ಸೇಡಂ: ವಾಹನ ದಟ್ಟಣೆಯಿಂದ ಗುಲಬರ್ಗಾ-ಕೊಡಂಗಲ್ ರಸ್ತೆ ಇಂದು ನರಕದ ಹೆಬ್ಟಾಗಿಲಾಗಿ ಮಾರ್ಪಟ್ಟಿದೆ. ಜಿ.ಕೆ.ರಸ್ತೆಗೆ ಅಂಟಿಕೊಂಡಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್‌ಗೆ ಪ್ರತಿನಿತ್ಯ ಹತ್ತಾರು ಲಾರಿಗಳು ಡೀಸೆಲ್ ತುಂಬಿಸಿಕೊಳ್ಳಲು ಬರುತ್ತಿವೆ. ಬಂಕ್‌ನಲ್ಲಿ ಸರಿಯಾದ ಸ್ಥಳಾವಕಾಶ ಇಲ್ಲದ ಕಾರಣ ರಾಜ್ಯ ಹೆದ್ದಾರಿ (ವಾಗರಿ ರಿಬ್ಬನಪಲ್ಲಿ) ಜಿಕೆ ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ಇದೆ. ಇದರಿಂದ ದ್ವಿಚಕ್ರ ಮತ್ತು ಕಾರು ಚಾಲಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಹೈದ್ರಾಬಾದ್‌ನಿಂದ ಕಲಬುರಗಿ, ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ನಿತ್ಯ ನಿಲ್ಲುವ ಲಾರಿಗಳಿಂದ ಟ್ರಾಫಿಕ್ ಕಿರಿಕಿರಿ ಒಂದೆಡೆಯಾದರೆ, ಮತ್ತೂಂದೆಡೆ ಸಾವು-ನೋವುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಎಚ್‌ಪಿ ಪೆಟ್ರೋಲ್ ಬಂಕ್ ಪಕ್ಕದಲ್ಲೇ ಊಡಗಿ ರಸ್ತೆ, ಎದುರಿಗೆ ರಿಂಗ್ ರಸ್ತೆ, ಎಡಕ್ಕೆ ಕಲಬುರಗಿ ರಸ್ತೆ ಮತ್ತು ಬಲಕ್ಕೆ ಹೈದ್ರಾಬಾದ್‌ಗೆ ಹೋಗುವ ರಸ್ತೆ ಇದೆ. ರಸ್ತೆಯಲ್ಲೇ ಲಾರಿಗಳು ನಿಲ್ಲುವುದರಿಂದ ಎದುರು-ಬದುರಾಗುವ ವಾಹನ ಸವಾರರಿಗೆ ಕಣ್ಣು ಕಟ್ಟಿದಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎನ್ನುವುದು ಸ್ಥಳೀಯರ ಆರೋಪ. ಪಟ್ಟಣದ ಪ್ರದೇಶವಾದ್ದರಿಂದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಬೈಕ್ ಸವಾರರು ಮತ್ತು ಪಾದಚಾರಿಗಳು ಸಂಚರಿಸಲೆಂದೇ ಸೇವಾ ರಸ್ತೆ (ಸರ್ವಿಸ್ ರೋಡ್) ನಿರ್ಮಿಸಲಾಗಿದೆ. ಆದರೆ ಟ್ಯಾಕ್ಸಿ ಜೀಪ್, ಟಂಟಂ, ಕಾರು, ಲಾರಿ ಮತ್ತು ಜೆಸಿಬಿಗಳು ಅತಿಕ್ರಮಿಸಿದ್ದು, ಜನರ ಸಮಸ್ಯೆಗೆ ಕ್ಯಾರೆ ಎನ್ನುತ್ತಿಲ್ಲ.
ಪೊಲೀಸರ ಮೌನ: ಟ್ರಾಫಿಕ್ ಸಮಸ್ಯೆಯಿಂದ ಪ್ರಯಾಣಿಕರು ಮತ್ತು ವಾಹನ ಚಾಲಕರು ಪ್ರತಿನಿತ್ಯ ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ ಪೊಲೀಸ್ ಇಲಾಖೆ ಮೌನ ವಹಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ವಿಸ್ ರಸ್ತೆಗಳಲ್ಲಿ ಲಾರಿ ಮತ್ತು ಜೆಸಿಬಿ ಚಾಲಕರು ಗೂಂಡಾ ವರ್ತನೆ ತೋರುತ್ತಿದ್ದಾರೆ. ರಸ್ತೆಗಳನ್ನು ಅತಿಕ್ರಮಿಸಿಕೊಂಡು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟಿಸಬೇಕಾಗುತ್ತದೆ.
ಶರಣು ಬೋಳದ್, ನಿವಾಸಿ, ಸೇಡಂ
ಈ ರಸ್ತೆಯಲ್ಲಿ ಬೈಕ್ ಸವಾರರು, ಪಾದಚಾರಿಗಳು ಜೀವ ಕೈಯಲ್ಲಿಟ್ಟುಕೊಂಡು ರಸ್ತೆಯಲ್ಲಿ ಸಂಚರಿಸುವಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ದೊಡ್ಡ ದೊಡ್ಡ ಲಾರಿಗಳಿಂದ ಅನಾಹುತಗಳು ಕಟ್ಟಿಟ್ಟ ಬುತ್ತಿ. ಶೀಘ್ರವೇ ಕ್ರಮ ಕೈಗೊಂಡರೆ ಮುಂದಾಗುವ ಅನಾಹುತ ತಪ್ಪಿಸಬಹುದಾಗಿದೆ.
ಜಗದೀಶ ಕೋಡ್ಲಾ, ನಿವಾಸಿ, ಸೇಡಂ
ಟ್ರಾಫಿಕ್ ಸಮಸ್ಯೆ ಕುರಿತು ಮಾಹಿತಿ ಪಡೆಯುತ್ತೇನೆ. ಎಲ್ಲೆಂದರಲ್ಲಿ ನಿಲ್ಲುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರ ತೊಂದರೆ ಪರಿಹರಿಸುವ ನಿಟ್ಟಿನಲ್ಲಿ ಸೂಚಿಸುತ್ತೇನೆ.
ಶಂಕರಗೌಡ ಪಾಟೀಲ, ಸಿಪಿಐ ಸೇಡಂ
ಶಿವಕುಮಾರ ನಿಡಗುಂದಾ