Advertisement

ಗ್ಲಾಮರಸ್‌ ಆಗಿದ್ದರೆ ಮಾತ್ರ ಕಾಂಗ್ರೆಸ್‌ನಲ್ಲಿ ಅವಕಾಶ!

06:15 AM Jul 09, 2018 | Team Udayavani |

ಧಾರವಾಡ: ಗ್ಲಾಮರಸ್‌ ಆಗಿದ್ದರೆ ಮಾತ್ರ ಹೆಣ್ಣು ಮಕ್ಕಳಿಗೆ ಕಾಂಗ್ರೆಸ್‌ನಲ್ಲಿ ಅವಕಾಶಗಳು ಸಿಗಲು ಸಾಧ್ಯವೇ? ಇಂಥದೊಂದು ಪ್ರಶ್ನೆ ಕೇಳಿದ್ದು ಕಾಂಗ್ರೆಸ್‌ ಕಾರ್ಯಕರ್ತೆ ಅನಿತಾ ಗುಂಜಾಳ.

Advertisement

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಮ್ಮಿಕೊಂಡಿದ್ದ ಚುನಾವಣೆ ಒಳಗೆ ಮತ್ತು ಹೊರಗೆ ವಿಷಯ ಕುರಿತ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಹಿರಿಯ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತೆ ಅನಿತಾ ಈ ರೀತಿ ಪ್ರಶ್ನಿಸಿದಾಗ ಸಭೆಯಲ್ಲಿ ಸಂಚಲನವೇ ಉಂಟಾಯಿತು. ಕಾಂಗ್ರೆಸ್‌ ಪಕ್ಷಕ್ಕಾಗಿ 20 ವರ್ಷಗಳಿಂದ ನಾನು ದುಡಿಯುತ್ತಿದ್ದು, ಪಕ್ಷದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ. 

ಚುನಾವಣೆ ಸಮಯದಲ್ಲಿ ಬರೀ ಪ್ರಚಾರಕ್ಕೆ ಮಹಿಳೆಯರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಚಾರಕ್ಕೆ ಬಂದ ಮಹಿಳೆಯರಿಗೆ ಹಣ ನೀಡಲು ಶಾಸಕರೊಬ್ಬರು ರಾತ್ರಿವರೆಗೂ ಕಾಯಿಸಿದ್ದರು. ಇದಲ್ಲದೇ ಕುಡಿದ ನಶೆಯಲ್ಲಿ ಮುಖಂಡರೊಬ್ಬರು ಕೆಟ್ಟದಾಗಿ ಮಾತನಾಡಿದ್ದು, ಇಂತಹ ಸಾಕಷ್ಟು ಕೆಟ್ಟ ಘಟನೆಗಳು ಆಗುತ್ತವೆ. ಇದಕ್ಕೆ ಪರಿಹಾರ ಕೊಡಿಸಿ ಪಕ್ಷದ ಗೌರವ ಕಾಪಾಡುವಂತೆ ಅನಿತಾ ಅವರು ಮೋಟಮ್ಮ ಅವರಲ್ಲಿ ಮನವಿ ಮಾಡಿದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಇನ್ನೋರ್ವ ಕಾಂಗ್ರೆಸ್‌ ಕಾರ್ಯಕರ್ತೆ, ಪಕ್ಷದಲ್ಲಿ ಕೆಲಸ ಮಾಡುವ ಮಹಿಳೆಯರ ವರ್ತನೆ ಚೆನ್ನಾಗಿದ್ದು, ಸಭ್ಯರಾಗಿದ್ದರೆ ಯಾರೂ ಹೆದರಬೇಕಿಲ್ಲ. ಈವರೆಗೂ ನನಗೆ ಅಂತಹ ಯಾವುದೇ ಪ್ರಸಂಗ ಎದುರಾಗಿಲ್ಲ ಎಂದು ಪರೋಕ್ಷವಾಗಿ ಅನಿತಾ ಅವರಿಗೆ ಟಾಂಗ್‌ ನೀಡಿದರು.

ಇದಕ್ಕೆ ಉತ್ತರಿಸಿ ಮೋಟಮ್ಮ, ಪಕ್ಷ ಯಾವುದೇ ಇರಲಿ. ಇಂತಹ ಸನ್ನಿವೇಶ ಬಂದಾಗ ಒಗ್ಗಟ್ಟಾಗಿ ಮಹಿಳೆಯರು ಹೋರಾಡಬೇಕು. ಹಕ್ಕಿಗಾಗಿ ಹೋರಾಡುವ ಮೂಲಕ ಅಂಥವರಿಗೆ ಸವಾಲಾಗಿ ಮಹಿಳೆಯರು ನಿಲ್ಲಬೇಕು. ಅವಕಾಶ ಸಿಗಲಿ, ಸಿಗದಿರಲಿ ನಮ್ಮತನ ಉಳಿಸಿಕೊಂಡು ಸಾಧಿಸಿ ತೋರಿಸಬೇಕು ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next