Advertisement

ನೀವಿಷ್ಟು ಕೊಟ್ರೆ ಸಾಕು, ಎಲ್ಲಾ ನಮ್ದೇ..ಎಲ್ಲಾ ನಮ್ದೇ!

09:17 AM Jun 17, 2019 | Team Udayavani |

ಧಾರವಾಡ: ಪಠ್ಯಪುಸ್ತಕ ನಾವೇ ಕೊಡ್ತೇವೆ..ನೋಟ್ಬುಕ್ಕೂ ನಾವೇ ಕೊಡ್ತೇವೆ..ಸಮವಸ್ತ್ರ, ಬೂಟು, ಸಾಕ್ಸ್‌ ಎಲ್ಲವೂ ನಾವೇ ಕೊಡ್ತೇವೆ..ಜಸ್ಟ್‌ ನೀವಿಷ್ಟು ಹಣ ಕೊಟ್ರೆ ಸಾಕು ಎಲ್ಲಾ ನಮ್ಮದೇ..ಎಲ್ಲಾ ನಮ್ಮದೇ…

Advertisement

ಶಿಕ್ಷಣ ಕಾಶಿ ಧಾರವಾಡ ಜಿಲ್ಲೆಯಲ್ಲಿನ ಖಾಸಗಿ ಶಾಲೆಗಳ ಹಕೀಕತ್‌ ಇದು. ಹೌದು. ಕೆಲವೇ ವರ್ಷಗಳ ಹಿಂದಷ್ಟೇ ಪೋಷಕರು ಮಾರ್ಕೇಟಿನಿಂದ ತರುತ್ತಿದ್ದ ಹೊಸ ನೋಟು ಪುಸ್ತಕ, ಸೀಸ, ಪೆನ್ಸಿಲ್, ಪೆನ್‌,ಪಾಟೀ ಚೀಲದೊಂದಿಗೆ ಮಾನ್ಸೂನ್‌ ಮಳೆಯಲ್ಲಿ ಮಕ್ಕಳು ಶಾಲಾರಂಭಕ್ಕೆ ಮುನ್ನುಡಿ ಬರೆಯುತ್ತಿದ್ದರು. ಇದೀಗ ಪೋಷಕರಿಗೆ ಯಾವುದೇ ಕಷ್ಟವಿಲ್ಲ, ಎಲ್ಲವನ್ನೂ ಶಿಕ್ಷಣ ಸಂಸ್ಥೆಗಳೇ ಮಾಡುತ್ತಿವೆ.

ಇಷ್ಟೇ ಆಗಿದ್ದರೆ ನಡೀತಿತ್ತು ಆದರೆ ಕಡಿಮೆ ಗುಣಮಟ್ಟದ ಸಮವಸ್ತ್ರ, ಪಠ್ಯಪರಿಕರಗಳನ್ನು ನೀಡಿ ಶಾಲಾ ಆಡಳಿತ ಮಂಡಳಿಗಳು ಹಣ ಮಾಡುತ್ತಿವೆಯೇ?ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯೂ ಈಗ ತಲೆಕೆಡಿಸಿಕೊಂಡಂತಿದೆ.

ಜಿಲ್ಲೆಯಲ್ಲಿ ಅದರಲ್ಲೂ ಅವಳಿ ನಗರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಾಯಿ ಕೊಡೆಯಂತೆ ತಲೆ ಎತ್ತಿರುವ 67 ಅನುದಾನಿತ ಶಾಲೆ ಮತ್ತು ಪಿಯು ಕಾಲೇಜುಗಳು ಪೋಷಕರಿಂದ ನೇರವಾಗಿ ಹಣ ಪಡೆದು ಸಮವಸ್ತ್ರ, ನೋಟ್ ಪುಸ್ತಕ, ಬೂಟು ಮತ್ತು ಸಾಕ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುತ್ತಿವೆ. ಉತ್ತಮ ಗುಣಮಟ್ಟವಿಲ್ಲದ ಸಮವಸ್ತ್ರ, ಸಾಕ್ಸ್‌, ಶೂ ಮತ್ತು ನೋಟ್ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಕೆಲ ಆಡಳಿತ ಮಂಡಳಿಗಳು ಇದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯಿಂದ 2500-4000 ರೂ.ಗಳಿಗೂ ಹಣ ಪಡೆಯುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಸಮವಸ್ತ್ರಗಳು ಕೇವಲ 1500 ರೂ.ಗಳ ಒಳಗೆ ಲಭ್ಯವಿದ್ದರೂ, ಆಡಳಿತ ಮಂಡಳಿ ನೇರವಾಗಿ ಪೋಷಕರಿಂದ ಹಣ ಪಡೆದು ಇವುಗಳನ್ನು ಪೂರೈಸುತ್ತಿವೆ. ಈ ಬಗ್ಗೆ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಡಳಿತ ಮಂಡಳಿಗಳಿಗೆ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸದಂತೆ ತಾಕೀತು ಮಾಡಿದೆ.

ತಾಕೀತು ಮಾಡಿದ ಡಿಡಿಪಿಐ: ಖಾಸಗಿ ಮತ್ತು ಅನುದಾನಿತ ಶಾಲೆಗಳು ಪಠ್ಯಪುಸ್ತಕ, ನೋಟ್ಪುಸ್ತಕ, ಸಮವಸ್ತ್ರ ಖರೀದಿಸಿ ಶಾಲಾ ವಿದ್ಯಾರ್ಥಿಗಳಿಗೆ ನೇರವಾಗಿ ವಿತರಿಸಿ ಸಾರ್ವಜನಿಕರಿಂದ ಹಣ ಕೀಳುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಇದನ್ನು ಶಿಕ್ಷಣ ಇಲಾಖೆ ನಿಷೇಧಿಸಿ, ಶಾಲಾ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದೆ.

Advertisement

ಧಾರವಾಡ ಜಿಲ್ಲೆಯ ಸುಮಾರು 129ಕ್ಕೂ ಅಧಿಕ ಖಾಸಗಿ, ಅನುದಾನಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಜಿಲ್ಲಾ ಶಿಕ್ಷಣ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, ಇಂತಹ ಪ್ರಕರಣಗಳು ನಡೆದಿದ್ದು ಸಾಬೀತಾದರೆ ಶಾಲೆಗಳ ನೋಂದಣಿಯನ್ನೇ ರದ್ದು ಪಡಿಸುವ ಎಚ್ಚರಿಕೆ ನೀಡಿದ್ದಾರೆ. ಇನ್ನು ಪೋಷಕರಿಗೆ ಇಂತಹದೇ ಅಂಗಡಿಗಳಲ್ಲಿ ಬಟ್ಟೆ, ಪಠ್ಯಪುಸ್ತಕ ಮತ್ತು ಪರಿಕರಗಳನ್ನು ಖರೀದಿಸುವಂತೆ ಹೇಳುವಂತಿಲ್ಲ. ಫಲಕಗಳನ್ನು ಹಾಕುವಂತಿಲ್ಲ. ಈ ನಿಯಮ ಮೀರಿದ್ದು ಕಂಡು ಬಂದರೆ ತಕ್ಷಣವೇ ಕ್ರಮ ಖಂಡಿತ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದ್ದಾರೆ.

ಕಿರು ವ್ಯಾಪಾರಿಗಳ ಹೊಟ್ಟೆಗೆ ಬರೆ: ಖಾಸಗಿ ಆಡಳಿತ ಮಂಡಳಿಯ ಹಣದ ದಾಹಕ್ಕೆ ಪೋಷಕರು ಮಾತ್ರವಲ್ಲ, ಚಿಕ್ಕಪುಟ್ಟ ಪುಸ್ತಕ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿ ವರ್ಷ ಶಾಲೆ ಆರಂಭಗೊಳ್ಳುವ ಮೇ, ಜೂನ್‌ ತಿಂಗಳಿನಲ್ಲಿ ನಡೆಯುವ ಪುಸ್ತಕ ಮಾರಾಟ,ಬಟ್ಟೆ ಮಾರಾಟ, ಶೂ ಮತ್ತು ಸಾಕ್ಸ್‌ ಮಾರಾಟಗಾರರು ಒಂದಿಷ್ಟು ವ್ಯಾಪಾರದಿಂದ ಜೀವನ ಕಟ್ಟಿಕೊಳ್ಳುತ್ತಿದ್ದರು. ಆಡಳಿತ ಮಂಡಳಿಗಳೇ ನೇರವಾಗಿ ಇವುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವುದರಿಂದ ಅವರ ವ್ಯಾಪಾರ ಕುಸಿದು ಅವರು ಬಾಯಿ ಬಿಡುವಂತಾಗಿದೆ. ಜಿಲ್ಲೆಯಲ್ಲಿ 122ಕ್ಕೂ ಅಧಿಕ ಸಣ್ಣ ಸಣ್ಣ ಶಾಲಾ ಪಠ್ಯ, ಪರಿಕರಗಳ ಮಾರಾಟ ಮಳಿಗೆಗಳಿದ್ದು,ಅವರೆಲ್ಲರೂ ಆಡಳಿತ ಮಂಡಳಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಲಿಖೀತ ದೂರು ಸಲ್ಲಿಸಬಹುದು:

ಎಲ್ಲಾ ನಮ್ಮದೇ…ಎಲ್ಲಾ ನಮ್ಮದೇ… ಮಾಫಿಯಾ ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಕುಂದಗೋಳ, ನವಲಗುಂದ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ ಯಂತಹ ಪಟ್ಟಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆರಂಭಗೊಂಡಿದೆ. ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಖಾಸಗಿ ಶಾಲೆಗಳಲ್ಲೂ ಇದೆ. ಶಾಲಾ ಆಡಳಿತ ಮಂಡಳಿ ಮತ್ತು ಕೆಲವು ದೊಡ್ಡ ದೊಡ್ಡ ಬಟ್ಟೆ ವ್ಯಾಪಾರಸ್ಥರ ಮಧ್ಯೆ ಅಲಿಖೀತ ಒಪ್ಪಂದಗಳಿದ್ದು, ಇಂತಹದೇ ಅಂಗಡಿಯಲ್ಲಿ ತಮ್ಮ ಶಾಲೆಯ ಸಮವಸ್ತ್ರ ಸಿಕ್ಕುತ್ತವೆ. ಅಲ್ಲಿಯೇ ಕೊಂಡುಕೊಳ್ಳಬೇಕು ಎಂದು ಶಾಲೆಗಳ ಮುಖ್ಯಸ್ಥರು ಪೋಷಕರಿಗೆ ಒತ್ತಾಯಿಸುತ್ತಿದ್ದಾರೆ. ಆದರೆ ಈ ಕುರಿತು ಪೋಷಕರು ಡಿಡಿಪಿಐ ಮತ್ತು ಡಿಡಿಪಿಯು ಅವರಿಗೆ ಲಿಖೀತ ದೂರು ಸಲ್ಲಿಸಬಹುದಾಗಿದೆ.
•ಬಸವರಾಜ ಹೊಂಗಲ್
Advertisement

Udayavani is now on Telegram. Click here to join our channel and stay updated with the latest news.

Next