ಗೋಪೇಶ್ವರ್/ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಶುಕ್ರವಾರ(ಏ.23) ರಾತ್ರಿ ಭಾರೀ ಪ್ರಮಾಣದ ನಿರ್ಗಲ್ಲು ಸ್ಫೋಟ ಸಂಭವಿಸಿದೆ. ಆದರೆ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.
ಉತ್ತರಾಖಂಡ್ ಚಮೋಲಿಯಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಜನರಿಗೆ ನೆರವು ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಚಮೋಲಿಯ ನಿತಿ ಕಣಿವೆಯ ಮಲಾರಿ ಸಮೀಪದ ಸುಮ್ನಾ ಚೌಕಿ ನಡುವೆ ಈ ನಿರ್ಗಲ್ಲು ಸ್ಫೋಟ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿ ಬಂದಿರುವುದಾಗಿ ಬಿಆರ್ ಒ (ಬಾರ್ಡರ್ ರೋಡ್ಸ್ ಆರ್ಗನೈಸೇಶನ್) ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಸಂಭವಿಸಿದ ಸಾವು, ನೋವು ನಷ್ಟದ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ವರದಿ ಹೇಳಿದೆ.
ಭಾರೀ ಹಿಮಪಾತದಿಂದಾಗಿ ಈವರೆಗೂ ಆ ಪ್ರದೇಶದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಸುಮ್ನಾ ಚೌಕಿ ಪ್ರದೇಶದಲ್ಲಿ ನಿರ್ಗಲ್ಲು ಸ್ಫೋಟದಿಂದ ಭಾರೀ ಕುಸಿತ ಸಂಭವಿಸಿರುವುದನ್ನು ಬಿಆರ್ ಒ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಫೆಬ್ರುವರಿಯಲ್ಲಿ ಚಮೋಲಿ ಜಿಲ್ಲೆಯ ಜೋಶಿಮಠ ಸೇರಿದಂತೆ ಹಲವೆಡೆ ಸಂಭವಿಸಿದ ಭಾರೀ ನಿರ್ಗಲ್ಲು ಸ್ಫೋಟಕ್ಕೆ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮೂಲಭೂತ ಸೌಕರ್ಯ ಸೇರಿದಂತೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿತ್ತು.