Advertisement

ಒಳ್ಳೆ ಮೀನೂಟ, ಸ್ವಲ್ಪ ಡ್ರಿಂಕ್ಸ್‌ ಕೊಡಿ

12:47 AM Mar 17, 2020 | Lakshmi GovindaRaj |

ಬೆಂಗಳೂರು: “ಒಳ್ಳೆ ಮೀನೂಟ, ಸ್ವಲ್ಪ ಡ್ರಿಂಕ್ಸ್‌ ಕೊಡಿ.. ನಿಮಗೆ ಏನ್‌ ಬೇಕು ಹೇಳ್ತಿನಿ’. ಇದು, ಸುಮಾರು ಎರಡು ದಶಕಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡು ಇದೀಗ ಸಿಸಿಬಿ ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ತನಿಖಾಧಿಕಾರಿ ಎದುರು ಇಟ್ಟ ಕೋರಿಕೆ. “ನಾನು ಮೂಲತಃ ಮಂಗ ಳೂರಿನವನು. ನನಗೆ ಮೀನೂಟ ಎಂದರೆ ಬಹಳ ಇಷ್ಟ.

Advertisement

ಜತೆಗೆ ಸ್ವಲ್ಪ ಡ್ರಿಂಕ್ಸ್‌ ಕೂಡ ಇರಬೇಕು. ಸೆನಗಲ್‌ನಲ್ಲಿ ಇದ್ದಾಗಲೂ ಮೀನೂಟ ತಪ್ಪದೇ ಮಾಡುತ್ತಿದ್ದೆ. ಕಳೆದ ಕೆಲ ದಿನಗಳಿಂದ ಆ ಊಟ ಇಲ್ಲದೇ ಇರಲು ಸಾಧ್ಯ ವಾಗುತ್ತಿಲ್ಲ. ದಯವಿಟ್ಟು ಇದೊಂದು ಕೋರಿಕೆ ಈಡೇರಿಸಿ.. ನಿಮಗೆ ಏನು ಮಾಹಿತಿ ಬೇಕು ನಾನು ಕೊಡುತ್ತೇನೆ’ ಎಂದು ತನಿಖಾಧಿಕಾರಿ ಎದುರು ರವಿ ಪೂಜಾರಿ ಬೇಡಿಕೊಂಡಿದ್ದಾನೆ.

ಅದರಂತೆ ಒಂದು ದಿನ ಮದ್ಯ ಹೊರತು ಪಡಿಸಿ ಆರೋಪಿಗೆ ಮೀನೂಟ ಕೂಡ ತಂದು ಕೊಡಲಾಗಿತ್ತು. ಅನಂತರ ಆತ ನಿತ್ಯ ಕೇಳಲು ಆರಂಭಿಸಿದ. ಹೀಗಾಗಿ ಈಗ ಎಲ್ಲವನ್ನು ನಿಲ್ಲಿಸಲಾಗಿದೆ. ಆದರೆ, ಇದೀಗ ಮತ್ತೂಂದು ವರಸೆ ತೆಗೆಯುತ್ತಿದ್ದು, ರಾತ್ರಿ ಹೊತ್ತು ನಿದ್ದೆ ಮಾಡದೆ ಕುಳಿತುಕೊಂಡಿರುತ್ತಾನೆ.

ಮಲಗು ಎಂದರೆ, ನಿದ್ದೆ ಬರುತ್ತಿಲ್ಲ. “ನನಗೆ ನಾನ್‌ವೆಜ್‌ ಮತ್ತು ಡ್ರಿಂಕ್ಸ್‌ ಕೊಟ್ಟರೆ ನಿದ್ದೆ ಬರುತ್ತೆ’ ಎಂದು ಪೊಲೀಸರನ್ನೇ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾನೆ. ಆರೋಪಿ ಸರಿ ಯಾಗಿ ನಿದ್ದೆ ಮಾಡದೆ ಕಣ್ಣುಗಳಲ್ಲೆಲ್ಲ ದಪ್ಪ ಆಗಿದ್ದವು. ಕೊನೆಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ಸುಧಾರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಭಾಷೆಯಲ್ಲೂ ಕಿರಿಕ್‌: “ಕನ್ನಡ ಭಾಷೆ ನನಗೆ ಅರ್ಥ ಆಗುತ್ತೆ. ಆದರೆ, ಸ್ಪಷ್ಟವಾಗಿ ಉತ್ತರಿಸಲು ಸಾಧ್ಯವಾಗು ತ್ತಿಲ್ಲ. ತುಳು ಭಾಷೆಯಲ್ಲಿ ಕೇಳಿ ಎಲ್ಲವನ್ನು ಹೇಳುತ್ತೇನೆ. ಇಂಗ್ಲಿಷ್‌ ಕೂಡ ಅರ್ಧಂಬರ್ಧ ಬರುತ್ತೆ. ಹಿಂದಿ ಸ್ಪಷ್ಟವಾಗಿ ಬರುತ್ತೆ’ ಎಂದು ತನಿಖಾಧಿಕಾರಿಗಳಿಗೆ ಆಯ್ಕೆ ನೀಡಿದ್ದ. ಅದರಿಂದ ಒಂದು ಕ್ಷಣ ಅಚ್ಚರಿಗೊಂಡ ತನಿಖಾಧಿಕಾರಿಗಳು, ತುಳು ಮತ್ತು ಹಿಂದಿ ಬರುವ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಿದ್ದಾರೆ.

Advertisement

ಆಗ ಎಲ್ಲ ವಿಚಾರಗಳನ್ನು ಹೇಳಿಕೊಂಡಿದ್ದಾನೆ. 16ನೇ ವರ್ಷಕ್ಕೆ ಅಪರಾಧ ಜಗತ್ತಿಗೆ ಕಾಲಿಟ್ಟೆ. ಕ್ರಿಕೆಟ್‌ ಆಡುವಾಗ ಎದುರಾಳಿ ಯುವಕನಿಗೆ ಬ್ಯಾಟ್‌ನಲ್ಲಿ ಹೊಡೆದಾಗಲೇ ತನಗೆ ತಾನೇ ಸಾಟಿ ಎಂದು ಭಾವಿಸಿ ಭೂಗತ ಜಗತ್ತಿನಲ್ಲಿ ಸೇರಿಕೊಂಡಿದ್ದಾಗಿ ಹೇಳಿಕೆ ನೀಡಿದ್ದು, ಅದನ್ನು ಚಿತ್ರೀಕರಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈಗೆ ನೋ: ಕರ್ನಾಟಕ ಪೊಲೀಸರು ಎಷ್ಟಾದರೂ ವಿಚಾರಣೆ ನಡೆಸಲಿ, ಸಂತೋಷದಿಂದ ಪ್ರತಿಕ್ರಿಯೆ ನೀಡುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಮುಂಬೈ ಪೊಲೀಸರ ವಶಕ್ಕೆ ತನ್ನನ್ನು ಕೊಡಬೇಡಿ. ಈ ಮೊದಲು ಮುಂಬೈನಲ್ಲಿದ್ದಾಗ 21 ಜನ ದಾವೂದ್‌ ಇಬ್ರಾಹಿಂ ಕಡೆಯವರನ್ನು ಕೊಲೆ ಮಾಡಿದ್ದೇನೆ. ನಾನು ಅಲ್ಲಿಗೆ ಹೋದರೆ, ದಾವೂದ್‌ ಕಡೆಯವರು ಎನ್‌ಕೌಂಟರ್‌ ಮಾಡುತ್ತಾರೆ. ಹೀಗಾಗಿ ಅಲ್ಲಿಗೆ ಕಳುಹಿಸಬೇಡಿ.

ಬೇಕಾದರೆ ಅವ್ರೆ ಇಲ್ಲಿಗೆ ಬಂದು ವಿಚಾರಣೆ ನಡೆಸಿದರೆ ಉತ್ತರಿಸುತ್ತೇನೆ. ಅಲ್ಲಿಗೆ ಮಾತ್ರ ಹೋಗುವುದಿಲ್ಲ ಎಂದು ತನಿಖಾಧಿಕಾರಿ ಎದುರು ಗೋಗರೆಯುತ್ತಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆ ಮುಕ್ತಾಯಗೊಳಿಸಿದ ಬಳಿಕ ಮುಂಬೈ ಪೊಲೀಸರ ಮನವಿ ಮೇರೆಗೆ ಅವರಿಗೆ ಹಸ್ತಾಂತರಿಸಲು ರಾಜ್ಯ ಪೊಲೀಸರು ನಿರ್ಧರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next