Advertisement
ಗುರುವಾರ ಕೊವಿಡ್ ಕೇರ್ ಸೆಂಟರ್ ಗೆ ದಿಢೀರ್ ಭೇಟಿ ನೀಡಿದಾಗ ಸೋಂಕಿಗೆ ಹೆದರಿರುವ ವೈದ್ಯರು, ಕಂದಾಯ, ಬಿಬಿಎಂಪಿ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯದಿಂದ ರೋಗಿಗಳು ನರಕ ಸದೃಶ್ಯ ಯಾತನೆ ಅನುಭವಿಸುತ್ತಿರುವುದನ್ನು ಕಣ್ಣಾರೆ ಕಂಡ ಅವರು, ಅಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆರೈಕೆ ಕೇಂದ್ರದಲ್ಲೇ ಸೋಂಕಿತರ ಜತೆ ವಿಡಿಯೋ ಸಂವಾದ ನಡೆಸಿದ ಉಪ ಮುಖ್ಯಮಂತ್ರಿ ಮುಂದೆ ತಮಗಾಗುತ್ತಿರುವ ತೊಂದರೆಗಳನ್ನು ರೋಗಿಗಳು ಎಳೆಎಳೆಯಾಗಿ ಬಿಡಿಸಿಟ್ಟರು. ವೈದ್ಯರು ಒಳಕ್ಕೇ ಬರುತ್ತಿಲ್ಲ. ನಮ್ಮ ಯಾವುದೇ ಸಮಸ್ಯೆಗೂ ಸ್ಪಂದಿಸುತ್ತಿಲ್ಲ. ಪ್ರಶ್ನೆಗಳಿಗೆ ಉತ್ತರ ಕೊಡುತ್ತಿಲ್ಲ. ನಮ್ಮನ್ನು ತೀರಾ ನಿರ್ಲಕ್ಷ್ಯ, ಅಸಡ್ಡೆಯಿಂದ ನೋಡಲಾಗುತ್ತಿದೆ ಎಂದು ಕಣ್ಣೀರು ಹಾಕಿದರು. ಇದೆಲ್ಲವನ್ನು ಕೇಳಿ ಆಘಾತಕ್ಕೊಳಗಾದ ಡಿಸಿಎಂ ಅಧಿಕಾರಿಗಳ ಮೇಲೆ ಕೆಂಡಾಮಂಡಲಗೊಂಡರು.
Related Articles
ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನಿಯೋಜನೆಗೊಂಡು ಜಿಕೆವಿಕೆ ಕೋವಿಡ್ ಕೇರ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಡಿಕಲ್ ನೋಡೆಲ್ ಅಧಿಕಾರಿ ಡಾ. ಸೌಮ್ಯಾ ಎಂಬುವವರು ಡಿಸಿಎಂ ಬಂದಾಗ ಅಲ್ಲಿರಲಿಲ್ಲ. ಸ್ವಲ್ಪಹೊತ್ತಿನ ನಂತರ ಬಂದ ಅವರನ್ನು ಡಿಸಿಎಂ ತೀವ್ರ ತರಾಟೆಗೆ ತೆಗೆದುಕೊಂಡರು. ಮುಖ್ಯ ವೈದ್ಯೆಯಾಗಿದ್ದರೂ ಇವರು ಕೇರ್ ಸೆಂಟರಿನ ಒಳಕ್ಕೇ ಹೋಗುತ್ತಿಲ್ಲವೆಂದು ಅಲ್ಲಿನ ರೋಗಿಗಳು ದೂರಿದರು. ಸಂಜೆ ಒಳಗಾಗಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ನಗರದ ಕೋವಿಡ್ ಉಸ್ತುವಾರಿ ಕೇಂದ್ರಗಳ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಡಿಸಿಎಂ ಸೂಚನೆ ನೀಡಿದ್ದಾರೆ.
Advertisement
ಹಾಗೆಯೇ, ಜಿಕೆವಿಕೆ ಕೋವಿಡ್ ಕೇಂದ್ರದ ವ್ಯವಸ್ಥಾಪಕ ಅಧಿಕಾರಿ ಆಗಿರುವ ತಹಸೀಲ್ದಾರ್ ಡಾ. ಗಣೇಶ್ , ಇಡೀ ಕೇಂದ್ರದ ಸಂಪೂರ್ಣ ಉಸ್ತುವಾರಿಯೂ ಆಗಿರುವ ಬಿಬಿಎಂಪಿ ಜಂಟಿ ಆಯುಕ್ತ ಅಶೋಕ್ ಅವರಿಗೂ ಎಚ್ಚರಿಕೆ ನೀಡಿದರು.ಇದೇ ಕ್ಯಾಂಪಸ್ಸಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿನ ಮತ್ತೂಂದು ಆರೈಕೆ ಕೇಂದ್ರ ಉತ್ತಮವಾಗಿದ್ದು, ಅಲ್ಲಿನ ವ್ಯವಸ್ಥೆ ಬಗ್ಗೆ ಡಿಸಿಎಂ ತೃಪ್ತಿ ವ್ಯಕ್ತಪಡಿಸಿದರು. ವೈದ್ಯರು, ನರ್ಷ್ ಗಳು, ಸ್ವತ್ಛತಾ ಸಿಬ್ಬಂದಿ, ಊಟ, ಔಷಧಿ, ಚಿಕಿತ್ಸೆ ಯಾವುದರ ಬಗ್ಗೆಯೂ ಅಲ್ಲಿ ದೂರುಗಳು ಬರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರನ್ನು ಡಿಸಿಎಂ ಅಶ್ವತ್ಥ ನಾರಾಯಣ್ ಶ್ಲಾಘಿಸಿದರು. ಜ್ಞಾನಭಾರತಿಯಲ್ಲಿ ಆರೈಕೆ ಕೇಂದ್ರ:
ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ಸ್ಥಾಪನೆ ಮಾಡಲಾಗಿರುವ ನೂತನ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗುರುವಾರದಿಂದಲೇ ರೋಗಿಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಇಲ್ಲಿ ಸಕಲ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಭಾಗದಲ್ಲಿ ಪಾಸೀಟೀವ್ ಬಂದವರನ್ನು ಇಲ್ಲಿ ದಾಖಲು ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ:
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡದ, ಪರಿಸ್ಥಿತಿ ದುರ್ಲಾಭ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗಿದೆ. ಈಗಾಗಲೇ ವಿಕ್ರಂ ಆಸ್ಪತ್ರೆ, ಜಯನಗರದ ಅಪೋಲೋ ಆಸ್ಪತ್ರೆಗೆ ನೊಟೀಸ್ ನೀಡಲಾಗಿದೆ. ಇನ್ನು ಕೆಲ ಆಸ್ಪತ್ರೆಗಳು ರೋಗಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜತೆಗೆ ಸರಕಾರಕ್ಕೆ ನೀಡಬೇಕಾದ ಶೇ.50ರಷ್ಟು ಬೇಡ್’ಗಳನ್ನು ನೀಡದೇ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಸರಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದೆ. ಇಂಥ ಆಸ್ಪತ್ರೆಗಳ ಮಾನ್ಯತೆ ರದ್ದು ಮಾಡುವುದರ ಜತೆಗೆ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗುತ್ತಿದೆ ಎಂದು ಹೇಳಿದರು.