Advertisement

ನಮಗೊಂದು ಅವಕಾಶ ಕೊಡಿ: ಎಚ್‌ಡಿಕೆ

06:05 PM Mar 16, 2018 | |

ಸಿದ್ದಾಪುರ: ಈವರೆಗೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಮತದಾರರು ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ. ನಮಗೂ ಈ ಬಾರಿ ಅವಕಾಶ ಕೊಡಿ. ರಾಜ್ಯವನ್ನು ಕತ್ತಲೆಯಿಂದ ಬೆಳಕಿನತ್ತ ಕರೆದೊಯ್ಯಲು ಅನುವು  ಮಾಡಿಕೊಡಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಿನಂತಿಸಿದರು.

Advertisement

ಅವರು ಪಟ್ಟಣದ ನೆಹರೂ ಮೈದಾನದಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದರು. ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆಯಿಂದ ನಾನು ಶ್ರಮಿಸುತ್ತಿಲ್ಲ. ಈಗ ಎರಡನೇ ಜನ್ಮ ಪಡೆದು ಬಂದಿದ್ದೇನೆ. ಹೃದಯ ಚಿಕಿತ್ಸೆ ನಂತರವೂ ರಾಜ್ಯದೆಲ್ಲೆಡೆ ಓಡಾಡುತ್ತಿದ್ದೇನೆ. ಪಕ್ಷವನ್ನು ಅಧಿ ಕಾರಕ್ಕೆ ತರಬೇಕು ಎನ್ನುವುದು ಮಾತ್ರವಲ್ಲ. ಆಡಳಿತ ನಡೆಸಲು ಅವಕಾಶ ಕೊಟ್ಟು ಲಕ್ಷಾಂತರ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಎನ್ನುವುದು ಮುಖ್ಯ ಕಾರಣ ಎಂದರು.

ನಾವು ಅಧಿ ಕಾರಕ್ಕೆ ಬಂದರೆ ಜನರ ನಡುವೆ ಇದ್ದು ಕೆಲಸ ಮಾಡುತ್ತೇವೆ. ಮುಂದೆ ನಮ್ಮದು ಜನರ ಸರಕಾರವಾಗಿರುತ್ತದೆ. 
ಸಿದ್ದರಾಮಯ್ಯ ಹೇಳುವಂತೆ ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಿಲ್ಲ. ಎಲ್ಲಿಯವರೆಗೆ ದುಡಿವ ಕೈಗಳಿಗೆ ಕೆಲಸ
ದೊರೆಯುವದಿಲ್ಲವೋ, ನಾಲ್ಕು ಮಂದಿ ಕುಟುಂಬದ ಆದಾಯ ಕನಿಷ್ಠ 15 ಸಾವಿರ ರೂ.ಗಳಿಗಿಂತ ಹೆಚ್ಚು ಆಗಲ್ಲವೋ
ಅಲ್ಲಿಯ ತನಕ ಪರಿಸ್ಥಿತಿ ಬದಲಾಗುವುದಿಲ್ಲ. ಕಡಿಮೆ ಬೆಲೆಗೆ ಅಕ್ಕಿ ಕೊಡೋದನ್ನ ಜಾರಿಗೆ ತಂದವರು ರಾಮಕೃಷ್ಣ ಹೆಗಡೆ.
ಕಾಂಗ್ರೆಸ್‌ ಸರಕಾರ ಕಡಿಮೆ ಬೆಲೆಗೆ ಅಕ್ಕಿ ಕೊಟ್ಟು ಸಾರಾಯಿ ಬೆಲೆ ಹೆಚ್ಚಿಸಿ ಜನರನ್ನು ವಂಚಿಸುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಈ ಜಿಲ್ಲೆಯ ಜ್ವಲಂತ ಅರಣ್ಯ ಅತಿಕ್ರಮಣ ಸಮಸ್ಯೆಯನ್ನು ಒಂದು ವಾರ ಜಿಲ್ಲೆಯಲ್ಲೇ ಇದ್ದು ಬಗೆಹರಿಸುತ್ತೇನೆ. 24 ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದರು.

ಜಿಲ್ಲೆಯಲ್ಲಿ ನಡೆದ ಗಲಭೆಗೆ ಕಾಂಗ್ರೆಸ್‌, ಬಿಜೆಪಿ ಎರಡೂ ಕಾರಣ. ನಾನು ಇಲ್ಲಿಗೆ ಸಮಾಜ ಒಡೆಯಲು ಬಂದಿಲ್ಲ. ಬೆಂಕಿ ಹಚ್ಚಲು ಬಂದಿಲ್ಲ ಎಂದರು. ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ, ಶಾಸಕ ಮಧು ಬಂಗಾರಪ್ಪ ಮಾತನಾಡಿ ಕಾಂಗ್ರೆಸ್‌ ಸರಕಾರ ಸಾಲಮನ್ನಾ ಮಾಡಿದೆ ಅನ್ನುತ್ತಾರೆ. ಈವರೆಗೆ ಯಾವುದೇ ಸೊಸೈಟಿಗೆ ಸಾಲಮನ್ನಾ ಹಣ ಹೋಗಿಲ್ಲ. ಜೂನ್‌ ನಲ್ಲಿ ಹಣಸಂದಾಯ ಮಾಡ್ತೀವಿ ಅನ್ನುತ್ತಾರೆ. ಆಗ ಸಿದ್ಧರಾಮಯ್ಯ ಇರುತ್ತಾರಾ? ಎಂದು ಪ್ರಶ್ನಿಸಿದರು. ಜೆಡಿಎಸ್‌ ಮುಖಂಡರಾದ ಬಸವರಾಜ ಹೊರಟ್ಟಿ,
ಮರಿತಿಬ್ಬೇಗೌಡ, ನಿಯೋಜಿತ ಅಭ್ಯರ್ಥಿಗಳಾದ ಶಶಿಭೂಷಣ ಹೆಗಡೆ, ಆನಂದ ಅಸ್ನೋಟಿಕರ್‌, ಬಿಎಸ್ಪಿ ಜಿಲ್ಲಾಧ್ಯಕ್ಷ ಸಂತೋಷ ಜೋಗಳೇಕರ್‌ ಮಾತನಾಡಿದರು. ಇನಾಯತುಲ್ಲಾ ಶಾಬಂದ್ರಿ, ಸೈಯದ್‌ ಅಲ್ತಾಪ್‌, ತಿಮ್ಮಪ್ಪ ಎಂ.ಕೆ. ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಬಿ.ಆರ್‌. ನಾಯ್ಕ ಸ್ವಾಗತಿಸಿದರು. ತಾಲೂಕಾಧ್ಯಕ್ಷ ಎಸ್‌.ಕೆ. ನಾಯ್ಕ ವಂದಿಸಿದರು.

ಅನಂತಕುಮಾರ ಮಾತಿಗೆ ಟೀಕೆ
ಇಲ್ಲಿಯ ಸಂಸದ ಅನಂತಕುಮಾರ ಹೆಗಡೆಯವರಿಗೆ ಭಗವಂತ ಅವಕಾಶ ಕೊಟ್ಟಿದ್ದಾನೆ. ಕೇಂದ್ರ ಸಚಿವರಾಗಿ ಜಿಲ್ಲೆಯ ಸಮಸ್ಯೆಯಾದ ಅರಣ್ಯ ಅತಿಕ್ರಮಣ ಸಮಸ್ಯೆಗೆ ಪರಿಹಾರ ನೀಡಲು ಅವರಿಗೆ ಸಾಧ್ಯವಾಗಿಲ್ಲವೇ? ಕೆಲಸಕ್ಕೆ ಬಾರದ ಕೆಟ್ಟ ಭಾಷೆಯಲ್ಲಿ ಮಾತನಾಡಿದರೆ
ಮತ ದೊರೆಯುತ್ತದೆಯೇ? ಅವರ ನಾಲಗೆಯಿಂದ ಹೊರಡುವ ಪದಗಳೇ ಕೇಳಲಾಗದ್ದು. ನಾನೂ ಹಳ್ಳಿಯಿಂದ ಬಂದವನು. ಮನಸ್ಸು ಮಾಡಿದರೆ 2 ತಾಸು ಕೆಟ್ಟಪದಗಳಲ್ಲಿ ಬೈಯಬಲ್ಲೆ. ಆದರೆ ಅದರ ಅಗತ್ಯವಿಲ್ಲ. ರಾಜ್ಯದ ಬಿಜೆಪಿ ಮುಖಂಡರು ಭೋಗಿಗಳಾಗಿರೋದಕ್ಕೆ ಉತ್ತರ ಪ್ರದೇಶದಿಂದ ಯೋಗಿಯನ್ನ ಕರೆಸುತ್ತಿದ್ದಾರೆ. ನಮ್ಮ ಪಕ್ಷದ ಪ್ರಚಾರಕ್ಕೆ ದಿಲ್ಲಿಯಿಂದ ವರ್ಚಸ್ವಿ ನಾಯಕರು ಬರುತ್ತಿಲ್ಲ.
ನಾವೇ ಜನರ ಬಳಿಗೆ ಹೋಗುತ್ತೇವೆ ಎಂದರು. 

Advertisement

ನನಗೆ ಅಧಿಕಾರ ಮುಖ್ಯವಲ್ಲ
ಯಲ್ಲಾಪುರ: ನನಗೆ ಅಧಿಕಾರ ಮುಖ್ಯವಲ್ಲ. ನನ್ನ ಅನಾರೋಗ್ಯದ ಮಧ್ಯೆಯೂ ಜನರ ಭವಿಷ್ಯ ನಿರ್ಮಾಣ ಮಾಡುವುದೇ ನನ್ನ ಮೊದಲ ಆದ್ಯತೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಅವರು ಗುರುವಾರ ಸಂಜೆ ಪಟ್ಟಣದ ವೈಟಿಎಸ್‌ಎಸ್‌ ಮೈದಾನದಲ್ಲಿ ಕುಮಾರಪರ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬಡವರ
ಕಷ್ಟಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಸಿದ್ದರಾಮಯ್ಯರ ಹಾಗೆ ಎಷ್ಟು ವರ್ಷ ಅಧಿಕಾರದಲ್ಲಿದ್ದರೂ ಪ್ರಯೋಜನವಿಲ್ಲ ಎಂದ ಅವರು, ಇಲ್ಲಿಯ ಶಾಸಕರ ದುರಾಡಳಿತದಿಂದ ಜನ ಬೇಸತ್ತ ಬಗ್ಗೆ ನನಗೆ ನೋವಿದೆ. ಉತ್ತರಕನ್ನಡದ ಜನ ರಾಜ್ಯದ ಪ್ರಗತಿಗಾಗಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ಆದರೆ ಜಿಲ್ಲೆಯ ಜನತೆಗೆ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಸರ್ಕಾರಗಳು ನ್ಯಾಯ
ಒದಗಿಸಿಲ್ಲ. ನಾವು ರೈತರ ಸಾಲಮನ್ನಾವಷ್ಟೇ ಅಲ್ಲ. ಬೆಳೆ ಬೆಳೆಯಲು ಸಹಾಯ ನೀಡುತ್ತಿದ್ದೇವೆ. ಉಚಿತ ಬಿತ್ತನೆ ಬೀಜ ನೀಡುತ್ತೇವೆ. ಈ ಕುಮಾರಸ್ವಾಮಿ ಹೇಳಿದ್ದನ್ನು ಮಾಡುತ್ತಾನೆ ಎಂದ ಅವರು ರವೀಂದ್ರ ನಾಯಕರಂತಹ ನಾಯಕರನ್ನು ಜಿಲ್ಲೆಯಿಂದ ಆರಿಸಿಕಳಿಸಿ ಎಂದರು.

ಮತ ಪಡೆಯಲು ಧರ್ಮದ ಹೆಸರಿನಲ್ಲಿ ಅಮಾಯಕರ ಸಾವಿಗೆ ಕಾರಣವಾಗುವ ಬಿಜೆಪಿ ನಾಯಕರಿಗೆ ಅಧಿ ಕಾರ ನೀಡಬೇಡಿ ಎಂದ ಅವರು, ರಾಜ್ಯದ ಜನತೆಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಜೆಡಿಎಸ್‌ ಬೆಂಬಲಿಸಿ ಎಂದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಮಧು ಬಂಗಾರಪ್ಪ, ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ, ಕ್ಷೇತ್ರದ ಘೋಷಿತ ಅಭ್ಯರ್ಥಿ ಎ.ರವೀಂದ್ರ ನಾಯ್ಕ, ಮಾಜಿ ಸಚಿವ ಆನಂದ ಅಸ್ನೋಟಿಕರ್‌, ಶಿರಸಿಯ ಶಶಿಭೂಷಣ ಹೆಗಡೆ, ಅಲ್ಪಸಂಖ್ಯಾತ ವಿಭಾಗದ
ಅಧ್ಯಕ್ಷ ಸೈಯ್ಯದ್‌ ಅಲ್ತಾಫ್‌, ಪಿ.ಜಿ. ಭಟ್ಟ ಬರಗದ್ದೆ, ಅರುಣ ಗೊಂದಳಿ ಹಾಗೂ ವಿವಿಧ ಸ್ಥರದ ಪ್ರಮುಖರು ಉಪಸ್ಥಿತರಿದ್ದರು. ಜೆಡಿಎಸ್‌ ತಾಲೂಕು ಕಾರ್ಯಾಧ್ಯಕ್ಷ ಎನ್‌.ವಿ. ಭಟ್ಟ ದೇವಸ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಬಿ.ಆರ್‌. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಎಸ್‌.ವಿ. ಗಾಂವಾರ ವಾಗಳ್ಳಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next