ಕಲಬುರಗಿ: 62% ಹಿಂದುಳಿದ ವರ್ಗದವರಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದಾದರೂ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಬೇಕೆಂಬುದು ಒತ್ತಾಸೆಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದರು.
ಕೇಂದ್ರದ ಸಂಪುಟದಲ್ಲಿ 27 ಜನ ಹಿಂದುಳಿದವರು ಸಚಿವರಾಗಿದ್ದಾರೆ. ಏಕೆ ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯತೆ ನಿಡಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
150 ಸ್ಥಾನ ಬಿಜೆಪಿ ಗೆಲ್ಲಲು ಹಿಂದುಳಿದ ವರ್ಗದವರೆಲ್ಲರೂ ಪಣ ತೊಡೊಣ ಎಂದು ಜನಸ್ತೋಮಕ್ಕೆ ಕರೆ ನೀಡಿದರು.
ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ ಮಾತನಾಡಿ, ಜೆಡಿಎಸ್, ಕಾಂಗ್ರೆಸ್ ನೋಡಿದ್ದೇವೆ. ಯಾವ ರೀತಿ ನಡೆದುಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಿದ್ದರಾಮಯ್ಯ ಹಿಂದುಳಿದವರ ಬೆಂಬಲ ಪಡೆದು ನಂತರ ತುಳಿದರು. ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಕೇಂದ್ರದ ಹಿಂದುಳಿದ ವರ್ಗದ ಆಯೋಗಕ್ಕೆ ಸಂವಿದಾನದ ಸ್ಥಾನಮಾನ ನೀಡಿದ್ದೇ ಬಿಜೆಪಿ ಸರ್ಕಾರ. ಆದರೆ ಕಾಂಗ್ರೆಸ್ ಏಕೆ ನೀಡಲು ಮನಸ್ಸು ಮಾಡಲಿಲ್ಲ. ಹಿಂದುಳಿದ ವರ್ಗದವರೆಲ್ಲರೂ ಒಗ್ಗೂಡಿದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.