್ಯ, ಆತನ ತುಂಟತನ, ತಾಯಿಗೆ ಆತ ನೀಡಿದ ಕಾಟಗಳು ಇತ್ಯಾದಿಗಳನ್ನು ವರ್ಣದ ಸಂಚಾರಿಯಲ್ಲಿ ಕಲಾವಿದೆ ಅಮೋಘವಾಗಿ ಪ್ರದರ್ಶಿಸಿದ್ದಲ್ಲದೆ ಜತಿಗಳನ್ನು ಸಹ ಸುಂದರವಾಗಿ ಪ್ರಸ್ತುತ ಪಡಿಸಿದರು. ಬಾಲ್ಯದಲ್ಲಿಯೇ ಕೃಷ್ಣನ ಲೀಲೆಗಳಾದ ಪೂತನಿ ವಧೆ, ಕಂಸ ವಧೆಗಳಲ್ಲಿ ವೀರ ರಸವೂ ಪ್ರಕಟವಾಗಿ, ಕುಚೇಲನ ಪ್ರಸಂಗ ಮತ್ತು ಪಾರ್ಥ ಸಾರಥಿಯ ತನಕವೂ ಸಂಯೋಜಿಸಲ್ಪಟ್ಟಿದ್ದು, ಸಂಯೋಜಕರಾದ ವಿ| ದೀಪಕ್ ಕುಮಾರ್‌ರವರ ಸೃಜನಶೀಲತೆಯನ್ನು ಬಿಂಬಿಸಿತು.
ಮೂರನೇ ನೃತ್ಯಅಭಿನಯ ಪ್ರಧಾನವಾದ ಪದಮ್‌ನಲ್ಲಿ ಕಲಾವಿದೆ ಪಾತ್ರಕ್ಕೆ ನಿಜವಾದ ಜೀವ ತುಂಬಿದಂತಿತ್ತು. ಶಹನ ರಾಗ ಮಿಶ್ರಚಾಪು ತಾಳದಲ್ಲಿ ರಚಿಸಲ್ಪಟ್ಟ ನೃತ್ಯಕ್ಕೆ ಕಲಾವಿದೆ ನೈಜ ಮನೋಧರ್ಮದಿಂದ ಅಭಿನಯಿಸಿ ವೀಕ್ಷಕರೂ ಸಹ ಪಾತ್ರದೊಳಗೆ ಸೇರುವಂತೆ ಮಾಡಿದರು. ಮಾರ್ಗ ಪದ್ಧತಿಯಂತೆ ಕೊನೆಯದಾಗಿ ದರ್ಬಾರಿ ಕಾನದ ರಾಗ ಹಾಗೂ ಆದಿ ತಾಳದಲ್ಲಿ ಲಾಲ್ಗುಡಿ ಜಯರಾಮನ್‌ರವರಿಂದ ಸುಬ್ರಹ್ಮಣ್ಯ ದೇವರ ಕುರಿತಾಗಿ ರಚಿಸಲ್ಪಟ್ಟ ಸಾಹಿತ್ಯಕ್ಕೆ ಕಲಾವಿದೆ ನೀಡಿದ ತಿಲ್ಲಾನ ಪ್ರದರ್ಶನ ಅದ್ಭುತ ಮಂಗಳದಂತಿತ್ತು. ವಿ|ರಾಜನ್ ಪಯ್ಯನ್ನೂರುರವರು ಒಟ್ಟು ನೃತ್ಯವನ್ನು ಸುಂದರವಾಗಿಸುವಲ್ಲಿ ಮಧುರ ಮತ್ತು ಜತಿಗಳಲ್ಲಿ ಸಮಯೋಚಿತವಾಗಿ ಮೃದಂಗ ನುಡಿಸಿ ದರು. ಕೊಳಲಿನಲ್ಲಿ ವಿ|ರಾಜಗೋಪಾಲ್ ಕಾಂಞಂಗಾಡ್ ಇಂಪಾಗಿ ಮೋಹಕವಾಗಿಸಿದರು. ಹಾಡುಗಾರಿಕೆಯಲ್ಲಿ ಕಲಾಶಾಲೆಯ ಸಂಗೀತ ಗುರುಗಳಾದ ವಿ| ಪ್ರೀತಿಕಲಾ ಇವರ ಮಧುರ ಧ್ವನಿ ಒಟ್ಟು ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ನಟುವಾಂಗದಲ್ಲಿ ವಿ| ದೀಪಕ್ ಕುಮಾರ್‌ರವರು ಸಹಕರಿಸಿದರು.