ಡಾರ್ಜಿಲಿಂಗ್, ಪಶ್ಚಿಮ ಬಂಗಾಲ : ಸರಕಾರಿ ಕಚೇರಿಗಳನ್ನು ಮುಚ್ಚಿಸುವ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಪ್ರವರ್ತಿತ ಬಂದ್ ಚಳವಳಿ ಇಂದು ಬೆಳಗ್ಗೆ ಆರಂಭಗೊಂಡಿದೆ. ಕಿಚ್ಚುಡುವಿಕೆಯಲ್ಲಿ ತೊಡಗಿಕೊಂಡಿದ್ದ ಎಂಟು ಮಂದಿ ಶಂಕಿತ ಜಿಜೆಎಂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಗಿ ಭದ್ರತೆಯ ನಡುವೆ ಜಿಜೆಎಂ ಪ್ರವರ್ತಿತ ಬಂದ್ ಇಂದು ಆರಂಭಗೊಂಡ ಪ್ರಯುಕ್ತ ಪ್ರಖ್ಯಾತ ಹಿಲ್ ಸ್ಟೇಶನ್ ಆಗಿರುವ ಡಾರ್ಜಿಲಿಂಗ್ ಸಂಪೂರ್ಣವಾಗಿ ಬೀಕೊ ಎನಿಸಿದೆ.
ಅನೇಕ ಹೊಟೇಲುಗಳು ಇಂದು ಮುಚ್ಚಿದ್ದವು; ಕೆಲವೇ ಕೆಲವು ವಾಹನಗಳು ರಸ್ತೆಗಿಳಿದಿದ್ದವು. ಪ್ರವಾಸಿ ರೈಲು ಕೂಟ ಇಂದು ಇಲ್ಲಿಂದ ಹೊರಡಲಿಲ್ಲ.
ಹಾಗಿದ್ದರೂ ಸಾರಿಗೆ ವಾಹನಗಳಿಗೆ ಮತ್ತು ಹೊಟೇಲುಗಳಿಗೆ ವಿನಾಯಿತಿ ನೀಡಾಗಿದೆ ಎಂದು ಹೇಳಲಾಗಿದೆ. ಅಂತೆಯೇ ಶಾಲೆ, ಕಾಲೇಜುಗಳಿಗೂ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ.
ಪ್ರತ್ಯೇಕ ಗೋರ್ಖಾಲ್ಯಾಂಡ್ ರಾಜ್ಯ ರಚನೆಯನ್ನು ಆಗ್ರಹಿಸುವ ಚಳವಳಿಗೆ ಮರು ಜೀವ ನೀಡಿರುವ ಜಿಜೆಎಂ ಇಂದಿನಿಂದ ಬಂದ್ ಮುಷ್ಕರಕ್ಕೆ ಕರೆ ನೀಡಿದೆ. ಫೂಲ್ ಬಜಾರ್ ಪ್ರದೇಶದಲ್ಲಿರುವ ಬೀಜಾಂಬರಿ ಬ್ಲಾಕ್‌ನಲ್ಲಿನ ಬಿಡಿಓ ಕಾರ್ಯಾಲಯಕ್ಕೆ ಬೆಂಕಿ ಹಚ್ಚಲು ಮುಂದಾದ ಸುಮಾರು 8 ಮಂದಿ ಶಂಕಿತ ಜಿಜೆಎಂ ಕಾರ್ಯಕರ್ತರನ್ನು ತಾವು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಗ್ನಿ ಶಾಮಕ ದಳದವರು ತತ್‌ಕ್ಷಣ ಸ್ಥಳಕ್ಕೆ ಧಾವಿಸಿ ಬಂದದ್ದರಿಂದ ಬೆಂಕಿಯನ್ನು ಸಕಾಲಿಕವಾಗಿ ನಂದಿಸಲಾಗಿದೆ.
ಅಹಿತಕರ ಘಟನೆಗಳು ನಡೆಯಬಹುದಾದ್ದರಿಂದ ಪ್ರವಾಸಿಗರು ಈ ಹಿಲ್ ಸ್ಟೇಶನ್‌ನಿಂದ ಹೊರ ಹೋಗಬೇಕು ಎಂದು ಜಿಜೆಎಂ ಅಧ್ಯಕ್ಷ ಬಿಮಲ್ ಗುರುಂಗ್ ಹೇಳಿದ್ದಾರೆ.