Advertisement
1905ರ ಆಗಸ್ಟ್ 7ರಂದು ಕಲ್ಕತ್ತಾ (ಇಂದಿನ ಕೊಲ್ಕತ್ತಾ) ಪುರಸಭೆಯಲ್ಲಿ ಪ್ರಾರಂಭವಾದ ಸ್ವದೇಶಿ ಚಳುವಳಿಯನ್ನು ಭಾರತದಲ್ಲಿ ಪ್ರತೀ ವರ್ಷವೂ ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನಾಚರಣೆಯ ಅಂಗವಾಗಿ ಬ್ರಿಟನ್ ನಲ್ಲಿ ನೆಲೆಸಿರುವ ಭಾರತದ 21 ರಾಜ್ಯಗಳ ಸುಮಾರು 500ಕ್ಕೂ ಹೆಚ್ಚು ಭಾರತೀಯ ನಾರಿಯರು ತಮ್ಮ ತಮ್ಮ ರಾಜ್ಯದ ವಿಶಿಷ್ಟ ಕೈಮಗ್ಗಗಳ ಸೀರೆಗಳಲ್ಲಿ, ಲಂಡನ್‌ನ ಪ್ರಮುಖ ಸ್ಥಳಗಳಾದ ಟ್ರಾಫಾಲ್ಗರ್ ಸ್ಕ್ವೇರ್, 10 ಡೌನಿಂಗ್ ಸ್ಟ್ರೀಟ್, ಪಾರ್ಲಿಮೆಂಟ್ ಸ್ಕ್ವೇರ್ ಗಳಲ್ಲಿ ಈ “ಸೀರೆ ನಡಿಗೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾರತದ ವಿವಿಧ ಪ್ರಾಂತಗಳ ಪ್ರಾದೇಶಿಕ ಕೈಮಗ್ಗಗಳ ಕಲೆಗಾರಿಕೆಯನ್ನು ಪ್ರತಿನಿಧಿಸುವ, ಪ್ರದರ್ಶಿಸುವ “ಸಾರೀ ವಾಕಾಥಾನ್” ಅಂದರೆ “ಸೀರೆ ನಡಿಗೆ’ಯು ಎಲ್ಲರ ಮನ ಸೆಳೆದಿತ್ತು. ಪುಟ್ಟ ಪುಟ್ಟ ಮನೆಗಳಲ್ಲಿ ಚಿಕ್ಕಚಿಕ್ಕ ಚರಕದಿಂದ ಹೊರಹೊಮ್ಮಿದ ನೂಲು, ಕೈಮಗ್ಗಗಳ ರಂಗು ರಂಗುರಂಗಿನ ಸೀರೆ ನೀರೆಯರ ಅಂದ ಹೆಚ್ಚಿಸಿತ್ತು.
Related Articles
Advertisement
ಒಂದೊಂದು ಸೀರೆಯ ನೆರಿಗೆಯಲ್ಲಿ, ಸೆರಗಿನಲ್ಲಿ ಒಂದೊಂದು ಕಥನವಿದೆ, ಇತಿಹಾಸವಿದೆ, ಬೆವರಿದೆ, ಹೋರಾಟವಿದೆ ಮತ್ತು ವಾತ್ಸಲ್ಯವೂ ಇದೆ. ಇತಿಹಾಸದ ಪುಟ ಕೆದಕಿದರೆ ನಮ್ಮ ಉತ್ತರ ಕರ್ನಾಟಕದ ಇಳಕಲ್ ಸೀರೆಯ ನೇಯ್ಗೆ 8ನೇ ಶತಮಾನದಿಂದ ಪ್ರಾರಂಭವಾಗಿ ಇಂದಿಗೂ ತನ್ನ ವೈಭವವನ್ನು ಉಳಿಸಿಕೊಂಡಿದೆ. ಹಾಗೆಯೇ ಗುಳೆದಗುಡ್ಡ ಖಣದ ಸೀರೆ, ಶಹಾಪುರ ಸೀರೆ, ಮೈಸೂರು ರೇಶ್ಮೆ ಸೀರೆ, ಉಡುಪಿ ಸೀರೆ, ಕಸೂತಿ ಸೀರೆ, ಗೋಮಿ ತೆನಿ ಸೀರೆ, ಮೊಳಕಾಲ್ಮೂರು ಸೀರೆ, ಲಂಬಾಣಿ ಸೀರೆಗಳು ಶತಮಾನಗಳಷ್ಟು ಪ್ರಾಚೀನವಾದರೂ ಏನೆಲ್ಲ ಏರಿಳಿತ ಕಂಡರೂ ಜಗ್ಗದೇ ಕುಗ್ಗದೇ ತನ್ನ ವೈಶಿಷ್ಟ್ಯವನ್ನು ಕಳೆದುಕೊಳ್ಳದೇ ಸಮಯದ ಜತೆಗೆ ಹೆಜ್ಜೆ ಹಾಕುತ್ತಿವೆ. ನಮ್ಮ ನಾಡಿನ ವಿವಿಧ ಕೈಮಗ್ಗಗಳ ಸೀರೆಗಳ ಅರಿವು ಮೂಡಿಸಲು ನಮ್ಮ ದೇಶದ ನೇಕಾರರನ್ನು ಪ್ರೋತ್ಸಾಹಿಸಲು ಅಂದು ಕನ್ನಡತಿಯರು ಭೌಗೋಳಿಕ ಸೂಚಕ ಹೊಂದಿರುವ ಇಂತಹ ಸೀರೆಗಳನ್ನು ಉಟ್ಟು ಹೆಮ್ಮೆಯಿಂದ ಉಬ್ಬಿದರು. ದಾರಿಯುದ್ದಕ್ಕೂ ನೆರೆದಿದ್ದ ಪ್ರೇಕ್ಷಕರು ಈ ನಡಿಗೆಗೆ ಉತ್ಸಾಹದಿಂದ, ಉಲ್ಲಾಸದಿಂದ ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಸಂಯೋಜಕಿಯರಾದ ಸರಿತಾ ರಾಹುಲ್, ನಿವೇದಿತಾ ದೇವರಾಜ್, ಮೀರಾ ಜಗದೀಶ್ ಹಾಗೂ ಕನ್ಯಾ ಕೆ.ಟಿ.ಯವರು 40 ಕನ್ನಡತಿಯರನ್ನು ಒಟ್ಟುಗೂಡಿಸಿ ಕರ್ನಾಟಕವನ್ನು ಪ್ರತಿನಿಧಿಸಿ ಈ “ಸೀರೆ ನಡಿಗೆ’ಯನ್ನು ಯಶಸ್ವಿಗೊಳಿಸಿದರು. ಅಮೂಲ್ಯ ಹೆಚ್.ಸಿ., ನಿಖೀತಾ ಭಟ್ ಮತ್ತು ಅಶ್ವಿನಿ ಮಠದ್ ಸಹಕರಿಸಿದರು.
ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಯ ಬಳಿ ಭಾರತದ ರಾಷ್ಟ್ರಗೀತೆ ಜನಗಣ ಮನ ಪ್ರತಿಧ್ವನಿಸಿತು. ಅನಂತರ ಕನ್ನಡತಿಯರು “ಬಾರಿಸು ಕನ್ನಡ ಡಿಂಡಿಮವ’ ಹಾಡಿಗೆ ಹೆಜ್ಜೆ ಹಾಕಿ ಕರ್ನಾಟಕದ ಕಂಪನ್ನು ವಿದೇಶದಲ್ಲಿಯೂ ಪಸರಿಸಿದರು. ಈ ಸೀರೆನಡಿಗೆ ಭಾರತದ ಹೈಕಮಿಷನ್‌ನ ನಂದಿತಸಾಹು ಸಾಕ್ಷಿಯಾದರು. ಭಾರತದ ಮೂಲೆ ಮೂಲೆಗಳಿಂದ ಬಂದು ಈ ಆಂಗ್ಲ ದೇಶದಲ್ಲಿ ನೆಲೆಸಿರುವ ನಮ್ಮ ನೀರೆಯರು ತಮ್ಮ ತವರು ದೇಶದ ನೇಕಾರರ ಕೈಮಗ್ಗಗಳಲ್ಲಿ ಅರಳಿದ ಸುಂದರ ಸೊಬಗಿನ ಸೀರೆಗಳನ್ನು ಉಟ್ಟು ಲಂಡನ್‌ನ ದಾರಿಗಳಲ್ಲಿ ಹೆಜ್ಜೆ ಹಾಕುತ್ತ ಇಂದಿನ ಪೀಳಿಗೆಗೆ ಮತ್ತು ಅಲ್ಲಿಯ ನಾಗರಿಕರಿಗೆ ನೇಕಾರರ ಜೀವನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.